ಭಾರತೀಯರಿಗೆ EB-1 ಗ್ರೀನ್ ಕಾರ್ಡ್ ಗಳ ಲಭ್ಯತೆ ಸೆಪ್ಟೆಂಬರ್ ಅಂತ್ಯಕ್ಕೆ ಸ್ಥಗಿತಗೊಳ್ಳುವ ಸಾಧ್ಯತೆ: ಅಮೆರಿಕದ ವಿದೇಶಾಂಗ ಇಲಾಖೆ ಎಚ್ಚರಿಕೆ
ಸಾಂದರ್ಭಿಕ ಚಿತ್ರ (AI-Generated)
ವಾಷಿಂಗ್ಟನ್: ಹೆಚ್ಚಿನ ಬೇಡಿಕೆ ಮತ್ತು ವೀಸಾ ಕೋಟಾ ಬಳಕೆಯಿಂದಾಗಿ ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳುವ ಅಮೆರಿಕದ ಆರ್ಥಿಕ ವರ್ಷದೊಳಗೆ ಭಾರತೀಯ ವೃತ್ತಿಪರರಿಗೆ ಉದ್ಯೋಗ ಆಧಾರಿತ ಮೊದಲ ಆದ್ಯತೆಯ (EB-1) ಗ್ರೀನ್ ಕಾರ್ಡ್ ಗಳು ಲಭ್ಯವಿಲ್ಲದಂತಾಗಬಹುದು ಎಂದು ಅಮೆರಿಕದ ವಿದೇಶಾಂಗ ಇಲಾಖೆ ಎಚ್ಚರಿಸಿದೆ.
ಅಸಾಧಾರಣ ಸಾಮರ್ಥ್ಯ ಹೊಂದಿರುವವರು, ಅತ್ಯುತ್ತಮ ಪ್ರಾಧ್ಯಾಪಕರು ಮತ್ತು ಸಂಶೋಧಕರು ಹಾಗೂ ನಿರ್ದಿಷ್ಟ ಬಹುರಾಷ್ಟ್ರೀಯ ಕಂಪೆನಿಗಳ ಕಾರ್ಯನಿರ್ವಾಹಕರು ಮತ್ತು ವ್ಯವಸ್ಥಾಪಕರಿಗೆ EB-1 ವಿಭಾಗದಡಿ ಗ್ರೀನ್‌ಕಾರ್ಡ್‌ಗಳನ್ನು ನೀಡಲಾಗುತ್ತದೆ.
ಅಮೆರಿಕದ ವಿದೇಶಾಂಗ ಇಲಾಖೆಯ ಸೆಪ್ಟೆಂಬರ್ ವೀಸಾ ಬುಲೆಟಿನ್ ನಲ್ಲಿ ಈ ಎಚ್ಚರಿಕೆ ಪ್ರಕಟವಾಗಿದೆ. ವಿವಿಧ ಉದ್ಯೋಗ ಆಧಾರಿತ ವಲಸೆ ವೀಸಾ ವಿಭಾಗಗಳಲ್ಲಿ ಈಗಾಗಲೇ ದೀರ್ಘಕಾಲದ ಕಾಯುವಿಕೆ ಎದುರಿಸುತ್ತಿರುವ ಭಾರತೀಯ ಅರ್ಜಿದಾರರಿಗೆ ಇದು ಮತ್ತಷ್ಟು ಅನಿಶ್ಚಿತತೆ ಸೃಷ್ಟಿಸಿದೆ.
‘EB-1 ವೀಸಾ ವಿಭಾಗದಲ್ಲಿ ಭಾರತಕ್ಕೆ ಸಂಬಂಧಿಸಿದ ವಿದೇಶಿಯರಿಂದ ಉಂಟಾಗಿರುವ ಹೆಚ್ಚಿನ ಬೇಡಿಕೆ ಮತ್ತು ಕೋಟಾ ಬಳಕೆಯಿಂದಾಗಿ, ಆರ್ಥಿಕ ವರ್ಷ ಮುಗಿಯುವ ಮೊದಲೇ ಭಾರತದ ಪಾಲಿನ ಮಿತಿ (pro-rated limit) ತಲುಪಿದರೆ, ಮುಂದಿನ ವಾರಗಳಲ್ಲಿ ಈ ವಿಭಾಗವನ್ನು ಲಭ್ಯವಿಲ್ಲ ಎಂದು ಘೋಷಿಸಬೇಕಾಗಬಹುದು’ ಎಂದು ಇಲಾಖೆಯು ತಿಳಿಸಿದೆ.
‘ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಅಗತ್ಯ ಬದಲಾವಣೆಗಳನ್ನು ಅದಕ್ಕೆ ಅನುಗುಣವಾಗಿ ಮಾಡಲಾಗುವುದು’ ಎಂದೂ ಹೇಳಿದೆ.
ಈ ಎಚ್ಚರಿಕೆ ಭಾರತೀಯರಿಗೆ ವಿಶೇಷ ಮಹತ್ವದ್ದಾಗಿದೆ. ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ನ ಹಲವು ವಿಭಾಗಗಳಲ್ಲಿ ಭಾರತೀಯ ಅರ್ಜಿದಾರರು ಈಗಾಗಲೇ ತೀವ್ರ ನಿರ್ಬಂಧ ಮತ್ತು ದೀರ್ಘಕಾಲದ ಕಾಯುವಿಕೆ ಎದುರಿಸುತ್ತಿದ್ದಾರೆ.
ಸೆಪ್ಟೆಂಬರ್ ನಲ್ಲಿ ಭಾರತೀಯರ EB-1 ವಿಭಾಗದ ‘ಅಂತಿಮ ಕ್ರಮದ ದಿನಾಂಕ’ (final action date) ಅಕ್ಟೋಬರ್ 15, 2022 ಆಗಿದೆ. ಅಂದರೆ, ಅಂತಿಮ ಪ್ರಕ್ರಿಯೆಗೆ ವೀಸಾ ಸಂಖ್ಯೆ ಲಭ್ಯವಾಗಬೇಕಾದರೆ ಭಾರತೀಯ ಅರ್ಜಿದಾರರ ‘ಆದ್ಯತೆಯ ದಿನಾಂಕ’ (priority date) ಸಾಮಾನ್ಯವಾಗಿ ನಿಗದಿಪಡಿಸಿರುವ ಕಟ್‌ಆಫ್ ದಿನಾಂಕಕ್ಕಿಂತ ಹಿಂದಿನದ್ದಾಗಿರಬೇಕು. ಇದರ ಜತೆಗೆ ಇತರ ಅರ್ಹತಾ ಮಾನದಂಡಗಳನ್ನೂ ಪೂರೈಸಬೇಕಾಗುತ್ತದೆ.
ಭಾರತೀಯ ಅರ್ಜಿದಾರರ ಮೇಲಿನ ಒತ್ತಡ EB-1 ವಿಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ. ಉನ್ನತ ಪದವಿ ಹೊಂದಿರುವ ವೃತ್ತಿಪರರು ಮತ್ತು ಅಸಾಧಾರಣ ಸಾಮರ್ಥ್ಯ ಹೊಂದಿರುವ ವ್ಯಕ್ತಿಗಳನ್ನು ಒಳಗೊಂಡಿರುವ ಭಾರತದ EB-2 ವಿಭಾಗವನ್ನು ಸೆಪ್ಟೆಂಬರ್ ವೀಸಾ ಬುಲೆಟಿನ್‌ನಲ್ಲಿ ‘U’ (unavailable–ಲಭ್ಯವಿಲ್ಲ) ಎಂದು ಪಟ್ಟಿ ಮಾಡಲಾಗಿದೆ.
ನಿರ್ದಿಷ್ಟ ಅವಧಿಯಲ್ಲಿ ಆ ವಿಭಾಗದಡಿ ವೀಸಾ ಸಂಖ್ಯೆಗಳನ್ನು ನೀಡಲು ಸಾಧ್ಯವಿಲ್ಲ ಎಂಬುದನ್ನು ‘U’ ಸಂಕೇತ ಸೂಚಿಸುತ್ತದೆ.
ಉದ್ಯೋಗ ಆಧಾರಿತ ಮೂರನೇ ಆದ್ಯತೆಯ (EB-3) ವಿಭಾಗದಲ್ಲೂ ಬಾಕಿ ಪ್ರಕರಣಗಳ ಸಮಸ್ಯೆ ಗಂಭೀರವಾಗಿದೆ. ಭಾರತೀಯ ಅರ್ಜಿದಾರರ ಕಾಯುವಿಕೆಯ ಸಾಲು ಸುಮಾರು 12 ವರ್ಷಗಳಷ್ಟು ಹಿಂದಿನ ದಿನಾಂಕದವರೆಗೆ ತಲುಪಿದೆ.
ಭಾರತದ ಸಾಮಾನ್ಯ, ಅಂದರೆ ಮೀಸಲಾತಿ ರಹಿತ EB-5 ಹೂಡಿಕೆದಾರರ ವಿಭಾಗವೂ ಸೆಪ್ಟೆಂಬರ್ ನಲ್ಲಿ ಅಂತಿಮ ಪ್ರಕ್ರಿಯೆಗೆ ಲಭ್ಯವಿಲ್ಲ. ಆದರೆ ಗ್ರಾಮೀಣ ಯೋಜನೆಗಳು, ಹೆಚ್ಚಿನ ನಿರುದ್ಯೋಗವಿರುವ ಪ್ರದೇಶಗಳು ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಮೀಸಲಾದ EB-5 ವಿಭಾಗಗಳು ಎಲ್ಲ ದೇಶಗಳಿಗೂ ಪ್ರಸ್ತುತ ಲಭ್ಯವಿವೆ.
ಅರ್ಜಿ ಸಲ್ಲಿಕೆಗೆ ಸ್ವಲ್ಪ ಹೆಚ್ಚಿನ ಅವಕಾಶ
‘ಅಂತಿಮ ಕ್ರಮದ ದಿನಾಂಕ’ಕ್ಕೆ ಹೋಲಿಸಿದರೆ ‘ಅರ್ಜಿ ಸಲ್ಲಿಸುವ ದಿನಾಂಕ’ (filing date) ಕೆಲವು ಅರ್ಜಿದಾರರಿಗೆ ಸ್ವಲ್ಪ ಹೆಚ್ಚಿನ ಅವಕಾಶ ನೀಡುತ್ತದೆ.
ಸೆಪ್ಟೆಂಬರ್ ನಲ್ಲಿ ಭಾರತೀಯರಿಗೆ EB-1 ವಿಭಾಗದ ಅರ್ಜಿ ಸಲ್ಲಿಸುವ ದಿನಾಂಕ ಡಿಸೆಂಬರ್ 1, 2023 ಆಗಿದೆ. EB-2 ಮತ್ತು EB-3 ವಿಭಾಗಗಳಿಗೆ ಜನವರಿ 15, 2015 ಅನ್ನು ನಿಗದಿಪಡಿಸಲಾಗಿದೆ.
ಆದರೆ, ಅಮೆರಿಕದಲ್ಲೇ ಇದ್ದು ಸ್ಥಾನಮಾನದ ಹೊಂದಾಣಿಕೆ (adjustment of status) ಬಯಸುವ ಅರ್ಜಿದಾರರು ನಿರ್ದಿಷ್ಟ ತಿಂಗಳಲ್ಲಿ ಯಾವ ಚಾರ್ಟ್ ಬಳಸಲು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ (USCIS) ಅನುಮತಿ ನೀಡಿದೆ ಎಂಬುದನ್ನು ಪರಿಶೀಲಿಸಬೇಕು.
ಭಾರತೀಯ ಉದ್ಯೋಗ ಆಧಾರಿತ ವಲಸೆ ಅರ್ಜಿದಾರರ ಮೇಲಿನ ಒತ್ತಡಕ್ಕೆ ಹೆಚ್ಚಿನ ಬೇಡಿಕೆ ಮತ್ತು ಪ್ರತಿ ವರ್ಷ ಲಭ್ಯವಿರುವ ಉದ್ಯೋಗ ಆಧಾರಿತ ವಲಸೆ ವೀಸಾಗಳ ಸಂಖ್ಯೆಗೆ ಇರುವ ಶಾಸನಬದ್ಧ ಮಿತಿ ಪ್ರಮುಖ ಕಾರಣಗಳಾಗಿವೆ.
ಈ ಎರಡೂ ಅಂಶಗಳಿಂದಾಗಿ ಭಾರತೀಯ ಅರ್ಜಿದಾರರ ಗ್ರೀನ್‌ಕಾರ್ಡ್ ಅರ್ಜಿಗಳ ಬಾಕಿ ಪ್ರಮಾಣ ಹೆಚ್ಚುತ್ತಿದ್ದು, ಕಾಯುವ ಅವಧಿಯೂ ದೀರ್ಘವಾಗುತ್ತಿದೆ.