ಹಮಾಸ್ ನ ರಾಜಕೀಯ ಬ್ಯೂರೋ ಮುಖ್ಯಸ್ಥರಾಗಿ ಖಲೀಲ್ ಅಲ್-ಹಯ್ಯ ನೇಮಕ
ಖಲೀಲ್ ಅಲ್-ಹಯ್ಯ - Photo Credit : aljazeera
ಗಾಝಾ: 2024ರ ಅಕ್ಟೋಬರ್ ನಲ್ಲಿ ಗಾಝಾದಲ್ಲಿ ಇಸ್ರೇಲಿ ಸೇನೆಯ ಕಾರ್ಯಾಚರಣೆಯಲ್ಲಿ ಮೃತಪಟ್ಟ ಹಮಾಸ್ ನ ರಾಜಕೀಯ ಬ್ಯೂರೋ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಅವರ ಉತ್ತರಾಧಿಕಾರಿಯಾಗಿ ಖಲೀಲ್ ಅಲ್-ಹಯ್ಯ ಅವರನ್ನು ಸಂಘಟನೆಯ ಹೊಸ ರಾಜಕೀಯ ಬ್ಯೂರೋ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಫೆಲೆಸ್ತೀನ್ ನ ಸಂಘಟನೆ ಸೋಮವಾರ ಪ್ರಕಟಿಸಿದೆ.
ಕಳೆದ ವರ್ಷ ಟೆಹ್ರಾನ್ ನಲ್ಲಿ ಹಮಾಸ್ ನ ಉನ್ನತ ನಾಯಕ ಇಸ್ಮಾಯಿಲ್ ಹನಿಯೆ, ಗಾಝಾದಲ್ಲಿ ಯಾಹ್ಯಾ ಸಿನ್ವಾರ್ ಹಾಗೂ ಸಂಘಟನೆಯ ಮಿಲಿಟರಿ ಕಮಾಂಡರ್ ಮೊಹಮ್ಮದ್ ಡೀಫ್ ಹತ್ಯೆಯಾದ ಬಳಿಕ ಖಲೀಲ್ ಅಲ್-ಹಯ್ಯ ಅವರ ಪ್ರಾಮುಖ್ಯತೆ ಸಂಘಟನೆಯಲ್ಲಿ ಹೆಚ್ಚಿತ್ತು. ಈ ಬೆಳವಣಿಗೆಗಳ ನಂತರ ಅವರು ಹಮಾಸ್ ನ ರಾಜಕೀಯ ಮತ್ತು ರಾಜತಾಂತ್ರಿಕ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು.
1960ರಲ್ಲಿ ಗಾಝಾ ಪಟ್ಟಿಯಲ್ಲಿ ಜನಿಸಿದ ಖಲೀಲ್ ಅಲ್-ಹಯ್ಯ, 1987ರಲ್ಲಿ ಹಮಾಸ್ ಸ್ಥಾಪನೆಯಾದಾಗಿನಿಂದಲೇ ಸಂಘಟನೆಯೊಂದಿಗಿದ್ದಾರೆ. ಸಂಘಟನೆಯ ರಾಜಕೀಯ ಬ್ಯೂರೋದಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿರುವ ಅವರನ್ನು ಇದೀಗ ಹಮಾಸ್ ನ ಅತ್ಯುನ್ನತ ರಾಜಕೀಯ ಹುದ್ದೆಯಾದ ರಾಜಕೀಯ ಬ್ಯೂರೋ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.