ಸಾಂದರ್ಭಿಕ ಚಿತ್ರ (Photo: All Arab News)

ರಿಯಾದ್: ಹೌದಿಗಳು ರಿಯಾದ್ ಕಡೆಗೆ ಹಾರಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹೊಡೆದುರುಳಿಸಲಾಗಿದೆ ಎಂದು ಯಮನ್‌ನಲ್ಲಿನ ಸೌದಿ ನೇತೃತ್ವದ ಒಕ್ಕೂಟ ತಿಳಿಸಿದೆ.

ಹೌದಿಗಳು ಸೌದಿ ರಾಜಧಾನಿಯ ಕಡೆಗೆ ಹಾರಿಸಿದ ಕ್ಷಿಪಣಿಯನ್ನು ಹೊಡೆದರುಳಿಸಿದ್ದೇವೆ ಎಂದು ಸೌದಿ ನೇತೃತ್ವದ ಒಕ್ಕೂಟದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್- ಮಾಲ್ಕಿ ತಿಳಿಸಿದ್ದಾರೆ.

ಬೈಶ್, ತಾಯಿಫ್, ಫರಾಸಾನ್ ಮತ್ತು ಯನ್ಬು ಪ್ರದೇಶಗಳಲ್ಲಿನ ನಾಗರಿಕರು ಹಾಗೂ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಹೌದಿಗಳು ದಾಳಿ ನಡೆಸಲು ಯತ್ನಿಸಿದ್ದರು. ಆದರೆ, ವಾಯು ರಕ್ಷಣಾ ವ್ಯವಸ್ಥೆಗಳು ಈ ದಾಳಿಗಳನ್ನು ವಿಫಲಗೊಳಿಸಿವೆ ಎಂದು ಸೌದಿ ನೇತೃತ್ವದ ಒಕ್ಕೂಟ ತಿಳಿಸಿದೆ.

80 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ರಿಯಾದ್ ನಗರವನ್ನು ಗುರಿಯಾಗಿಸಿಕೊಂಡು ಪದೇ ಪದೇ ದಾಳಿ ನಡೆಸಲು ಯತ್ನಿಸಿರುವುದು, ಹೌದಿಗಳು ನಾಗರಿಕರು ಮತ್ತು ನಾಗರಿಕ ಮೂಲಸೌಕರ್ಯಗಳನ್ನು ಉದ್ದೇಶಪೂರ್ವಕವಾಗಿ ಮತ್ತು ವ್ಯವಸ್ಥಿತವಾಗಿ ಗುರಿಯಾಗಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಒಕ್ಕೂಟ ಹೇಳಿದೆ.

ಯೆಮೆನ್‌ನ ಹೌದಿ ಬಂಡುಕೋರರು ಸೌದಿ ಅರೇಬಿಯಾದಾದ್ಯಂತ ಸೂಕ್ಷ್ಮ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಇದರಲ್ಲಿ ರಾಜಧಾನಿ ರಿಯಾದ್ ಮತ್ತು ಯಾನ್ಬು ಬಂದರು ನಗರದಲ್ಲಿರುವ ಅರಾಮ್ಕೊ ತೈಲ ಘಟಕಗಳು ಸೇರಿವೆ ಎಂದು Aljazeera ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor