Pakistan | ಅಮೆರಿಕದ ವಿಶ್ವಾಸ ಗಳಿಸಲು ಮಾಜಿ ಪ್ರಧಾನಿ ಇಮ್ರಾನ್ ಪದಚ್ಯುತಿ: ಸೋರಿಕೆಯಾದ ದಾಖಲೆಯಲ್ಲಿ ಉಲ್ಲೇಖ
ಇಮ್ರಾನ್ ಖಾನ್ | Photo Credit : PTI
ವಾಶಿಂಗ್ಟನ್, ಮೇ 18: ಅಮೆರಿಕದ ವಿಶ್ವಾಸವನ್ನು ಮರಳಿ ಪಡೆಯುವ ಪ್ರಯತ್ನದ ಭಾಗವಾಗಿ ಪಾಕಿಸ್ತಾನವು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಿ ಬಂಧನದಲ್ಲಿಟ್ಟಿದೆ ಎಂದು ಸೋರಿಕೆಯಾದ ಅಮೆರಿಕದ ದಾಖಲೆಯೊಂದರಲ್ಲಿ ಉಲ್ಲೇಖಿಸಲಾಗಿದೆ.
ಅಮೆರಿಕ ಮೂಲದ ತನಿಖಾ ಮಾಧ್ಯಮ ‘ಡ್ರಾಪ್ ಸೈಟ್’ ಮೂಲ ದಾಖಲೆಯನ್ನು ಪ್ರಕಟಿಸಿದೆ. ಅಮೆರಿಕಕ್ಕೆ ಪಾಕಿಸ್ತಾನದ ರಾಯಭಾರಿಯಾಗಿದ್ದ ಅಸಾದ್ ಮಜೀದ್ ಖಾನ್ ಮತ್ತು ಅಮೆರಿಕದ ರಾಜತಾಂತ್ರಿಕ ಅಧಿಕಾರಿ ಡೊನಾಲ್ಡ್ ಲು ಅವರ ನಡುವೆ 2022ರ ಮಾರ್ಚ್‌ನಲ್ಲಿ ನಡೆದ ಸಂಭಾಷಣೆಯನ್ನು ‘ಸೈಫರ್ ಇನ್ ಪಾಕಿಸ್ತಾನ’ ಎಂಬ ಹೆಸರಿನ ದಾಖಲೆಯಲ್ಲಿ ವಿವರಿಸಲಾಗಿದೆ.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಸಂದರ್ಭ ಆಗಿನ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಟಸ್ಥ ನಿಲುವು ತಳೆದಿರುವುದು ಮತ್ತು ಅಫ್ಘಾನಿಸ್ತಾನದ ವಿರುದ್ಧ ಅಮೆರಿಕದ ಪಡೆಗಳಿಗೆ ಪಾಕಿಸ್ತಾನದ ನೆಲೆಗಳನ್ನು ಬಳಸಲು ಅವಕಾಶ ನೀಡದಿರುವುದು ಆಗಿನ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಡಳಿತದ ಕಣ್ಣು ಕೆಂಪಗಾಗಿಸಿತ್ತು. ಈ ಕಾರಣಕ್ಕೆ 2022ರ ಮಾರ್ಚ್ 7ರಂದು ನಡೆದ ರಹಸ್ಯ ಸಭೆಯಲ್ಲಿ ಬೈಡನ್ ಆಡಳಿತ ಪ್ರಧಾನಿ ಹುದ್ದೆಯಿಂದ ಖಾನ್ ಅವರನ್ನು ಪದಚ್ಯುತಗೊಳಿಸುವಂತೆ ಪಾಕಿಸ್ತಾನವನ್ನು ಉತ್ತೇಜಿಸಿದೆ ಎಂದು ವರದಿ ಹೇಳಿದೆ.
ತಮ್ಮ ಸ್ವತಂತ್ರ ವಿದೇಶಾಂಗ ನೀತಿ ಮತ್ತು ರಷ್ಯಾ ಹಾಗೂ ಚೀನಾದ ವಿಷಯದಲ್ಲಿ ಅಮೆರಿಕದ ಪರ ನಿಲ್ಲಲು ನಿರಾಕರಿಸಿದ್ದಕ್ಕಾಗಿ ತಮ್ಮನ್ನು ಪದಚ್ಯುತಗೊಳಿಸಲು ಅಮೆರಿಕವು ಪಾಕಿಸ್ತಾನದ ವಂಶಾಡಳಿತದ ಪಕ್ಷಗಳಾದ ಪಾಕಿಸ್ತಾನ್ ಮುಸ್ಲಿಂ ಲೀಗ್-ಎನ್ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಜೊತೆ ಪಿತೂರಿ ನಡೆಸಿದೆ ಎಂದು ಇಮ್ರಾನ್ ಖಾನ್ ಆರೋಪಿಸಿದ್ದರು. ವೈಯಕ್ತಿಕವಾಗಿ ರಾಜೀನಾಮೆ ನೀಡಿದರೆ ಎಲ್ಲವನ್ನೂ ಕ್ಷಮಿಸಲಾಗುವುದು ಎಂದು ಅಮೆರಿಕ ಸೂಚಿಸಿರುವುದಾಗಿ 2022ರ ಎಪ್ರಿಲ್‌ನಲ್ಲಿ ಇಮ್ರಾನ್ ಖಾನ್ ಹೇಳಿಕೆ ನೀಡಿದ್ದರು.