Photo: Economic Times.

ಬೊಗೋಟಾ: ನೈಋತ್ಯ ಕೊಲಂಬಿಯಾದಲ್ಲಿ ಅಕ್ರಮ ಚಿನ್ನದ ಗಣಿಯೊಂದು ಕುಸಿದು 14 ಮಂದಿ ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ನಾರಿನೊ ಪ್ರಾಂತ್ಯದ ಸಾಂತಾ ಬಾರ್ಬರಾ ಡೆ ಇಸ್ಕುವಾಂಡೆ ಪುರಸಭೆಯ ಗ್ರಾಮೀಣ ಪ್ರದೇಶವಾದ ಚಾಂಬೆರೊದಲ್ಲಿ ಈ ದುರಂತ ಸಂಭವಿಸಿದೆ.

ಗಣಿಯಲ್ಲಿ ಸಿಲುಕಿದವರಿಗಾಗಿ ನಡೆಸಲಾಗುತ್ತಿದ್ದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ನಾರಿನೊ ಪ್ರಾಂತ್ಯದ ಗವರ್ನರ್ ಲೂಯಿಸ್ ಅಲ್ಫೋನ್ಸೊ ಎಸ್ಕೋಬಾರ್ ತಿಳಿಸಿದ್ದಾರೆ.

ಗಣಿಗಾರರ ಕೆಲಸದ ಪರಿಸ್ಥಿತಿ ಸುಧಾರಿಸಲು ಮತ್ತು ಸುರಕ್ಷತಾ ಮಾನದಂಡಗಳನ್ನು ಬಲಪಡಿಸಲು ಅಕ್ರಮ ಹಾಗೂ ಸಣ್ಣ ಪ್ರಮಾಣದ ಗಣಿಗಾರಿಕೆಯನ್ನು ಅಧಿಕೃತಗೊಳಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಅವರು ಕೇಂದ್ರ ಸರಕಾರ, ರಾಷ್ಟ್ರೀಯ ಗಣಿಗಾರಿಕೆ ಸಂಸ್ಥೆ ಮತ್ತು ಗಣಿ ಹಾಗೂ ಇಂಧನ ಸಚಿವಾಲಯವನ್ನು ಒತ್ತಾಯಿಸಿದ್ದಾರೆ.

ಇದೇ ನಾರಿನೊ ಪ್ರಾಂತ್ಯದ ಪೊಲಿಕಾರ್ಪಾ ಪಟ್ಟಣದಲ್ಲಿ ಆಗಸ್ಟ್‌ನಲ್ಲಿ ಸಂಭವಿಸಿದ್ದ ಇದೇ ರೀತಿಯ ಗಣಿಗಾರಿಕೆ ದುರಂತದಲ್ಲಿ 13 ಮಂದಿ ಮೃತಪಟ್ಟಿದ್ದರು.

ಕೊಲಂಬಿಯಾದ ಗ್ರಾಮೀಣ ಪ್ರದೇಶಗಳಲ್ಲಿ ಅನಧಿಕೃತ ಗಣಿಗಾರಿಕೆ ಸಾಮಾನ್ಯವಾಗಿದ್ದು, ಇಂತಹ ಗಣಿಗಳಲ್ಲಿ ಸಾಕಷ್ಟು ಸುರಕ್ಷತಾ ವ್ಯವಸ್ಥೆಗಳಿಲ್ಲದ ಕಾರಣ ಪದೇ ಪದೇ ಅವಘಡಗಳು ಸಂಭವಿಸುತ್ತಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor