ಯೆಮೆನ್ ನ ಏಡನ್ ಮೇಲೆ ಹೌತಿಗಳಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ
ಗಲ್ಫ್ ಮತ್ತು ಮಧ್ಯಪ್ರಾಚ್ಯದ 6 ದೇಶಗಳಿಗೆ ಅಮೆರಿಕದಿಂದ ಭದ್ರತಾ ಎಚ್ಚರಿಕೆ
Screengrab : X
ಏಡನ್: ದಕ್ಷಿಣ ಯೆಮೆನ್ ನ ಪ್ರಮುಖ ಬಂದರು ನಗರ ಏಡನ್ ಮೇಲೆ ಹೌತಿ ಬಂಡುಕೋರರು ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೂಲಕ ದಾಳಿ ನಡೆಸಿದ್ದಾರೆ ಎಂದು ಯೆಮೆನ್ ಸರ್ಕಾರ ತಿಳಿಸಿದೆ ಎಂದು Aljazeera ವರದಿ ಮಾಡಿದೆ.
ಏಡನ್ ನಲ್ಲಿರುವ ನೌಕಾಪಡೆಯ ಸೇನಾ ನೆಲೆ ಮತ್ತು ಅಲ್-ನಸ್ರ್ ಶಿಬಿರವನ್ನು ಹೌತಿಗಳು ಗುರಿಯಾಗಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಯೆಮೆನ್ ನ ಮಾಹಿತಿ ಸಚಿವಾಲಯವೂ ಏಡನ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆದಿರುವುದಾಗಿ ತಿಳಿಸಿದೆ. ದಾಳಿಯಿಂದ ಸಂಭವಿಸಿರುವ ಹಾನಿ ಹಾಗೂ ಸಾವು-ನೋವುಗಳ ಕುರಿತು ಈವರೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಹೌತಿ ಬಂಡುಕೋರರಿಂದ ದಾಳಿಯ ಬೆದರಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದ ವಿದೇಶಾಂಗ ಇಲಾಖೆ ಗಲ್ಫ್ ಮತ್ತು ಮಧ್ಯಪ್ರಾಚ್ಯದ ಹಲವು ದೇಶಗಳಿಗೆ ಸಂಬಂಧಿಸಿದ ಪ್ರಯಾಣ ಸಲಹೆಗಳನ್ನು ಪರಿಷ್ಕರಿಸಿದೆ.
ಇರಾನ್ ಬೆಂಬಲಿತ ಹೌತಿಗಳಿಂದ ಪ್ರಾದೇಶಿಕ ಆಕ್ರಮಣದ ಬೆದರಿಕೆ ಹೆಚ್ಚಿರುವುದನ್ನು ಇಲಾಖೆ ಉಲ್ಲೇಖಿಸಿದೆ. ಸೌದಿ ಅರೇಬಿಯ, ಖತರ್, ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಇರಾಕ್, ಲೆಬನಾನ್ ಮತ್ತು ಇಸ್ರೇಲ್ ಗೆ ಸಂಬಂಧಿಸಿದಂತೆ ಭದ್ರತಾ ಎಚ್ಚರಿಕೆಗಳನ್ನು ನೀಡಲಾಗಿದೆ.
ಸೌದಿ ಅರೇಬಿಯದ ವಿಮಾನ ನಿಲ್ದಾಣಗಳು ಮತ್ತು ತೈಲ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಹೌತಿ ಬಂಡುಕೋರರು ಹಲವು ವಾರಗಳಿಂದ ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕ ಈ ಪ್ರಯಾಣ ಸಲಹೆಗಳನ್ನು ಪರಿಷ್ಕರಿಸಿದೆ.
ಏಡನ್ ಮೇಲಿನ ಕ್ಷಿಪಣಿ ದಾಳಿ ಮತ್ತು ಹೌತಿಗಳಿಂದ ಹೆಚ್ಚುತ್ತಿರುವ ಬೆದರಿಕೆಯ ಹಿನ್ನೆಲೆಯಲ್ಲಿ ಗಲ್ಫ್ ಹಾಗೂ ಮಧ್ಯಪ್ರಾಚ್ಯದ ಭದ್ರತಾ ಪರಿಸ್ಥಿತಿಯ ಮೇಲೆ ಅಂತರರಾಷ್ಟ್ರೀಯ ವಲಯದ ಗಮನ ನೆಟ್ಟಿದೆ.