ಮಯುನ್ ದ್ವೀಪ (Photo credit: AP)

ಕೈರೊ: ಗುರುವಾರ ತನ್ನ ಪ್ರಮುಖ ತೈಲ ಪೈಪ್‌ಲೈನ್ ಮೇಲೆ ಡ್ರೋನ್‌ಗಳ ದಾಳಿ ನಡೆದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಅದನ್ನು ಸ್ಥಗಿತಗೊಳಿಸಿದೆ. ಇದೇ ವೇಳೆ ಯೆಮನ್‌ನ ಹೌದಿಗಳು ಕೆಂಪು ಸಮುದ್ರದ ದಕ್ಷಿಣ ಪ್ರವೇಶದ್ವಾರದಲ್ಲಿರುವ ಆಯಕಟ್ಟಿನ ದ್ವೀಪವೊಂದನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದು, ಇದರೊಂದಿಗೆ ಇರಾನ್ ಯುದ್ಧವು ಹೊಸ ತಿರುವನ್ನು ಪಡೆದುಕೊಂಡಿದೆ ಎಂದು Associated Press ವರದಿ ಮಾಡಿದೆ.

ವಿಶ್ವದ ಪ್ರಮುಖ ನೌಕಾ ಮಾರ್ಗಗಳಲ್ಲಿ ಒಂದಾದ ಬಾಬ್ ಎಲ್-ಮಂಡೆಬ್ ಜಲಸಂಧಿಯ ಉದ್ದಕ್ಕೂ ಹೌದಿಗಳು ಹಿಡಿತವನ್ನು ಸಾಧಿಸಿದ್ದಾರೆ.

ತನ್ನ ಈಸ್ಟ್-ವೆಸ್ಟ್ ಪೈಪ್‌ಲೈನ್ ಮೇಲೆ ಡ್ರೋನ್ ದಾಳಿಯ ಬಳಿಕ ತಾನು ಅದನ್ನು ಸ್ಥಗಿತಗೊಳಿಸಿರುವುದಾಗಿ ಸೌದಿ ಅರೇಬಿಯಾ ಶುಕ್ರವಾರ ತಿಳಿಸಿದೆ. ಸೌದಿ ಇಂಧನ ಸಚಿವಾಲಯವು ಈ ಸ್ಥಗಿತವನ್ನು ಮುನ್ನೆಚ್ಚರಿಕೆ ಕ್ರಮ ಎಂದು ಬಣ್ಣಿಸಿದ್ದು, ಇರಾಕ್‌ನ ನೆಲೆಯಿಂದ ಈ ಡ್ರೋನ್ ದಾಳಿ ನಡೆದಿದೆ ಎಂದು ಆರೋಪಿಸಿದೆ. ಇರಾಕ್ ಸರಕಾರಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಅವಕಾಶ ಕಲ್ಪಿಸಲು ತಾನು ತಕ್ಷಣವೇ ಪ್ರತಿಕ್ರಿಯಿಸುವುದಿಲ್ಲ ಎಂದು ಸೌದಿ ಅರೇಬಿಯಾ ಹೇಳಿಕೆಯಲ್ಲಿ ತಿಳಿಸಿದೆ. ಇದೇ ವೇಳೆ ದಾಳಿಯನ್ನು ಖಂಡಿಸಿರುವ ಇರಾಕ್ ಸರಕಾರವು ತನಿಖೆಗೆ ಆದೇಶಿಸಿದೆ.

1980ರ ದಶಕದಲ್ಲಿ ನಿರ್ಮಿಸಲಾದ ಈಸ್ಟ್-ವೆಸ್ಟ್ ಪೈಪ್‌ಲೈನ್ ಇರಾನ್ ಯುದ್ಧದ ಸಂದರ್ಭದಲ್ಲಿ ಹಾರ್ಮುಝ್ ಜಲಸಂಧಿಯ ವ್ಯತ್ಯಯದ ಬಳಿಕ ಸೌದಿ ಅರೇಬಿಯಾದ ತೈಲ ರಫ್ತಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಪೆರಿಮ್ ಎಂದೂ ಕರೆಯಲ್ಪಡುವ ಮಯುನ್ ಎಂಬ ಸಣ್ಣ ಜ್ವಾಲಾಮುಖಿ ದ್ವೀಪವನ್ನು ಹೌದಿಗಳು ವಶಪಡಿಸಿಕೊಂಡಿರುವುದನ್ನು ಯೆಮನ್ ಸರಕಾರದ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಹೌದಿ ಅಧಿಕಾರಿಯೋರ್ವರು ಸಹ ಇದನ್ನು ದೃಢಪಡಿಸಿದ್ದಾರೆ.

ವಿಶ್ವದ ಅತಿದೊಡ್ಡ ತೈಲ ರಫ್ತುದಾರ ರಾಷ್ಟ್ರವಾಗಿರುವ ಸೌದಿ ಅರೇಬಿಯಾ ಹಾರ್ಮುಝ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ಇರಾನ್ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಪರ್ಯಾಯವಾಗಿ ಕೆಂಪು ಸಮುದ್ರವನ್ನು ಅವಲಂಬಿಸಿದೆ. 28 ಕಿ.ಮೀ.ಅಗಲದ ಬಾಬ್ ಎಲ್-ಮಂಡೆಬ್ ಜಲಸಂಧಿಯನ್ನು ಮುಚ್ಚುವ ಹೌದಿಗಳ ಪ್ರಯತ್ನಗಳು ಆ ಮಾರ್ಗವನ್ನು ಮತ್ತಷ್ಟು ಸಂಕೀರ್ಣಗೊಳಿಸಿವೆ.

ಶುಕ್ರವಾರ ಹೇಳಿಕೆಯೊಂದರಲ್ಲಿ ಹೌದಿ ಸಶಸ್ತ್ರ ಪಡೆಗಳು ಕೆಂಪು ಸಮುದ್ರದ ಕರಾವಳಿಯ ಉದ್ದಕ್ಕೂ ತಾವು ಸಾಧಿಸಿರುವ ಹಿಡಿತವನ್ನು ಹೆಮ್ಮೆಯಿಂದ ಬಿಂಬಿಸಿಕೊಂಡಿದ್ದು, ಸೌದಿ ಅರೇಬಿಯಾದೊಂದಿಗಿನ ಸಂಘರ್ಷದಲ್ಲಿ ಪ್ರತಿ ದಾಳಿಗೂ ಪ್ರತಿದಾಳಿ ನಡೆಸುವುದಾಗಿ ಶಪಥ ಮಾಡಿವೆ.

ಈ ನಡುವೆ, ಇರಾನ್ ಸರಕಾರದ ವಿದೇಶಾಂಗ ಸಚಿವಾಲಯವು ಹೌದಿ ನಿಯಂತ್ರಣದಲ್ಲಿರುವ ಪ್ರದೇಶಗಳ ಮೇಲೆ ವಿಧಿಸಿರುವ ದಿಗ್ಬಂಧನವನ್ನು ಅಂತ್ಯಗೊಳಿಸುವಂತೆ ಮತ್ತು ಹೌದಿಗಳೊಂದಿಗೆ ಮಾತುಕತೆಗಳಿಗೆ ಮರಳುವಂತೆ ಶುಕ್ರವಾರ ಸೌದಿ ಅರೇಬಿಯಾಕ್ಕೆ ಕರೆ ನೀಡಿದೆ.

ತಾನು ಸ್ವಯಂರಕ್ಷಣೆಯ ಹಕ್ಕನ್ನು ಹೊಂದಿರುವುದಾಗಿ ತಿಳಿಸಿರುವ ಸೌದಿ ಅರೇಬಿಯಾ,‌ ಮಾತುಕತೆಗಳಿಗೆ ತಾನು ಸದಾ ಸಿದ್ಧ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor