ಕದನ ವಿರಾಮ ವಿಸ್ತರಣೆ ಬೆನ್ನಲ್ಲೇ ಲೆಬನಾನ್ ಮೇಲೆ ಇಸ್ರೇಲ್ ದಾಳಿ
Photo : gemini AI
ಬೈರೂತ್, ಮೇ 17: ಇಸ್ರೇಲ್-ಲೆಬನಾನ್ ಕದನ ವಿರಾಮ ವಿಸ್ತರಣೆಯ ಹೊರತಾಗಿಯೂ ಶನಿವಾರ ಮತ್ತು ರವಿವಾರ ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ಬೃಹತ್ ವೈಮಾನಿಕ ದಾಳಿ ನಡೆಸಿದೆ ಎಂದು ಸರಕಾರಿ ಸ್ವಾಮ್ಯದ ನ್ಯಾಷನಲ್ ನ್ಯೂಸ್ ಏಜೆನ್ಸಿ(ಎನ್‍ಎನ್‍ಎ) ವರದಿ ಮಾಡಿದೆ.
ಗಡಿ ಭಾಗದಿಂದ ಸುಮಾರು 50 ಕಿ.ಮೀ ದೂರದ ಗ್ರಾಮ ಸೇರಿದಂತೆ 24ಕ್ಕೂ ಅಧಿಕ ಗ್ರಾಮಗಳ ಮೇಲೆ ದಾಳಿ ನಡೆದಿದೆ. ಪೂರ್ವ ಲೆಬನಾನ್‍ನ ಬೆಕಾ ಕಣಿವೆಯ ಸೊಹ್ಮೊರ್ ನಗರದ ಮೇಲೆಯೂ ದಾಳಿ ನಡೆದಿದೆ. ದಾಳಿಯ ಬಳಿಕ ದಕ್ಷಿಣದ ಸಿಡಾನ್ ನಗರ ಹಾಗೂ ರಾಜಧಾನಿ ಬೈರೂತ್ ಕಡೆ ನಿವಾಸಿಗಳು ಸ್ಥಳಾಂತರಗೊಳ್ಳುತ್ತಿದ್ದಾರೆ ಎಂದು ವರದಿ ಹೇಳಿದೆ.
ಹಿಜ್ಬುಲ್ಲಾವನ್ನು ಗುರಿಯಾಗಿಸಿರುವುದಾಗಿ ಇಸ್ರೇಲ್ ಹೇಳಿದೆ. ದಾಳಿಗೂ ಮುನ್ನ ದಕ್ಷಿಣ ಲೆಬನಾನ್‍ನ 9 ಗ್ರಾಮಗಳ ನಿವಾಸಿಗಳಿಗೆ ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ಮಿಲಿಟರಿ ಸೂಚಿಸಿತ್ತು.
ಇಸ್ರೇಲ್‍ನ ದಾಳಿಗೆ ಪ್ರತಿಯಾಗಿ ಉತ್ತರ ಇಸ್ರೇಲ್‍ನ ಮಿಲಿಟರಿ ಗುರಿಯ ಮೇಲೆ ದಾಳಿ ನಡೆಸಿರುವುದಾಗಿ ಹಿಜ್ಬುಲ್ಲಾ ಘೋಷಿಸಿದೆ. ಎಪ್ರಿಲ್ 17ರಂದು ಕದನ ವಿರಾಮ ಜಾರಿಗೆ ಬಂದ ಬಳಿಕ ಇಸ್ರೇಲ್‍ನ ದಾಳಿಯಲ್ಲಿ ಲೆಬನಾನ್‍ನಲ್ಲಿ 400ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದಾಗಿ ಲೆಬನಾನ್ ಅಧಿಕಾರಿಗಳು ಹೇಳಿದ್ದಾರೆ.