Photo Credit : PTI

ಟೆಹರಾನ್, ಸೆ.11: ಸೌದಿ ಅರೇಬಿಯಾ ಯಮನ್ ಮೇಲೆ ಹೇರಿರುವ ದಿಗ್ಬಂಧನವನ್ನು ಅಂತ್ಯಗೊಳಿಸಲು ಮತ್ತು ತಕ್ಷಣವೇ ಮಾತುಕತೆಗಳನ್ನು ಪುನರಾರಂಭಿಸಲು ಇರಾನ್ ಸರಕಾರ ಶುಕ್ರವಾರ ಒತ್ತಾಯಿಸಿದೆ.

ಇರಾನ್ ಬೆಂಬಲಿತ ಹೌದಿ ದಂಗೆಕೋರರು ಯಮನ್ನ ಪ್ರಮುಖ ಬಂದರು ನಗರ ಮೋಖಾವನ್ನು ವಶಪಡಿಸಿಕೊಂಡು, ಬಾಬ್ ಎಲ್-ಮಂಡೆಬ್ ಜಲಸಂಧಿಯಲ್ಲಿನ ಆಯಕಟ್ಟಿನ ಮಯೂನ್ ದ್ವೀಪವನ್ನು ವಶಪಡಿಸಿಕೊಳ್ಳುವ ಮೂಲಕ ಪ್ರಮುಖ ಜಾಗತಿಕ ಹಡಗು ಮಾರ್ಗಕ್ಕೆ ಬೆದರಿಕೆಯನ್ನು ತೀವ್ರಗೊಳಿಸಿದ ನಂತರ ಇರಾನ್ ನೀಡಿದ ಮೊದಲ ಸಾರ್ವಜನಿಕ ಹೇಳಿಕೆ ಇದಾಗಿದೆ. ಯಮನ್ನ ಸಾರ್ವಭೌಮತ್ವವನ್ನು ಗೌರವಿಸಬೇಕು ಮತ್ತು ಅದರ ಸಮಸ್ಯೆಗಳನ್ನು ದಿಗ್ಬಂಧನ ಅಥವಾ ಮಿಲಿಟರಿ ಮೈತ್ರಿಗಳ ಮೂಲಕ ಪರಿಹರಿಸಲು ಸಾಧ್ಯವಿಲ್ಲ ಎಂದು ಇರಾನ್ ವಿದೇಶಾಂಗ ಸಚಿವಾಲಯವು ಹೇಳಿರುವುದಾಗಿ ಸರಕಾರಿ ಸ್ವಾಮ್ಯದ `ಐಆರ್ಎನ್ಎ' ಸುದ್ದಿ ಸಂಸ್ಥೆ ವರದಿ ಮಾಡಿದೆ. ಮಾತುಕತೆಗಳಿಗೆ ಬೆಂಬಲ ನೀಡಲು ಸಿದ್ಧವಿರುವುದಾಗಿಯೂ ಇರಾನ್ ತಿಳಿಸಿದೆ.

ಈ ಮಧ್ಯೆ, ಯಮನ್ನಲ್ಲಿನ ಈ ಬೆಳವಣಿಗೆಗಳು ಅಮೆರಿಕದೊಂದಿಗೆ ನಡೆಯುವ ಯಾವುದೇ ಮಾತುಕತೆಗಳು ಇರಾನ್ಗೆ ಹೆಚ್ಚಿನ `ಅನುಕೂಲ'ವನ್ನು ಒದಗಿಸಬಹುದು ಎಂದು ತಜ್ಞರು ಹೇಳುತ್ತಾರೆ.

ಗುರುವಾರ ಹೌದಿಗಳು ಕೆಂಪು ಸಮುದ್ರದ ಮೋಖಾ ಬಂದರು ನಗರವನ್ನು ವಶಪಡಿಸಿಕೊಂಡಿದ್ದು, ಶುಕ್ರವಾರ ಬಾಬ್ ಎಲ್-ಮಂಡೆಬ್ ಜಲಸಂಧಿಯಲ್ಲಿರುವ ಆಯಕಟ್ಟಿನ ಮಯೂನ್ (ಪೆರಿಮ್) ದ್ವೀಪವನ್ನು ಕೂಡ ವಶಪಡಿಸಿಕೊಂಡಿದ್ದಾರೆ. ಇರಾನ್, ಹಾರ್ಮುಝ್ ಜಲಸಂಧಿಯಲ್ಲಿ ಹಡಗುಗಳನ್ನು ಗುರಿಯಾಗಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ಹಡಗು ಸಾರಿಗೆಗೆ ಬಾಬ್ ಎಲ್-ಮಂಡೆಬ್ ಪ್ರಮುಖ ಪರ್ಯಾಯ ಮಾರ್ಗವಾಗಿದೆ.

ಕೆಂಪು ಸಮುದ್ರದ ದಕ್ಷಿಣ ತುದಿಯಲ್ಲಿರುವ ಬಾಬ್ ಎಲ್-ಮಂಡೆಬ್, ಅಮೆರಿಕದ ಪ್ರಮುಖ ಮಿತ್ರರಾಷ್ಟ್ರವಾದ ನೆರೆಯ ಸೌದಿ ಅರೇಬಿಯಾಗೆ ಅತ್ಯಂತ ಮುಖ್ಯವಾಗಿದೆ. ಹಾರ್ಮುಝ್ ಜಲಸಂಧಿಯಲ್ಲಿನ ಅಡಚಣೆಗಳ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ತನ್ನ ಕಚ್ಚಾ ತೈಲವನ್ನು ಕೆಂಪು ಸಮುದ್ರದ ಮಾರ್ಗದ ಮೂಲಕ ಹೊರಗೆ ಸಾಗಿಸಲು ಅವಲಂಬಿಸಿದೆ. ಜಗತ್ತಿನ ಸುಮಾರು 12%ರಷ್ಟು ಸರಕುಗಳನ್ನು ಸಾಮಾನ್ಯವಾಗಿ ಈ ಜಲಸಂಧಿಯ ಮೂಲಕವೇ ಸಾಗಿಸಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor