ಸಾಂದರ್ಭಿಕ ಚಿತ್ರ (Photo: Fair Observer) 

ವಾಷಿಂಗ್ಟನ್: ನವೆಂಬರ್ ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷವು ತೀವ್ರ ಹಿನ್ನಡೆ ಅನುಭವಿಸಲಿದೆ ಎಂದು ಹೊಸ ಸಮೀಕ್ಷೆಯೊಂದು ತಿಳಿಸಿದೆ. ಎಂಟು ಪ್ರಮುಖ ವಿಷಯಗಳ ಪೈಕಿ ಏಳರಲ್ಲಿ ಅಮೆರಿಕನ್ನರು ರಿಪಬ್ಲಿಕನ್ ಪಕ್ಷಕ್ಕಿಂತ ಡೆಮಾಕ್ರಟಿಕ್ ಪಕ್ಷವನ್ನು ಹೆಚ್ಚು ನಂಬುತ್ತಿದ್ದಾರೆ ಎಂದು ಸಮೀಕ್ಷೆಯ ವರದಿ ಬಹಿರಂಗಪಡಿಸಿದೆ.

ನ್ಯೂಯಾರ್ಕ್ ಟೈಮ್ಸ್ ಮತ್ತು ಸಿಯೆನಾ ಯೂನಿವರ್ಸಿಟಿ ನಡೆಸಿದ ಇತ್ತೀಚಿನ ಜಂಟಿ ಸಮೀಕ್ಷೆಯ ಪ್ರಕಾರ, ಚುನಾವಣೆಗೆ ಮುನ್ನ ಮತದಾರರು ಕಾಳಜಿ ವಹಿಸುತ್ತಿರುವ ಆರ್ಥಿಕತೆ ಮತ್ತು ವಲಸೆಯಂತಹ ಅತ್ಯಂತ ಪ್ರಮುಖ ವಿಷಯಗಳಲ್ಲಿ ರಿಪಬ್ಲಿಕನ್ನರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. 2024ರ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗೆಲುವಿಗೆ ಈ ಎರಡು ವಿಷಯಗಳು ಪ್ರಮುಖ ಕಾರಣಗಳಾಗಿದ್ದವು.

ಮಧ್ಯಂತರ ಚುನಾವಣೆಗೆ ಇನ್ನು 50 ದಿನಗಳಿಗಿಂತ ಕಡಿಮೆ ಸಮಯ ಬಾಕಿ ಇದ್ದು, ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್ ಎರಡರಲ್ಲೂ ಅಧಿಕಾರವನ್ನು ಮರಳಿ ಪಡೆಯುವ ಬಗ್ಗೆ ಡೆಮಾಕ್ರಟ್ ಗಳು ಹೆಚ್ಚಿನ ಭರವಸೆ ಹೊಂದಿದ್ದಾರೆ. ಐತಿಹಾಸಿಕವಾಗಿ, ಅಧ್ಯಕ್ಷರ ಜನಪ್ರಿಯತೆ ಕುಸಿದಾಗ ಮಧ್ಯಂತರ ಚುನಾವಣೆಯಲ್ಲಿ ಆಡಳಿತ ಪಕ್ಷವು ಸ್ಥಾನಗಳನ್ನು ಕಳೆದುಕೊಳ್ಳುತ್ತದೆ.

ಇತ್ತೀಚಿನ ಸಮೀಕ್ಷೆಗಳಲ್ಲಿ ಟ್ರಂಪ್ ಅವರ ಅನುಮೋದನೆ ಪ್ರಮಾಣ ದಾಖಲೆಯ ಮಟ್ಟಕ್ಕೆ ಕುಸಿದಿದೆ. ಆರ್ಥಿಕತೆ, ಜೀವನ ವೆಚ್ಚ ಹಾಗೂ ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಗಗನಕ್ಕೇರುತ್ತಿರುವ ಇಂಧನ ಬೆಲೆಗಳು ಅವರ ಜನಪ್ರಿಯತೆ ಕುಸಿಯಲು ಪ್ರಮುಖ ಕಾರಣಗಳಾಗಿವೆ.

ಸೆಪ್ಟೆಂಬರ್ 8ರಿಂದ 13, 2026ರವರೆಗೆ 1,503 ಸಂಭಾವ್ಯ ಮತದಾರರನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿದ್ದು, ಇದರ ದೋಷದ ಪ್ರಮಾಣ (Margin of Error) ±2.9 ಶೇಕಡಾ ಆಗಿದೆ.

ವಿಷಯವಾರು ಬೆಂಬಲ ಪ್ರಮಾಣ:

ಆರೋಗ್ಯ ರಕ್ಷಣೆಯ ವಿಷಯದಲ್ಲಿ ಡೆಮಾಕ್ರಟ್ ಗಳು ರಿಪಬ್ಲಿಕನ್ನರಿಗಿಂತ 24 ಪಾಯಿಂಟ್ ಗಳ ಭಾರಿ ಮುನ್ನಡೆ ಸಾಧಿಸಿದ್ದು, ಆರ್ಥಿಕತೆ, ವಿದೇಶಾಂಗ ನೀತಿ ಮತ್ತು ವಲಸೆ ವಿಷಯಗಳಲ್ಲೂ ಮೇಲುಗೈ ಹೊಂದಿದ್ದಾರೆ.

ವಿಷಯವಾರು ಗಮನಿಸಿದರೆ, ಆರೋಗ್ಯ ರಕ್ಷಣೆಯ ವಿಷಯದಲ್ಲಿ ಡೆಮಾಕ್ರಟ್ ಗಳ ಮೇಲೆ ಶೇ.60ರಷ್ಟು ಮಂದಿ ವಿಶ್ವಾಸ ವ್ಯಕ್ತಪಡಿಸಿದ್ದರೆ, ರಿಪಬ್ಲಿಕನ್ನರ ಪರವಾಗಿ ಶೇ.36ರಷ್ಟು ಮಂದಿ ಅಭಿಪ್ರಾಯ ತಿಳಿಸಿದ್ದಾರೆ.

ವಲಸೆ ವಿಷಯದಲ್ಲಿ ಡೆಮಾಕ್ರಟ್ ಗಳಿಗೆ ಶೇ.52ರಷ್ಟು ಹಾಗೂ ರಿಪಬ್ಲಿಕನ್ನರಿಗೆ ಶೇ.45ರಷ್ಟು ಬೆಂಬಲ ವ್ಯಕ್ತವಾಗಿದೆ. ಬಜೆಟ್ ಕೊರತೆಯ ವಿಚಾರದಲ್ಲಿ ಡೆಮಾಕ್ರಟ್ಗಳು ಶೇ.51ರಷ್ಟು ಮತ್ತು ರಿಪಬ್ಲಿಕನ್ನರು ಶೇ.41ರಷ್ಟು ವಿಶ್ವಾಸ ಗಳಿಸಿದ್ದಾರೆ.

ಆರ್ಥಿಕತೆಯ ವಿಷಯದಲ್ಲಿ ಡೆಮಾಕ್ರಟ್ಗಳಿಗೆ ಶೇ.51ರಷ್ಟು ಹಾಗೂ ರಿಪಬ್ಲಿಕನ್ನರಿಗೆ ಶೇ.45ರಷ್ಟು ಮಂದಿ ಒಲವು ವ್ಯಕ್ತಪಡಿಸಿದ್ದಾರೆ. ಜೀವನ ವೆಚ್ಚದ ವಿಚಾರದಲ್ಲಿ ಡೆಮಾಕ್ರಟ್ಗಳು ಶೇ.51ರಷ್ಟು ಮತ್ತು ರಿಪಬ್ಲಿಕನ್ನರು ಶೇ.43ರಷ್ಟು ವಿಶ್ವಾಸ ಗಳಿಸಿದ್ದಾರೆ.

ವಿದೇಶಿ ಯುದ್ಧಗಳ ವಿಷಯದಲ್ಲಿ ಡೆಮಾಕ್ರಟ್ಗಳಿಗೆ ಶೇ.50ರಷ್ಟು ಹಾಗೂ ರಿಪಬ್ಲಿಕನ್ನರಿಗೆ ಶೇ.43ರಷ್ಟು ಮಂದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಸ್ರೇಲ್-ಪ್ಯಾಲೇಸ್ಟೈನ್ ಸಂಘರ್ಷದ ವಿಚಾರದಲ್ಲಿ ಡೆಮಾಕ್ರಟ್ ಗಳು ಶೇ.49ರಷ್ಟು ಮತ್ತು ರಿಪಬ್ಲಿಕನ್ನರು ಶೇ.38ರಷ್ಟು ವಿಶ್ವಾಸ ಗಳಿಸಿದ್ದಾರೆ.

ತಜ್ಞರ ಪ್ರತಿಕ್ರಿಯೆ:

ಈ ಬಗ್ಗೆ newsweek ಗೆ ಪ್ರತಿಕ್ರಿಯಿಸಿದ ಬೋಸ್ಟನ್ ಯೂನಿವರ್ಸಿಟಿಯ ಕಾಲೇಜ್ ಆಫ್ ಕಮ್ಯುನಿಕೇಷನ್ಸ್ನ ಹಿರಿಯ ಅಸೋಸಿಯೇಟ್ ಡೀನ್ ಆನ್ನೆ ಡಾನ್ಹಿ, ಸಮೀಕ್ಷೆಯ ಫಲಿತಾಂಶಗಳು “ಅಚ್ಚರಿ ಹುಟ್ಟಿಸುವಂತಿವೆ” ಎಂದು ಹೇಳಿದ್ದಾರೆ.

“ಐತಿಹಾಸಿಕವಾಗಿ ರಿಪಬ್ಲಿಕನ್ ಅಭ್ಯರ್ಥಿಗಳು ಆರ್ಥಿಕತೆಯನ್ನು ಉತ್ತಮವಾಗಿ ನಿಭಾಯಿಸುತ್ತಾರೆ ಎಂಬ ನಂಬಿಕೆ ಜನರಲ್ಲಿತ್ತು. ಆದರೆ ಇದೀಗ ಆರ್ಥಿಕತೆ ಸೇರಿದಂತೆ ಪ್ರಮುಖ ವಿಷಯಗಳಲ್ಲಿ ಡೆಮಾಕ್ರಟ್ಗಳು ಮುನ್ನಡೆ ಸಾಧಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ” ಎಂದು ಅವರು ಹೇಳಿದ್ದಾರೆ.

“ವಲಸೆ ವಿಷಯದಲ್ಲಿ ಟ್ರಂಪ್ ಹಿನ್ನಡೆ ಅನುಭವಿಸುತ್ತಿರುವುದು, ಅವರ ಕಠಿಣ ನೀತಿಗಳು ಮಿತಿಮೀರಿವೆ ಎಂದು ಜನರು ಭಾವಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ” ಎಂದು ಡಾನ್ಹಿ ಅಭಿಪ್ರಾಯಪಟ್ಟಿದ್ದಾರೆ.

ರಿಪಬ್ಲಿಕನ್ ಪಕ್ಷದ ಪ್ರತಿಕ್ರಿಯೆ:

ರಿಪಬ್ಲಿಕನ್ ರಾಷ್ಟ್ರೀಯ ಸಮಿತಿಯ ಪತ್ರಿಕಾ ಕಾರ್ಯದರ್ಶಿ ನಟಾಲಿಯಾ ಬಾಲ್ಡಾಸಾರೆ ಪ್ರತಿಕ್ರಿಯಿಸಿ, “ಡೆಮಾಕ್ರಟಿಕ್ ಅಭ್ಯರ್ಥಿಗಳು ಯಾರು ಹೆಚ್ಚು ತೀವ್ರವಾದಿಗಳು ಎಂಬುದನ್ನು ತೋರಿಸಿಕೊಳ್ಳಲು ತೀವ್ರ ಎಡಪಂಥೀಯ ನಿಲುವುಗಳತ್ತ ಸಾಗಿದ್ದಾರೆ” ಎಂದು ಹೇಳಿದ್ದಾರೆ.

“ರಿಪಬ್ಲಿಕನ್ನರು ಔಷಧಿಗಳ ಬೆಲೆಗಳನ್ನು ಇಳಿಸಿದ್ದಾರೆ. ಗಡಿಯನ್ನು ಭದ್ರಪಡಿಸಿದ್ದಾರೆ. ಉದ್ಯೋಗಗಳನ್ನು ಸೃಷ್ಟಿಸಿದ್ದಾರೆ ಹಾಗೂ ತೆರಿಗೆಗಳನ್ನು ಕಡಿತಗೊಳಿಸಿದ್ದಾರೆ. ಈ ಸಾಧನೆಗಳನ್ನು ನಾವು ಜನರ ಮುಂದಿಡುತ್ತೇವೆ” ಎಂದು ಅವರು ಹೇಳಿರುವುದಾಗಿ newsweek ವರದಿ ಮಾಡಿದೆ.

ಕುಸಿದ ಟ್ರಂಪ್ ಜನಪ್ರಿಯತೆ:

ಸಮೀಕ್ಷೆಯಲ್ಲಿ ಟ್ರಂಪ್ ಅವರ ಜನಪ್ರಿಯತೆ ತೀವ್ರ ಕುಸಿತ ಕಂಡಿದೆ. ಒಟ್ಟಾರೆಯಾಗಿ ಶೇ.38ರಷ್ಟು ಜನರು ಮಾತ್ರ ಅವರ ಕಾರ್ಯವೈಖರಿಯನ್ನು ಅನುಮೋದಿಸಿದ್ದರೆ, ಶೇ.58ರಷ್ಟು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸ್ವತಂತ್ರ ಮತದಾರರಲ್ಲಿ (Independents) ಕೇವಲ ಶೇ.27ರಷ್ಟು ಜನರು ಮಾತ್ರ ಟ್ರಂಪ್ ಅವರ ಕಾರ್ಯವೈಖರಿಯನ್ನು ಅನುಮೋದಿಸಿದ್ದಾರೆ. ಶೇ.68ರಷ್ಟು ಸ್ವತಂತ್ರ ಮತದಾರರು ಅವರ ಕಾರ್ಯವೈಖರಿ ಬಗ್ಗೆ ನಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor