ಇರಾನ್ ಮೇಲೆ ಮುಂದುವರಿದ ಅಮೆರಿಕದ ವೈಮಾನಿಕ ದಾಳಿ : ಬಹರೈನ್, ಕುವೈತ್ ಸೇರಿದಂತೆ ಗಲ್ಫ್ ದೇಶಗಳ ಮೇಲೆ ಇರಾನ್‌ನಿಂದ ಪ್ರತಿದಾಳಿ
ಸಾಂದರ್ಭಿಕ ಚಿತ್ರ (AI)
ವಾಶಿಂಗ್ಟನ್, ಜು.20: ಸೋಮವಾರ ಬೆಳಗ್ಗೆ ಮಧ್ಯಪ್ರಾಚ್ಯದಲ್ಲಿ ಮತ್ತೆ ಸಂಘರ್ಷ ಭುಗಿಲೆದ್ದಿದೆ. ಇರಾನ್ ವಿರುದ್ಧ ಅಮೆರಿಕ ಮತ್ತೊಂದು ಸುತ್ತಿನ ದಾಳಿಯನ್ನು ಘೋಷಿಸಿದ್ದರೆ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾಡ್ರ್ಸ್ (ಐಆರ್ಜಿಸಿ) ಸಿರಿಯಾದಲ್ಲಿರುವ `ಶತ್ರುಗಳ ಕಮಾಂಡ್ ಸೆಂಟರ್' ಅನ್ನು ನಾಶಪಡಿಸಿರುವುದಾಗಿ ಪ್ರತಿಪಾದಿಸಿದೆ.
ಇರಾನ್‌ನ ಏಕೈಕ ನಾಗರಿಕ ಪರಮಾಣು ಸ್ಥಾವರವನ್ನು ಹೊಂದಿರುವ ದಕ್ಷಿಣ ಬಂದರು ನಗರವಾದ ಬುಶೆಹರ್ನ ಹಲವು ಸ್ಥಳಗಳ ಮೇಲೆ ಅಮೆರಿಕ ಇಂದು ಬೆಳಿಗ್ಗೆ ದಾಳಿ ನಡೆಸಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಆಯಕಟ್ಟಿನ ಹಾರ್ಮುಝ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳು ಮತ್ತು ನಾವಿಕರ ಮೇಲೆ ದಾಳಿ ಮಾಡಲು ಬಳಸಲಾಗುತ್ತಿದ್ದ ಇರಾನ್‌ನ ಮಿಲಿಟರಿ ಸಾಮರ್ಥ್ಯಗಳನ್ನು ತಡೆದು ನಿಷ್ಕ್ರಿಯಗೊಳಿಸುವುದು ಈ ದಾಳಿಗಳ ಮುಖ್ಯ ಉದ್ದೇಶವಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ `ಎಕ್ಸ್'ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದಲ್ಲಿ ಹತರಾದ ಮೂವರು ಯುಎಸ್ ಸೇನಾ ಸಿಬ್ಬಂದಿಯ ಗೌರವಾರ್ಥವಾಗಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಹಾರ್ಮುಝ್ ಜಲಸಂಧಿ ಅಮೆರಿಕದ ನಿಯಂತ್ರಣದಲ್ಲಿದೆ : ಟ್ರಂಪ್ ಪ್ರತಿಪಾದನೆ
ಈಗ ನಡೆಯುತ್ತಿರುವ ಸಂಘರ್ಷದಿಂದ ಇರಾನ್ ತೀವ್ರವಾಗಿ ಹಾನಿಗೊಳಗಾಗಿದ್ದು ಆ ದೇಶವು ತನ್ನ ಬಹುತೇಕ ಮಿಲಿಟರಿ ಶಕ್ತಿಯನ್ನು ಕಳೆದುಕೊಂಡಿದೆ. ಕೆಲವು ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ಸೀಮಿತ ಉತ್ಪಾದನಾ ಸಾಮರ್ಥ್ಯವನ್ನು ಹೊರತುಪಡಿಸಿ ಇರಾನ್ ಬಳಿ ಈಗ ಬಹಳ ಕಡಿಮೆ ಉಳಿದಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ.
ಹಾರ್ಮುಝ್ ಜಲಸಂಧಿ ನಮ್ಮ ನಿಯಂತ್ರಣದಲ್ಲಿದೆ. ಅವರ ಬಳಿ ಯಾವುದೇ ನಿಯಂತ್ರಣವಿಲ್ಲ. ಹಾಗಾಗಿ, ಮುಂದೆ ಏನಾಗುತ್ತದೆ ಎಂದು ನೋಡೋಣ ಎಂದು ಟ್ರಂಪ್ ಹೇಳಿದ್ದಾರೆ.
ಬಹರೈನ್‌ನ ವಿಮಾನ ಮಾರ್ಗದರ್ಶಕ ವ್ಯವಸ್ಥೆಯ ಮೇಲೆ ಡ್ರೋನ್ ದಾಳಿ
ತನ್ನ ನಾಗರಿಕ ವಿಮಾನ ಮಾರ್ಗದರ್ಶಕ ವ್ಯವಸ್ಥೆಯ ಉಪಕರಣಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆದಿದೆ ಎಂದು ಬಹರೈನ್ ಸೋಮವಾರ ತಿಳಿಸಿದೆ. ಆದರೆ, ಈ ದಾಳಿಯಿಂದ ವಿಮಾನ ಸಂಚಾರಕ್ಕೆ ಯಾವುದೇ ಅಡಚಣೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಅಧಿಕಾರಿಗಳು ತಕ್ಷಣವೇ ಅನುಮೋದಿತ ಕಾರ್ಯಾಚರಣೆ ಮತ್ತು ಭದ್ರತಾ ನಿಯಮಾವಳಿಗಳನ್ನು ಜಾರಿಗೆ ತಂದಿದ್ದು, ನೌಕಾಯಾನ ಸೇವೆಗಳ ನಿರಂತರತೆ ಹಾಗೂ ವಿಮಾನ ಸಂಚಾರದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ವಿಮಾನ ಸಂಚಾರವು ಸಾಮಾನ್ಯ ರೀತಿಯಲ್ಲಿ ಸಾಗುತ್ತಿದೆ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಸಂಬಂಧಿತ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಲಾಗುತ್ತಿದೆ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.
ಪ್ರಮುಖ ಬೆಳವಣಿಗೆಗಳು:
ಶತ್ರುಗಳ ದಾಳಿಯನ್ನು ವಾಯು ರಕ್ಷಣಾ ವ್ಯವಸ್ಥೆಗಳು ತಡೆಯುತ್ತಿರುವುದರಿಂದ ಬಾಂಬ್ ಸ್ಫೋಟದ ಸದ್ದುಗಳು ಕೇಳಿಬರುತ್ತಿವೆ ಎಂದು ಕುವೈತ್ ಸೇನೆ ಸೋಮವಾರ ತಿಳಿಸಿದೆ.
ಸಿರಿಯಾದ ಅಲ್-ಟ್ಯಾಂಫ್ ಪ್ರದೇಶದಲ್ಲಿರುವ ಶತ್ರುಗಳ ವಿಶೇಷ ಕಾರ್ಯಾಚರಣೆಯ ಕಮಾಂಡ್ ಸೆಂಟರ್ ಮೇಲೆ ದಿಢೀರ್ ದಾಳಿ ನಡೆಸಲಾಗಿದೆ ಎಂದು ಇರಾನ್ ಸೇನೆ ತಿಳಿಸಿದೆ.
ಕುವೈತ್‌ನ ಅಲ್-ಸುಬಿಯಾ ವಿದ್ಯುತ್ ಉತ್ಪಾದನಾ ಮತ್ತು ನೀರು ಸಂಸ್ಕರಣಾ ಘಟಕದ ಮೇಲೆ ಇರಾನ್ ರವಿವಾರ ರಾತ್ರಿ ದಾಳಿ ನಡೆಸಿದೆ. ವಿದ್ಯುತ್, ನೀರು ಮತ್ತು ನವೀಕರಿಸಬಹುದಾದ ಇಂಧನ ಸೌಲಭ್ಯಗಳ ಮೇಲಿನ ದಾಳಿಯಿಂದಾಗಿ ಬೆಂಕಿ ಕಾಣಿಸಿಕೊಂಡು ಭಾರೀ ಹಾನಿಯಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಮಾಹಿತಿ ನೀಡಿದ್ದಾರೆ.