ಯಮನ್ನಲ್ಲಿ ಅಮೆರಿಕದ ಹಸ್ತಕ್ಷೇಪವನ್ನು ಹೌದಿಗಳು ಬಯಸುವುದಿಲ್ಲ: ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್ | Photo Credit : PTI
ಡಬ್ಲಿನ್: ಯಮನ್‍ನ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಸರಕಾರದ ವಿರುದ್ಧದ ಸಂಘರ್ಷದಲ್ಲಿ ಅಮೆರಿಕ ಹಸ್ತಕ್ಷೇಪ ಮಾಡದಂತೆ ಹೌದಿಗಳು ಕರೆ ಮಾಡಿ ವಿನಂತಿಸಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಐರ್‌ಲ್ಯಾಂಡ್ ರಾಜಧಾನಿ ಡಬ್ಲಿನ್‍ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಟ್ರಂಪ್ ` ಹೌದಿಗಳು "ನಮಗೆ ಕರೆ ಮಾಡಿದ್ದರು.
ಅವರು ನಮ್ಮೊಂದಿಗೆ ಹೋರಾಡಲು ಬಯಸುವುದಿಲ್ಲ. ಅವರು ನಮಗೆ ವಿಷಯವನ್ನು ತಿಳಿಸುತ್ತಿದ್ದಾರೆ. ನಾವು ಇದರಲ್ಲಿ ಭಾಗಿಯಾಗದಿರುವುದನ್ನು ಅವರು ಹೆಚ್ಚು ಇಷ್ಟಪಡುತ್ತಾರೆ ಮತ್ತು ಅವರು ಹೆಚ್ಚಿನ ಹಡಗುಗಳನ್ನು ಹಾದುಹೋಗಲು ಬಿಡುತ್ತಿದ್ದಾರೆ. ಅವರು ಕೇವಲ ಒಂದು ದೇಶದ ಬಗ್ಗೆ ಅಷ್ಟು ಸಂತೋಷವಾಗಿಲ್ಲ, ಮತ್ತು ನಾವು ಅದನ್ನು ಸರಿಪಡಿಸುತ್ತೇವೆ' ಎಂದು ಹೇಳಿದರು.
ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ತಮ್ಮ ಒಳ್ಳೆಯ ಸ್ನೇಹಿತ ಎಂದು ಹೇಳಿದ ಟ್ರಂಪ್ ಎಲ್ಲವೂ ಚೆನ್ನಾಗಿ ಬಗೆಹರಿಯುತ್ತದೆ ಎಂದು ಹೇಳಿದರು. ಸೌದಿ ಅರೇಬಿಯಾದ ಪ್ರಮುಖ ಈಸ್ಟ್-ವೆಸ್ಟ್ ತೈಲ ಪೈಪ್‍ಲೈನ್ ಮೇಲಿನ ದಾಳಿಗೆ ಇರಾನ್ ಹೊಣೆಯಾಗಿರಬಹುದು ಎಂದು ಟ್ರಂಪ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸರಕಾರಿ ಪಡೆಗಳ ವಿರುದ್ಧ ವೇಗವಾಗಿ ಮುನ್ನುಗ್ಗಿದ ನಂತರ, ಇರಾನ್ ಬೆಂಬಲಿತ ಹೌದಿ ಪಡೆಗಳು ಯಮನ್‍ನ ಕೆಂಪು ಸಮುದ್ರದ ಕರಾವಳಿಯ ಸಂಪೂರ್ಣ ನಿಯಂತ್ರಣವನ್ನು ಪಡೆದುಕೊಂಡಿವೆ. ಇದಕ್ಕೆ ಪ್ರತಿಯಾಗಿ ಸರಕಾರಿ ಪಡೆಗಳು ಪಶ್ಚಿಮ ಕರಾವಳಿಯುದ್ದಕ್ಕೂ ಸರಣಿ ವೈಮಾನಿಕ ದಾಳಿಗಳನ್ನು ನಡೆಸಿವೆ.
ಹೌದಿ ದಾಳಿ ಖಂಡಿಸಿದ ವಿಶ್ವಸಂಸ್ಥೆ ಭದ್ರತಾ ಮಂಡಳಿ
ಸೌದಿ ಅರೇಬಿಯಾ ಮೇಲಿನ ಹೌದಿ ದಾಳಿಗಳನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯು ತೀವ್ರವಾಗಿ ಖಂಡಿಸಿದ್ದು ಸೌದಿ ಅರೆಬೀಯಾಗೆ ಬೆಂಬಲ ವ್ಯಕ್ತಪಡಿಸಿದೆ.
2022ರ ಕದನ ವಿರಾಮ ಒಪ್ಪಂದದ ನಂತರ ಇದೇ ಮೊದಲ ಬಾರಿಗೆ ಯಮನ್ ಮತ್ತೆ ಪೂರ್ಣ ಪ್ರಮಾಣದ ಯುದ್ಧಕ್ಕೆ ಜಾರುವ ಅಪಾಯದಲ್ಲಿದೆ ಎಂದು ಸದಸ್ಯ ರಾಷ್ಟ್ರಗಳು ಎಚ್ಚರಿಸಿವೆ. ಪರಿಸ್ಥಿತಿಯ ಬಗ್ಗೆ ಭದ್ರತಾ ಮಂಡಳಿಗೆ ಮಾಹಿತಿ ನೀಡಿದ ಯಮನ್‍ಗೆ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಹ್ಯಾನ್ಸ್ ಗ್ರಂಡ್ಬರ್ಗ್ `ದೊಡ್ಡ ಪ್ರಮಾಣದ ಸಂಘರ್ಷಕ್ಕೆ ಹಿಂತಿರುಗುವ ಪುನರಾವರ್ತಿತ ಎಚ್ಚರಿಕೆಗಳು ಈಗ ಕಠಿಣ ವಾಸ್ತವವಾಗಿ ಮಾರ್ಪಟ್ಟಿವೆ' ಎಂದು ಹೇಳಿದರು.
ಹೌದಿ ಪಡೆಗಳು ಮೊಖಾ ಬಂದರು ನಗರ ಮತ್ತು ಸಂಪೂರ್ಣ ಕರಾವಳಿಯ ಮೇಲೆ ನಿಯಂತ್ರಣ ಸಾಧಿಸಿದೆ. ಇದು ಅವರಿಗೆ ವಿಶ್ವದ ಅತ್ಯಂತ ಪ್ರಮುಖ ಜಲಸಂಧಿಗಳ ದಂಡೆಯ ಮೇಲೆ ನೇರ ಉಪಸ್ಥಿತಿಯನ್ನು ನೀಡಿದೆ ಮತ್ತು ನೌಕಾಯಾನದ ಸ್ವಾತಂತ್ರ್ಯದ ಬಗ್ಗೆ ಹೆಚ್ಚಿನ ಕಳವಳವನ್ನು ಉಂಟುಮಾಡಿದೆ ಎಂದು ಅವರು ಹೇಳಿದರು.