UAEಯ ಹಲವು ಎಮಿರೇಟ್ ಗಳಲ್ಲಿ ವಿಚಿತ್ರ ವಾಸನೆ; ಸಾರ್ವಜನಿಕರ ಸುರಕ್ಷತೆಗೆ ಅಪಾಯವಿಲ್ಲ: ಶಾರ್ಜಾ ಪೊಲೀಸರ ಭರವಸೆ
ಫೆಡರಲ್ ಅಧಿಕಾರಿಗಳಿಂದ ವಿವರವಾದ ವರದಿ ನಿರೀಕ್ಷೆ
Photo Credit: gulfnews
ಶಾರ್ಜಾ: ಸಂಯುಕ್ತ ಅರಬ್ ಎಮಿರೇಟ್ಸ್ (UAE)ನ ಶಾರ್ಜಾ ಸೇರಿದಂತೆ ಹಲವು ಎಮಿರೇಟ್ ಗಳಲ್ಲಿ ವಿಚಿತ್ರ ವಾಸನೆಗಳು ಕಂಡುಬಂದಿರುವ ವರದಿಗಳ ಹಿನ್ನೆಲೆಯಲ್ಲಿ, ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಗೆ ಯಾವುದೇ ಅಪಾಯವಿಲ್ಲ ಎಂದು ಶಾರ್ಜಾ ಪೊಲೀಸರು ಭರವಸೆ ನೀಡಿದ್ದಾರೆ ಎಂದು gulfnews.com ವರದಿ ಮಾಡಿದೆ.
ಸೋಮವಾರ ಮೊದಲ ಬಾರಿಗೆ ವಾಸನೆಗಳ ಕುರಿತು ವರದಿಯಾದಾಗಿನಿಂದ ಫೆಡರಲ್ ಮತ್ತು ಸ್ಥಳೀಯ ಸರ್ಕಾರಿ ಸಂಸ್ಥೆಗಳ ಸಹಯೋಗದಲ್ಲಿ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಶಾರ್ಜಾ ಪೊಲೀಸ್ ಕಮಾಂಡರ್-ಇನ್-ಚೀಫ್ ಲೆಫ್ಟಿನೆಂಟ್ ಜನರಲ್ ಅಬ್ದುಲ್ಲಾ ಮುಬಾರಕ್ ಬಿನ್ ಆಮರ್ ತಿಳಿಸಿದ್ದಾರೆ.
ಶಾರ್ಜಾ ಟಿವಿ ಮತ್ತು ರೇಡಿಯೊದಲ್ಲಿ ಪ್ರಸಾರವಾಗುವ ‘ಡೈರೆಕ್ಟ್ ಲೈನ್’ (Direct Line) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಚಿತ್ರ ವಾಸನೆಗಳಿಗೆ ಕಾರಣವೇನು ಹಾಗೂ ಇದರಿಂದ ಯಾವುದೇ ಅಪಾಯವಿದೆಯೇ ಎಂಬುದನ್ನು ಪತ್ತೆಹಚ್ಚಲು ಸಂಬಂಧಪಟ್ಟ ಅಧಿಕಾರಿಗಳು ತಪಾಸಣೆ ಮತ್ತು ಮೌಲ್ಯಮಾಪನ ನಡೆಸುತ್ತಿದ್ದಾರೆ ಎಂದರು.
‘ಪರಿಸ್ಥಿತಿ ಸುರಕ್ಷಿತ ಮತ್ತು ಸ್ಥಿರವಾಗಿದೆ. ಯಾವುದೇ ರೀತಿಯ ಅಪಾಯವಿಲ್ಲ ಎಂದು ಸಾರ್ವಜನಿಕರಿಗೆ ಭರವಸೆ ನೀಡಲು ಬಯಸುತ್ತೇವೆ’ ಎಂದು ಅವರು ಹೇಳಿದರು.
ಸೋಮವಾರ ವರದಿಯಾಗಿದ್ದ ವಾಸನೆಗಳು ಬಳಿಕ ಮಾಯವಾಗಿವೆ. ಆದರೂ, ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಮೇಲ್ವಿಚಾರಣೆ ಮತ್ತು ತಪಾಸಣೆ ಮುಂದುವರಿಸಿದ್ದಾರೆ. ಸಂಬಂಧಪಟ್ಟ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಸ್ಥಳದಲ್ಲೇ ಇದ್ದು, ನಿವಾಸಿಗಳಿಗೆ ಅಪಾಯ ಉಂಟುಮಾಡಬಹುದಾದ ಅಂಶಗಳಿವೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ ಎಂದು ಬಿನ್ ಆಮರ್ ತಿಳಿಸಿದರು.
► ಹಲವು ಎಮಿರೇಟ್ ಗಳಲ್ಲೂ ವರದಿ
ವಿಚಿತ್ರ ವಾಸನೆಗಳ ಕುರಿತು ಬಂದಿರುವ ವರದಿಗಳು ಶಾರ್ಜಾಕ್ಕೆ ಮಾತ್ರ ಸೀಮಿತವಾಗಿಲ್ಲ. ಯುಎಇಯ ಹಲವು ಎಮಿರೇಟ್ ಗಳಲ್ಲಿಯೂ ಇಂತಹ ವರದಿಗಳು ಬಂದಿವೆ ಎಂದು ಬಿನ್ ಆಮರ್ ಸ್ಪಷ್ಟಪಡಿಸಿದರು.
ಘಟನೆಗೆ ಕಾರಣವಾದ ಸನ್ನಿವೇಶಗಳ ಕುರಿತು ಸ್ಪಷ್ಟನೆ ನೀಡಲು ಫೆಡರಲ್ ಅಧಿಕಾರಿಗಳು ವಿವರವಾದ ವರದಿ ಬಿಡುಗಡೆ ಮಾಡುವ ಹಾಗೂ ಮಾಧ್ಯಮಗಳ ಮೂಲಕ ಹೆಚ್ಚಿನ ಮಾಹಿತಿ ಒದಗಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಪರಿಸ್ಥಿತಿಯ ಬೆಳವಣಿಗೆಗಳನ್ನು ಮೌಲ್ಯಮಾಪನ ಮಾಡಲು ಮತ್ತು ಅಗತ್ಯ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸಲು ಶಾರ್ಜಾ ಪೊಲೀಸರು ಫೆಡರಲ್ ಹಾಗೂ ಸ್ಥಳೀಯ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದರು.
ನಿವಾಸಿಗಳ ಆತಂಕವನ್ನು ಉಲ್ಲೇಖಿಸಿದ ಬಿನ್ ಆಮರ್, ಸಾರ್ವಜನಿಕರು ಪ್ರಶ್ನೆಗಳನ್ನು ಕೇಳಿ ಅಧಿಕಾರಿಗಳಿಂದ ಸ್ಪಷ್ಟನೆ ಪಡೆಯುವ ಹಕ್ಕು ಹೊಂದಿದ್ದಾರೆ ಎಂದು ಹೇಳಿದರು. ಜನರ ಆತಂಕವನ್ನು ನಿವಾರಿಸುವುದು ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಆದ್ಯತೆಯಾಗಿದೆ ಎಂದು ತಿಳಿಸಿದರು.
ಸಂಬಂಧಪಟ್ಟ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ. ಆದರೆ, ವರದಿಯಾದ ವಿಚಿತ್ರ ವಾಸನೆಗಳಿಂದ ಯಾವುದೇ ಹಾನಿಯಾಗಿರುವ ಸೂಚನೆಗಳಿಲ್ಲ ಎಂದು ಪುನರುಚ್ಚರಿಸಿದ ಅವರು, ನಿವಾಸಿಗಳು ಆತಂಕಪಡದಂತೆ ಮನವಿ ಮಾಡಿದರು.
ಕಾರ್ಯಾಚರಣೆಯಲ್ಲಿ ತೊಡಗಿರುವ ಸರ್ಕಾರಿ ಸಂಸ್ಥೆಗಳ ತ್ವರಿತ ಪ್ರತಿಕ್ರಿಯೆ ಮತ್ತು ಪ್ರಯತ್ನಗಳನ್ನು ಶ್ಲಾಘಿಸಿದ ಬಿನ್ ಆಮರ್, ಬಾಧಿತ ಪ್ರದೇಶಗಳಲ್ಲಿನ ಜನರ ಸುರಕ್ಷತೆಗಾಗಿ ನಿರಂತರ ಮೇಲ್ವಿಚಾರಣೆ ಹಾಗೂ ತಪಾಸಣೆ ನಡೆಸಲಾಗುತ್ತಿದೆ ಎಂದರು. ಫೆಡರಲ್ ಪ್ರಾಧಿಕಾರಗಳು ಮೌಲ್ಯಮಾಪನ ಪೂರ್ಣಗೊಳಿಸಿ ವರದಿ ಸಲ್ಲಿಸಿದ ಬಳಿಕ ಘಟನೆಯ ಕುರಿತು ಹೆಚ್ಚಿನ ಸ್ಪಷ್ಟನೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಸೌಜನ್ಯ: gulfnews.com