ಇಸ್ರೇಲ್ ಪ್ರಧಾನಿ ಮರುಚುನಾವಣೆಗೆ ನೆತನ್ಯಾಹು ಬೆಂಬಲಕ್ಕೆ ನಿಂತ ಟ್ರಂಪ್; ವ್ಯಾನ್ಸ್ ತಟಸ್ಥ!
‘ನಾನು ಬೆಂಬಲಿಸುವುದೂ ಇಲ್ಲ, ವಿರೋಧಿಸುವುದೂ ಇಲ್ಲ’ ಎಂದ ಅಮೆರಿಕ ಉಪಾಧ್ಯಕ್ಷ: time. com ವರದಿ
Photo Credit : PTI
ವಾಷಿಂಗ್ಟನ್, ಅ. 20: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮರುಚುನಾವಣೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮಾತ್ರ ನೆತನ್ಯಾಹು ಅವರ ಪರವಾಗಿ ನಿಲ್ಲಲು ನಿರಾಕರಿಸುವ ಮೂಲಕ ಟ್ರಂಪ್ ಅವರ ನಿಲುವಿನಿಂದ ಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು time.com ವರದಿ ಮಾಡಿದೆ.
ಅಕ್ಟೋಬರ್ 27ರಂದು ನಡೆಯಲಿರುವ ಇಸ್ರೇಲ್ ಚುನಾವಣೆಯಲ್ಲಿ ನೆತನ್ಯಾಹು ಅವರನ್ನು ಬೆಂಬಲಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ವ್ಯಾನ್ಸ್, ಅಮೆರಿಕದ ಅಭ್ಯರ್ಥಿಗಳಿಗೆ ಮಾತ್ರ ತಾನು ಬೆಂಬಲ ನೀಡುವುದಾಗಿ ಹೇಳಿದರು. ಸದ್ಯ ತಮ್ಮ ಗಮನ ಅಮೆರಿಕದ ಮಧ್ಯಂತರ ಚುನಾವಣೆಗಳ ಮೇಲಿದೆ ಎಂದ ಅವರು, ಇಸ್ರೇಲ್ ಚುನಾವಣೆಯಲ್ಲಿ ತಾನು ಭಾಗಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
"ನಾನು ನೆತನ್ಯಾಹು ಅವರನ್ನು ಬೆಂಬಲಿಸುವುದೂ ಇಲ್ಲ, ವಿರೋಧಿಸುವುದೂ ಇಲ್ಲ" ಎಂಬ ವ್ಯಾನ್ಸ್ ಅವರ ಹೇಳಿಕೆ, ನೆತನ್ಯಾಹು ಅವರಿಗೆ 'ಸಂಪೂರ್ಣ ಮತ್ತು ಒಟ್ಟಾರೆ' ಬೆಂಬಲ ಘೋಷಿಸಿದ್ದ ಟ್ರಂಪ್ ಅವರ ನಿಲುವಿಗೆ ತದ್ವಿರುದ್ಧವಾಗಿದೆ.
ನೆತನ್ಯಾಹು ಅವರನ್ನು 'ಮಹಾನ್ ಯೋಧ' ಪ್ರಧಾನಿ ಎಂದು ಬಣ್ಣಿಸಿದ್ದ ಟ್ರಂಪ್, ಅವರ ಧೈರ್ಯ ಮತ್ತು ಸಹಿಷ್ಣುತೆಯನ್ನು ಶ್ಲಾಘಿಸಿದ್ದರು. ಇರಾನ್ ಯುದ್ಧದ ಕುರಿತು ಮಾತನಾಡಿದ್ದ ಅವರು, ಇಸ್ರೇಲ್ ನಲ್ಲಿ ನೆತನ್ಯಾಹು ಅವರಂತಹ ನಾಯಕ ಇಲ್ಲದಿದ್ದರೆ ಅಮೆರಿಕವೇ ಪರಿಸ್ಥಿತಿಯನ್ನು ನಿಭಾಯಿಸಬೇಕಾಗುತ್ತಿತ್ತು ಎಂದು ಹೇಳಿದ್ದರು.
2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯನ್ನು ನಿಭಾಯಿಸಿದ ರೀತಿಯ ಬಗ್ಗೆ ನೆತನ್ಯಾಹು ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ದಾಳಿಯ ಬಳಿಕ ನಡೆದ ಇಸ್ರೇಲ್–ಹಮಾಸ್ ಯುದ್ಧವು ಗಾಝಾದಲ್ಲಿ ಭೀಕರ ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಿದೆ. ಆಕ್ರಮಿತ ವೆಸ್ಟ್ ಬ್ಯಾಂಕ್ ನ ಫೆಲೆಸ್ತೀನ್ ನ ಹಳ್ಳಿಗಳ ಮೇಲೆ ಇಸ್ರೇಲಿ ವಸಾಹತುಗಾರರು ನಡೆಸಿದ ಹಿಂಸಾಚಾರದ ವರದಿಗಳೂ ಅವರ ಸರ್ಕಾರದ ವಿರುದ್ಧ ಟೀಕೆಗೆ ಕಾರಣವಾಗಿವೆ. ಹೀಗಾಗಿ, ಮುಂಬರುವ ಚುನಾವಣೆ ನೆತನ್ಯಾಹು ಅವರ ರಾಜಕೀಯ ಭವಿಷ್ಯಕ್ಕೆ ನಿರ್ಣಾಯಕವಾಗಿದೆ.
ಮಿತ್ರರಾಷ್ಟ್ರದ ವಿರುದ್ಧವೇ ಟೀಕೆ ಏಕೆ?
ಅಮೆರಿಕದೊಂದಿಗಿನ ಸಂಬಂಧದ ವಿಚಾರದಲ್ಲಿ ವ್ಯಾನ್ಸ್ ಈ ಹಿಂದೆಯೂ ಇಸ್ರೇಲ್ ಗೆ ಎಚ್ಚರಿಕೆ ನೀಡಿದ್ದರು. ಇರಾನ್ ಸಂಘರ್ಷದ ಸಂದರ್ಭದಲ್ಲಿ ಟೆಹ್ರಾನ್ ಜತೆ ವಾಷಿಂಗ್ಟನ್ ನಡೆಸುತ್ತಿದ್ದ ಮಾತುಕತೆಗಳನ್ನು ವಿರೋಧಿಸಿದ್ದ ನೆತನ್ಯಾಹು ಸಂಪುಟದ ಸದಸ್ಯರನ್ನು ಅವರು ಟೀಕಿಸಿದ್ದರು.
ವೈಟ್ ಹೌಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ವ್ಯಾನ್ಸ್, "ಪ್ರಸ್ತುತ ಜಗತ್ತಿನಲ್ಲಿ ಇಸ್ರೇಲ್ ಬಗ್ಗೆ ಸಹಾನುಭೂತಿ ಹೊಂದಿರುವ ಏಕೈಕ ರಾಷ್ಟ್ರದ ಮುಖ್ಯಸ್ಥರೆಂದರೆ ಡೊನಾಲ್ಡ್ ಜೆ. ಟ್ರಂಪ್. ಅವರು ವಿಶ್ವದ ಮಹಾಶಕ್ತಿಯಾದ ಅಮೆರಿಕದ ಮುಖ್ಯಸ್ಥರಾಗಿದ್ದಾರೆ" ಎಂದು ಹೇಳಿದ್ದರು.
"ನಾನು ಇಸ್ರೇಲ್ ಸರ್ಕಾರದ ಸಂಪುಟದಲ್ಲಿದ್ದಿದ್ದರೆ, ಜಗತ್ತಿನಲ್ಲಿ ನನಗಿರುವ ಏಕೈಕ ಪ್ರಬಲ ಮಿತ್ರರಾಷ್ಟ್ರದ ವಿರುದ್ಧ ಟೀಕೆಗಳನ್ನು ಮಾಡುತ್ತಿರಲಿಲ್ಲ" ಎಂದು ಅವರು ಹೇಳುವ ಮೂಲಕ ಇಸ್ರೇಲ್ ಸರ್ಕಾರದ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಆದರೆ, ವಿದೇಶಗಳ ಚುನಾವಣೆಯಲ್ಲಿ ತಾನು ಭಾಗಿಯಾಗುವುದಿಲ್ಲ ಎಂಬ ವ್ಯಾನ್ಸ್ ಅವರ ಈಗಿನ ನಿಲುವು, ಅವರು ಈ ಹಿಂದೆ ನಡೆಸಿದ್ದ ವಿದೇಶಿ ಚುನಾವಣಾ ಪ್ರಚಾರಗಳಿಗೆ ವ್ಯತಿರಿಕ್ತವಾಗಿದೆ.
► ಹಂಗೇರಿ, ಜರ್ಮನಿಯಲ್ಲೂ ಪ್ರಚಾರ
ಎಪ್ರಿಲ್ ನಲ್ಲಿ ಹಂಗೇರಿಯಲ್ಲಿ ಸಂಸದೀಯ ಚುನಾವಣೆ ನಡೆಯುವ ಸಂದರ್ಭದಲ್ಲಿ ವ್ಯಾನ್ಸ್ ಆ ದೇಶಕ್ಕೆ ಭೇಟಿ ನೀಡಿದ್ದರು. ಆಗ ಟ್ರಂಪ್ ಆಡಳಿತವು ಅಂದಿನ ಪ್ರಧಾನಿ ವಿಕ್ಟರ್ ಓರ್ಬನ್ ಅವರಿಗೆ ಸಂಪೂರ್ಣ ಬೆಂಬಲ ನೀಡಿತ್ತು. ಓರ್ಬನ್ ಅವರು ವಿರೋಧ ಪಕ್ಷದ ನಾಯಕ ಪೀಟರ್ ಮಗ್ಯಾರ್ ವಿರುದ್ಧ ಸ್ಪರ್ಧಿಸಿದ್ದರು. ಆದರೆ, ಚುನಾವಣೆಯಲ್ಲಿ ಮಗ್ಯಾರ್ ಜಯಗಳಿಸುವ ಮೂಲಕ ಓರ್ಬನ್ ಅವರ 16 ವರ್ಷಗಳ ಆಡಳಿತಕ್ಕೆ ತೆರೆ ಬಿದ್ದಿತ್ತು.
ಬುಡಾಪೆಸ್ಟ್ ನಲ್ಲಿ ಮಾತನಾಡಿದ್ದ ವ್ಯಾನ್ಸ್, ಅಮೆರಿಕದ ಅಧ್ಯಕ್ಷರು ಮತ್ತು ಹಂಗೇರಿಯ ಪ್ರಧಾನಿ ಒಟ್ಟಾಗಿ ಹಲವು ಸಾಧನೆಗಳನ್ನು ಮಾಡಿದ್ದಾರೆ ಎಂದು ಹೇಳಿದ್ದರು. ಚುನಾವಣೆಯಲ್ಲಿ ಓರ್ಬನ್ ಅವರಿಗೆ ಸಾಧ್ಯವಾದಷ್ಟು ನೆರವು ನೀಡುವುದಾಗಿಯೂ ತಿಳಿಸಿದ್ದರು. ಬಳಿಕ ಅವರ ಪರವಾಗಿ ನಡೆದ ರ್ಯಾಲಿಯಲ್ಲಿ ಭಾಷಣ ಮಾಡಿದ್ದರು.
2025ರ ಫೆಬ್ರವರಿಯಲ್ಲಿ ಜರ್ಮನಿಯ ಚುನಾವಣೆಗೆ ಕೆಲವೇ ದಿನಗಳಿದ್ದಾಗ, ವ್ಯಾನ್ಸ್ ಅವರು ಬಲಪಂಥೀಯ ಪಕ್ಷವಾದ 'ಆಲ್ಟರ್ನೇಟಿವ್ ಫಾರ್ ಜರ್ಮನಿ' (AfD)ಯ ಸಹನಾಯಕಿ ಆಲಿಸ್ ವೈಡೆಲ್ ಅವರನ್ನು ಭೇಟಿಯಾಗಿದ್ದರು.
ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಮಾತನಾಡಿದ್ದ ಅವರು, ಯುರೋಪ್ ನಲ್ಲಿ ವಾಕ್ ಸ್ವಾತಂತ್ರ್ಯ ಕುಸಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಇತರ ಪಕ್ಷಗಳು AfD ಜತೆ ಕೆಲಸ ಮಾಡದಿರುವ ಜರ್ಮನಿಯ 'ಫೈರ್ ವಾಲ್' ರಾಜಕೀಯ ವಿಧಾನವನ್ನೂ ಟೀಕಿಸಿದ್ದರು.
"ಪ್ರಜಾಪ್ರಭುತ್ವವು ಜನರ ಧ್ವನಿಗೆ ಮಹತ್ವವಿದೆ ಎಂಬ ಪವಿತ್ರ ತತ್ವದ ಮೇಲೆ ನಿಂತಿದೆ. ಫೈರ್‌ವಾಲ್‌ಗಳಿಗೆ ಯಾವುದೇ ಅವಕಾಶವಿಲ್ಲ" ಎಂದು ಅವರು ಹೇಳಿದ್ದರು.
ಲೆಬನಾನ್ ವಿಚಾರದಲ್ಲಿ ಟ್ರಂಪ್ ಅಸಮಾಧಾನ
ಟ್ರಂಪ್ ಮತ್ತು ನೆತನ್ಯಾಹು ನಡುವಿನ ಸಂಬಂಧ ಇತ್ತೀಚಿನ ತಿಂಗಳುಗಳಲ್ಲಿ ಹಲವು ಬಾರಿ ವಿವಾದಕ್ಕೆ ಕಾರಣವಾಗಿದೆ. ವಿಶೇಷವಾಗಿ ಲೆಬನಾನ್ ನಲ್ಲಿ ಹಿಜ್ಬುಲ್ಲಾ ಬಂಡುಕೋರರ ಗುಂಪಿನ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಯುದ್ಧದ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ.
ಜೂನ್ ನಲ್ಲಿ ಹಿಜ್ಬುಲ್ಲಾ ವಿರುದ್ಧದ ಹೊಸ ಹೋರಾಟವು ಅಮೆರಿಕ–ಇರಾನ್ ಶಾಂತಿ ಒಪ್ಪಂದದ ಪ್ರಯತ್ನಕ್ಕೆ ಅಡ್ಡಿಯಾಗಬಹುದು ಎಂಬ ಆತಂಕ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ನೆತನ್ಯಾಹು ಅವರು ಲೆಬನಾನ್ ವಿಚಾರದಲ್ಲಿ ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಟ್ರಂಪ್ ಹೇಳಿದ್ದರು.
ಫ್ರಾನ್ಸ್ ನಲ್ಲಿ ನಡೆದ G7 ಶೃಂಗಸಭೆಯ ಸಂದರ್ಭದಲ್ಲಿ ಮಾತನಾಡಿದ್ದ ಟ್ರಂಪ್, "ಲೆಬನಾನ್ ಮತ್ತು ಹಿಜ್ಬುಲ್ಲಾ ವಿಚಾರದಲ್ಲಿ ಇಸ್ರೇಲ್ ನಡೆದುಕೊಂಡ ರೀತಿಯಿಂದ ನನಗೆ ಸಂತೋಷವಾಗಿಲ್ಲ" ಎಂದಿದ್ದರು. ಇಸ್ರೇಲಿ ಪಡೆಗಳು ಮತ್ತು ಹಿಜ್ಬುಲ್ಲಾ ನಡುವಿನ ದಾಳಿಗಳು ಮುಂದುವರಿದರೆ ಇರಾನ್ ಜತೆಗಿನ ಒಪ್ಪಂದದ ಪ್ರಯತ್ನದ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ್ದರು.
ನೆತನ್ಯಾಹು ಅವರೊಂದಿಗೆ 'ನಂಬಲಾಗದ ಸಂಬಂಧ' ಹೊಂದಿರುವುದಾಗಿ ಹೇಳಿದ್ದ ಟ್ರಂಪ್, "ನಾನು ಮಧ್ಯಪ್ರವೇಶಿಸದಿದ್ದರೆ ಇಸ್ರೇಲ್ ಬಹಳ ಹಿಂದೆಯೇ ಸ್ಫೋಟಗೊಳ್ಳುತ್ತಿತ್ತು" ಎಂದಿದ್ದರು.
ಇದಕ್ಕೂ ಕೆಲವು ದಿನಗಳ ಮೊದಲು, ಹಿಜ್ಬುಲ್ಲಾ ಇಸ್ರೇಲ್ ಮೇಲೆ ನಡೆಸಿದ ದಾಳಿಗೆ ಪ್ರತೀಕಾರವಾಗಿ ಬೈರುತ್ ನಲ್ಲಿರುವ ಆ ಸಂಘಟನೆಯ ಭದ್ರಕೋಟೆಯ ಮೇಲೆ ದಾಳಿ ನಡೆಸಲು ನೆತನ್ಯಾಹು ಆದೇಶಿಸಿದ ಬಳಿಕ ಟ್ರಂಪ್ ಅವರನ್ನು 'ಅಬ್ಬಾ ಹುಚ್ಚ' ಎಂದು ಕರೆದಿದ್ದರು ಎಂದು ವರದಿಯಾಗಿತ್ತು.
ಇಸ್ರೇಲ್‌ಗೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಭೇಟಿ
ಇಸ್ರೇಲ್ ಚುನಾವಣೆಗೆ ಮುನ್ನ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್‌ಸೆತ್ ಅವರು ಸೋಮವಾರ ಅಘೋಷಿತವಾಗಿ ಇಸ್ರೇಲ್ ಗೆ ಭೇಟಿ ನೀಡಿ ನೆತನ್ಯಾಹು ಅವರನ್ನು ಭೇಟಿಯಾಗಿದ್ದಾರೆ ಎಂದು 'ಆಕ್ಸಿಯೋಸ್' ವರದಿ ಮಾಡಿದೆ. ಈ ಬಗ್ಗೆ ಮಾಹಿತಿ ಹೊಂದಿರುವ ಇಬ್ಬರನ್ನು ಉಲ್ಲೇಖಿಸಿ ವರದಿ ಪ್ರಕಟಿಸಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಲು ಪೆಂಟಗಾನ್ ನಿರಾಕರಿಸಿದೆ. 'ಟೈಮ್' ನಿಯತಕಾಲಿಕೆಯು ಪ್ರತಿಕ್ರಿಯೆ ಕೋರಿ ಇಸ್ರೇಲಿ ರಾಯಭಾರ ಕಚೇರಿ ಮತ್ತು ನೆತನ್ಯಾಹು ಅವರ ಕಚೇರಿಯನ್ನು ಸಂಪರ್ಕಿಸಿದೆ.
ಸೌಜನ್ಯ: time.com