ಸೌದಿ ಅರೇಬಿಯದಲ್ಲಿ ಗಲ್ಲುಶಿಕ್ಷೆಗೆ ಒಳಗಾದ ಬಾಂಗ್ಲಾದೇಶಿ ಮಹಿಳೆ ಯಾರು?
ಮಗಳ ವಿದೇಶಿ ಉದ್ಯೋಗಕ್ಕಾಗಿ ಸಾಲ; ಈಗ ಕುಟುಂಬಕ್ಕೆ ಗಲ್ಲುಶಿಕ್ಷೆಯ ಸುದ್ದಿ!
ಸಾಂದರ್ಭಿಕ ಚಿತ್ರ | Photo Credit: AI
ಢಾಕಾ: ಮಗಳಿಗೆ ವಿದೇಶದಲ್ಲಿ ಉದ್ಯೋಗ ಸಿಗಲಿ, ಕುಟುಂಬದ ಆರ್ಥಿಕ ಸಂಕಷ್ಟ ದೂರವಾಗಲಿ ಎಂಬ ನಿರೀಕ್ಷೆಯಲ್ಲಿ ನಾಲ್ಕು ವರ್ಷಗಳ ಹಿಂದೆ ಸಾಲ ಮಾಡಿ ಸೌದಿ ಅರೇಬಿಯಕ್ಕೆ ಕಳುಹಿಸಿದ್ದ ತಂದೆಯೊಬ್ಬರಿಗೆ ಈಗ ಮಗಳ ಗಲ್ಲುಶಿಕ್ಷೆಯ ಸುದ್ದಿ ಆಘಾತ ನೀಡಿದೆ. ಸೌದಿ ಅರೇಬಿಯದಲ್ಲಿ ಅಕ್ಟೋಬರ್ 14ರಂದು ಗಲ್ಲುಶಿಕ್ಷೆಗೆ ಒಳಗಾದ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳಲ್ಲಿ ಸಿಟಿ ಅಖ್ತರ್ (Siti Akhtar) ಕೂಡ ಒಬ್ಬರು ಎಂದು ಸೌದಿ ಅಧಿಕಾರಿಗಳು ಗುರುತಿಸಿದ್ದಾರೆ. ಆದರೆ, ಮಗಳ ಮರಣದಂಡನೆಯ ಬಗ್ಗೆ ಕುಟುಂಬಕ್ಕೆ ಇನ್ನೂ ಅಧಿಕೃತ ದೃಢೀಕರಣ ದೊರೆತಿಲ್ಲ.
ಬಾಂಗ್ಲಾದೇಶದ ಟಾಂಗೈಲ್ ಜಿಲ್ಲೆಯ ಮಿರ್ಝಾಪುರ ಉಪಜಿಲ್ಲೆಯ ಮಹೇರಾ ಯೂನಿಯನ್ ವ್ಯಾಪ್ತಿಯ ನಗರ ಛಾವಲಿ ಗ್ರಾಮದ ನಿವಾಸಿ ಸಿಟಿ ಅವರ ತಂದೆ ಫಝಲ್ ಮಿಯಾ, ನಾಲ್ಕು ವರ್ಷಗಳ ಹಿಂದೆ ಕಿರಿಯ ಮಗಳನ್ನು ಸೌದಿ ಅರೇಬಿಯಾಕ್ಕೆ ಕಳುಹಿಸಲು 1.5 ಲಕ್ಷ ಟಾಕಾಗಳನ್ನು ಸಾಲವಾಗಿ ಪಡೆದಿದ್ದರು. 'ಅಸಭ್ಯ ಕೃತ್ಯ'ವೊಂದರಲ್ಲಿ ತಪ್ಪಿತಸ್ಥಳೆಂದು ನ್ಯಾಯಾಲಯ ತೀರ್ಪು ನೀಡಿದ ಬಳಿಕ ಸಿಟಿಗೆ ಮರಣದಂಡನೆ ವಿಧಿಸಲಾಗಿತ್ತು. ಇದೀಗ ಆಕೆಯನ್ನು ಗಲ್ಲಿಗೇರಿಸಲಾಗಿದೆ ಎಂಬ ಸುದ್ದಿ ತಂದೆಯನ್ನು ತಲುಪಿದೆ.
► ಐದು ತಿಂಗಳ ಬಳಿಕ ನಿಂತಿತ್ತು ಹಣದ ಹರಿವು
'ದಿ ಡೈಲಿ ಸ್ಟಾರ್' ಪತ್ರಿಕೆಯೊಂದಿಗೆ ಮಾತನಾಡಿದ ಫಜಲ್ ಮಿಯಾ, ಮಗಳು ಆರಂಭದ ಐದು ತಿಂಗಳು ಮನೆಗೆ ಹಣ ಕಳುಹಿಸುತ್ತಿದ್ದಳು ಎಂದು ನೆನಪಿಸಿಕೊಂಡರು.
"ಮೊದಲ ಐದು ತಿಂಗಳು ಆಕೆ ಮನೆಗೆ ಹಣ ಕಳುಹಿಸಿದ್ದಳು. ಒಂದು ದಿನ ಕರೆ ಮಾಡಿ, ತಾನು ಜೈಲಿಗೆ ಹೋಗಿರುವುದಾಗಿ ತಿಳಿಸಿದಳು" ಎಂದು ಅವರು ಹೇಳಿದರು.
ಸೌದಿ ಅರೇಬಿಯಾದಲ್ಲಿ ಇತರ ಮಹಿಳಾ ಕಾರ್ಮಿಕರೊಂದಿಗೆ ನಡೆದ ಜಗಳದ ಬಳಿಕ ತನ್ನನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಮಗಳು ತಿಳಿಸಿದ್ದಾಗಿ ಫಝಲ್ ಮಿಯಾ ವಿವರಿಸಿದರು.
► ಒಂದು ವರ್ಷ ಸಂಪರ್ಕವೇ ಇರಲಿಲ್ಲ
ಈ ಘಟನೆಯ ಬಳಿಕ ಸುಮಾರು ಒಂದು ವರ್ಷದವರೆಗೆ ಕುಟುಂಬಕ್ಕೆ ಸಿಟಿಯೊಂದಿಗೆ ಸಂಪರ್ಕ ಸಾಧ್ಯವಾಗಿರಲಿಲ್ಲ. ಬಳಿಕ ಆಕೆ ಪ್ರತಿ ತಿಂಗಳು ಕುಟುಂಬದ ಸದಸ್ಯರಿಗೆ ಕರೆ ಮಾಡಲು ಆರಂಭಿಸಿದ್ದಳು ಎಂದು ವರದಿ ತಿಳಿಸಿದೆ.
ಆದರೆ, ತನ್ನ ವಿರುದ್ಧದ ಪ್ರಕರಣ, ನ್ಯಾಯಾಲಯದ ವಿಚಾರಣೆ ಅಥವಾ ತನಗೆ ವಿಧಿಸಲಾದ ಶಿಕ್ಷೆಯ ಕುರಿತು ಸಿಟಿ ಕುಟುಂಬದವರಿಗೆ ಎಂದಿಗೂ ವಿವರವಾಗಿ ತಿಳಿಸಿರಲಿಲ್ಲ. ಹೀಗಾಗಿ, ಆಕೆಯ ಗಲ್ಲುಶಿಕ್ಷೆಯ ಸುದ್ದಿ ಕುಟುಂಬವನ್ನು ತೀವ್ರ ಆಘಾತಕ್ಕೆ ದೂಡಿದೆ.
ಮಗಳನ್ನು ವಿದೇಶಕ್ಕೆ ಕಳುಹಿಸಲು ಸಾಲ ಮಾಡಿದ್ದ ತಂದೆ ಈಗ ಆಕೆಯ ಬಗ್ಗೆ ಅಧಿಕೃತ ಮಾಹಿತಿ ದೊರೆಯುವುದನ್ನೇ ಎದುರು ನೋಡುತ್ತಿದ್ದಾರೆ. ಸಿಟಿ ಅಖ್ತರ್ ಅವರನ್ನು ಗಲ್ಲಿಗೇರಿಸಲಾಗಿದೆ ಎಂಬ ಸುದ್ದಿ ಹೊರಬಿದ್ದಿದ್ದರೂ, ಕುಟುಂಬಕ್ಕೆ ಈವರೆಗೆ ಅಧಿಕೃತ ದೃಢೀಕರಣ ಸಿಕ್ಕಿಲ್ಲ.
ಸೌಜನ್ಯ: indianexpress.com