×
Ad

ಗ್ರೆಟಾ ಥನ್‌ಬರ್ಗ್‌ ಅವರನ್ನು ಎಳೆದಾಡಿ, ಧ್ವಜಕ್ಕೆ ಮುತ್ತಿಕ್ಕುವಂತೆ ಬಲವಂತ : ಇಸ್ರೇಲ್ ಸೇನೆ ವಿರುದ್ಧ ಗಂಭೀರ ಆರೋಪ

Update: 2025-10-05 13:33 IST

ಗ್ರೆಟಾ ಥನ್‌ಬರ್ಗ್ (Photo: X)

ಅಂಕಾರಾ: ಗಾಝಾಕ್ಕೆ ಮಾನವೀಯ ನೆರವು ಸಾಗಿಸುತ್ತಿದ್ದ ನೆರವಿನ ಹಡಗುಗಳ ಫ್ಲೋಟಿಲ್ಲಾವನ್ನು ಇಸ್ರೇಲಿನ ನೌಕಾಪಡೆ ತಡೆದ ಬಳಿಕ, ಸ್ವೀಡನ್ ನ ಹವಾಮಾನ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ಹಾಗೂ ಇತರರನ್ನು ಬಂಧಿಸಿದ ಇಸ್ರೇಲ್ ಸೇನೆ ಅಮಾನವೀಯವಾಗಿ ಅವರೊಂದಿಗೆ ನಡೆದುಕೊಂಡಿತು ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಈ ಕುರಿತು ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆ Aljazeera ವರದಿ ವಿಶ್ವದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಬಂಧಿತರಾದ 137 ಮಂದಿ ಶನಿವಾರ ಟರ್ಕಿಗೆ ಗಡೀಪಾರುಗೊಂಡಿದ್ದು, ಅವರಲ್ಲಿ ಹಲವರು ಇಸ್ರೇಲ್ ಸೇನೆಯವರು ಬಂಧನದ ವೇಳೆ ಮಾನವೀಯ ಮೌಲ್ಯಗಳನ್ನು ಉಲ್ಲಂಘಿಸಿ ಹಿಂಸಾತ್ಮಕ ವರ್ತನೆ ತೋರಿದರೆಂದು ಹೇಳಿದ್ದಾರೆ.

ಮಲೇಷ್ಯಾದ ಹಜ್ವಾನಿ ಹೆಲ್ಮಿ ಹಾಗೂ ಅಮೇರಿಕಾದ ವಿಂಡ್‌ಫೀಲ್ಡ್ ಬೀವರ್ ಅವರು ರಾಯಿಟರ್ಸ್‌ಗೆ ನೀಡಿದ ಹೇಳಿಕೆಯಲ್ಲಿ, ಥನ್‌ಬರ್ಗ್ ಅವರನ್ನು ಇಸ್ರೇಲಿ ಸೈನಿಕರು ಕೆಟ್ಟ ರೀತಿಯಲ್ಲಿ ನಡೆಸಿಕೊಂಡು, ಅವರನ್ನು ಪ್ರಚಾರ ಸಾಮಾಗ್ರಿ ರೀತಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ವರದಿಗಳ ಪ್ರಕಾರ, ಥನ್‌ಬರ್ಗ್ ಅವರನ್ನು ತಳ್ಳಿ ಎಳೆದಾಡಿ, ಇಸ್ರೇಲ್ ಧ್ವಜ ಧರಿಸುವಂತೆ ಮತ್ತು ಅದಕ್ಕೆ ಮುತ್ತಿಡುವಂತೆ ಬಲವಂತಪಡಿಸಲಾಯಿತು. “ಇದು ಒಂದು ದುರಂತದ ಅನುಭವವಾಗಿತ್ತು. ಅವರು ನಮ್ಮನ್ನು ಪ್ರಾಣಿಗಳಂತೆ ನಡೆಸಿಕೊಂಡರು,” ಎಂದು ಹೆಲ್ಮಿ ಹೇಳಿದ್ದಾರೆ.

ಬಂಧನದ ಸಮಯದಲ್ಲಿ ಇಸ್ರೇಲ್‌ನ ತೀವ್ರ ಬಲಪಂಥೀಯ ರಾಷ್ಟ್ರೀಯ ಭದ್ರತಾ ಸಚಿವ ಇಟಮಾರ್ ಬೆನ್-ಗ್ವಿರ್ ಸ್ಥಳಕ್ಕೆ ಬಂದಾಗ, ಥನ್‌ಬರ್ಗ್ ಅವರನ್ನು ಬಲವಂತವಾಗಿ ಕೋಣೆಗೆ ತಳ್ಳಲಾಯಿತು ಎಂದು ಬೀವರ್ ಹೇಳಿದರು.

“ಇಸ್ರೇಲಿ ಪಡೆಗಳು ಥನ್‌ಬರ್ಗ್ ಅವರನ್ನು ನೆಲದ ಮೇಲೆ ಎಳೆದುಕೊಂಡು ಹೋಗಿ, ಇಸ್ರೇಲ್ ಧ್ವಜವನ್ನು ಮುತ್ತಿಕ್ಕುವಂತೆ ಒತ್ತಾಯಿಸಿದವು,” ಎಂದು ಟರ್ಕಿಶ್ ಪತ್ರಕರ್ತೆ ಎರ್ಸಿನ್ ಸೆಲಿಕ್ ಅವರು ಘಟನೆಯನ್ನು ವಿವರಿಸಿದ್ದಾರೆ.

“22 ವರ್ಷದ ಧೈರ್ಯಶಾಲಿ ಗ್ರೆಟಾ ಥನ್‌ಬರ್ಗ್ ಅವರನ್ನು ಅವಮಾನಿಸಿ, ಇಸ್ರೇಲ್ ನ ಧ್ವಜದಲ್ಲಿ ಸುತ್ತಿ ಟ್ರೋಫಿಯಂತೆ ಪ್ರದರ್ಶಿಸಲಾಯಿತು” ಎಂದು ಇಟಾಲಿಯನ್ ಪತ್ರಕರ್ತ ಲೊರೆಂಜೊ ಅಗೊಸ್ಟಿನೊ ಅವರು ಅನಡೋಲುಗೆ ತಿಳಿಸಿದ್ದಾರೆ.

ಬಂಧಿತರನ್ನು ನಾಯಿಗಳಂತೆ ನಡೆಸಿಕೊಂಡು, ಮೂರು ದಿನಗಳವರೆಗೆ ಹಸಿವಿನಿಂದ ಹಾಗೂ ದಾಹದಿಂದ ನರಳಿಸಿದರು. ಅವರಿಗೆ ನೀರು ನೀಡದೆ, ಶೌಚಾಲಯದ ನೀರನ್ನು ಕುಡಿಯಬೇಕಾಯಿತು,” ಎಂದು ಟರ್ಕಿಶ್ ಟಿವಿ ನಿರೂಪಕಿ ಇಕ್ಬಾಲ್ ಗುರ್ಪಿನಾರ್ Aljazeera ಗೆ ತಿಳಿಸಿದ್ದಾರೆ.

ಆದರೆ ಈ ಆರೋಪಗಳ ಕುರಿತು ಇಸ್ರೇಲ್ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಘಟನೆ ನಡೆದ ಆರಂಭದಲ್ಲಿ ಹೇಳಿಕೆ ನೀಡಿದ್ದ ವಿದೇಶಾಂಗ ಸಚಿವಾಲಯ ಹಿಂದಿನ “ಬಂಧಿತರೊಂದಿಗೆ ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎಂಬ ವರದಿಗಳು ಸಂಪೂರ್ಣ ಸುಳ್ಳು” ಎಂದು ತಳ್ಳಿಹಾಕಿತ್ತು.

ಆಗಸ್ಟ್ ಅಂತ್ಯದಲ್ಲಿ ಪ್ರಯಾಣ ಆರಂಭಿಸಿದ್ದ ಈ ನೆರವಿನ ಹಡಗುಗಳ ಫ್ಲೋಟಿಲ್ಲಾ, 2023ರ ಅಕ್ಟೋಬರ್‌ ನಲ್ಲಿ ಹಮಾಸ್ ಇಸ್ರೇಲ್ ಮೇಲೆ ನಡೆಸಿದ ದಾಳಿಯ ನಂತರ ಗಾಝಾದ ಮೇಲೆ ವಿಧಿಸಲಾದ ಇಸ್ರೇಲ್ ನ ನೌಕಾ ನಿರ್ಬಂಧವನ್ನು ಮುರಿಯುವ ಇತ್ತೀಚಿನ ಪ್ರಯತ್ನವಾಗಿತ್ತು. ಇಸ್ರೇಲ್ ಅಧಿಕಾರಿಗಳು ಈ ಪ್ರಯತ್ನವನ್ನು “ಕಾನೂನುಬಾಹಿರ ಸಾಹಸ” ಎಂದು ಖಂಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News