'ಜಗತ್ತಿನ ಭವಿಷ್ಯದ ಹಿತಕ್ಕಾಗಿ' ಇರಾನ್ ಮೇಲಿನ ದಾಳಿಗಳಿಗೆ ತಡೆ: ಅಮೆರಿಕ ಅಧ್ಯಕ್ಷ ಟ್ರಂಪ್
ತಕ್ಷಣವೇ ಹಾರ್ಮುಝ್ ತೆರೆಯಲು ನಿರ್ಧಾರ
Photo: screengrab/x.com/EricLDaugh
ಹೊಸದಿಲ್ಲಿ: ಟೆಹ್ರಾನ್ ಹಾಗೂ ಮಧ್ಯಪ್ರಾಚ್ಯದ ಇತರ ದೇಶಗಳ ಕೋರಿಕೆಯ ಮೇರೆಗೆ ಇರಾನ್ ವಿರುದ್ಧ ಯೋಜಿಸಲಾಗಿದ್ದ ಹೊಸ ಮಿಲಿಟರಿ ದಾಳಿಗಳನ್ನು ತಡೆಹಿಡಿಯಲು ಅಮೆರಿಕ ಮತ್ತು ಇಸ್ರೇಲ್ ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿನ ಯುದ್ಧಕ್ಕೆ ಅಂತ್ಯ ಹಾಡುವ ಒಪ್ಪಂದದ ರೂಪುರೇಷೆಗಳ ಕುರಿತು ಒಮ್ಮತ ಮೂಡಿದೆ ಎಂದು ಅವರು ತಿಳಿಸಿದ್ದಾರೆ.
ತಮ್ಮ ಟ್ರೂತ್ ಸೋಶಿಯಲ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಸಂದೇಶದಲ್ಲಿ, ಪ್ರಸ್ತಾವಿತ ಒಪ್ಪಂದದ ಭಾಗವಾಗಿ ಹಾರ್ಮುಝ್ ಜಲಸಂಧಿಯನ್ನು ತಕ್ಷಣ, ಸಂಪೂರ್ಣವಾಗಿ ತೆರೆಯಲು ನಿರ್ಧರಿಸಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಫೆಬ್ರುವರಿ 28ರಂದು ಯುದ್ಧ ಆರಂಭವಾದ ಬಳಿಕ ಇರಾನ್ ಹಾರ್ಮುಝ್ ಜಲಸಂಧಿಯಲ್ಲಿನ ಸಾಗಣೆಯನ್ನು ಬಹುತೇಕ ಸ್ಥಗಿತಗೊಳಿಸಿತ್ತು.
"ಅಮೆರಿಕ ಸಂಪೂರ್ಣ ಸನ್ನದ್ಧವಾಗಿದ್ದು, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ವಿರುದ್ಧ ಎರಡನೇ ಮಹಾಯುದ್ಧದ ಬಳಿಕ ಕಾಣದ ಮಟ್ಟದ ಮಿಲಿಟರಿ ಶಕ್ತಿ ಮತ್ತು ಸಾಮರ್ಥ್ಯವನ್ನು ಬಳಸಲು ಸಿದ್ಧವಾಗಿತ್ತು. ಆದರೆ, ಒಪ್ಪಂದದ ವ್ಯಾಪ್ತಿಯನ್ನು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಯಾವುದೇ ಹೊಸ ದಾಳಿ ನಡೆಸದಂತೆ ಇರಾನ್ ಹಾಗೂ ಮಧ್ಯಪ್ರಾಚ್ಯದ ಇತರ ದೇಶಗಳು ನಮ್ಮನ್ನು ಕೋರಿವೆ. ಈ ಒಪ್ಪಂದದಲ್ಲಿ ಹಾರ್ಮುಝ್ ಜಲಸಂಧಿಯನ್ನು ತಕ್ಷಣ ಸಂಪೂರ್ಣವಾಗಿ ತೆರೆಯುವುದು ಮತ್ತು ಇರಾನ್‌ನ ಪರಮಾಣು ಬೆದರಿಕೆಗೆ ಅಂತ್ಯ ಹಾಡುವುದೂ ಸೇರಿದೆ" ಎಂದು ಅವರು ಹೇಳಿದ್ದಾರೆ.
"ಈ ಮನವಿಯನ್ನು ಪರಿಗಣಿಸಿ, ಜಗತ್ತಿನ ಭವಿಷ್ಯದ ಹಿತಕ್ಕಾಗಿ ಹಾಗೂ ಯಶಸ್ವಿ ಮತ್ತು ಸಮೃದ್ಧ ಇರಾನ್‌ನ ಉಳಿವಿನ ದೃಷ್ಟಿಯಿಂದ ಯೋಜಿಸಲಾಗಿದ್ದ ದಾಳಿಯನ್ನು ರದ್ದುಗೊಳಿಸಲು ನಾನು ಒಪ್ಪಿದ್ದೇನೆ. ಇದರಿಂದ ಒಪ್ಪಂದವನ್ನು ಶೀಘ್ರದಲ್ಲೇ ಅಂತಿಮಗೊಳಿಸಲು ಸಾಧ್ಯವಾಗಲಿದೆ" ಎಂದು ಟ್ರಂಪ್ ತಿಳಿಸಿದ್ದಾರೆ.
ಫೆಬ್ರುವರಿಯಲ್ಲಿ ಅಮೆರಿಕದ ಮಿಲಿಟರಿಯೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಾಮಿನೈ ಅವರನ್ನು ಹತ್ಯೆಗೈದ ಬಳಿಕ, ಯುದ್ಧಕ್ಕೆ ಅಂತ್ಯ ಹಾಡುವ ಉದ್ದೇಶದಿಂದ ಇರಾನ್‌ನೊಂದಿಗಿನ ಒಪ್ಪಂದವನ್ನು ಪೂರ್ಣಗೊಳಿಸುವ ಪ್ರಯತ್ನದಲ್ಲಿ ಅಮೆರಿಕದೊಂದಿಗೆ ಕೈಜೋಡಿಸಲು ಇಸ್ರೇಲ್ ಸಹ ಒಪ್ಪಿಕೊಂಡಿದೆ ಎಂದು ಟ್ರಂಪ್ ಹೇಳಿದ್ದಾರೆ.
"ಎಲ್ಲರೂ ಒಟ್ಟಾಗಿ ಕೆಲಸ ಮಾಡಿ. ಈ ಒಪ್ಪಂದವನ್ನು ಯಶಸ್ವಿಗೊಳಿಸಿ" ಎಂದು ಟ್ರಂಪ್ ತಮ್ಮ ಸಂದೇಶದಲ್ಲಿ ಕರೆ ನೀಡಿದ್ದಾರೆ.