Photo Credit : ANI 

ರಿಯಾದ್: ಸೌದಿ ಅರೇಬಿಯದ ಮಕ್ಕಾ ನಗರದಲ್ಲಿ ‘ವಾಯುದಾಳಿ ಬೆದರಿಕೆ’ ಕುರಿತು ಶನಿವಾರ ತುರ್ತು ಎಚ್ಚರಿಕೆ ನೀಡಿದ ಅಧಿಕಾರಿಗಳು, ಬಳಿಕ ಅಪಾಯ ದೂರವಾಗಿದೆ ಎಂದು ಘೋಷಿಸಿದ್ದಾರೆ. ಜಿದ್ದಾ, ಯಾನ್ಬು ಮತ್ತು ತೈಫ್ ಪ್ರದೇಶಗಳಲ್ಲಿಯೂ ಮುನ್ನೆಚ್ಚರಿಕೆ ನೀಡಲಾಗಿದ್ದು, ನಂತರ ಅಪಾಯದ ಸ್ಥಿತಿ ತೆರವುಗೊಳಿಸಲಾಗಿದೆ. ಇದೇ ವೇಳೆ, ಹೌತಿ ಬಂಡುಕೋರರು ಉಡಾಯಿಸಿದ ಮೂರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸೌದಿ ವಾಯು ರಕ್ಷಣಾ ವ್ಯವಸ್ಥೆಗಳು ತಡೆದು ನಾಶಪಡಿಸಿವೆ ಎಂದು ಸೌದಿ ನೇತೃತ್ವದ ಮೈತ್ರಿಕೂಟ ತಿಳಿಸಿದೆ ಎಂದು ANI ವರದಿ ಮಾಡಿದೆ.

ಸೌದಿ ನಾಗರಿಕ ರಕ್ಷಣಾ ನಿರ್ದೇಶನಾಲಯವು ರಾಷ್ಟ್ರೀಯ ಮುನ್ನೆಚ್ಚರಿಕೆ ವೇದಿಕೆಯ ಮೂಲಕ ಮಕ್ಕಾ ಪ್ರಾಂತ್ಯದಲ್ಲಿ ಸಂಭವನೀಯ ಅಪಾಯದ ಕುರಿತು ನಿವಾಸಿಗಳಿಗೆ ಎಚ್ಚರಿಕೆ ನೀಡಿತ್ತು. ಬಳಿಕ ‘X’ನಲ್ಲಿ ಪ್ರಕಟಿಸಿದ ಮತ್ತೊಂದು ಸಂದೇಶದಲ್ಲಿ ಅಪಾಯ ದೂರವಾಗಿದೆ ಎಂದು ತಿಳಿಸಲಾಯಿತು.

ಎಚ್ಚರಿಕೆಯ ಹಿನ್ನೆಲೆಯಲ್ಲಿ ನಿವಾಸಿಗಳು ಸುರಕ್ಷತಾ ಸೂಚನೆಗಳನ್ನು ಪಾಲಿಸಬೇಕು, ಗುಂಪುಗೂಡುವುದನ್ನು ಮತ್ತು ವಿಡಿಯೊ ಚಿತ್ರೀಕರಣ ಮಾಡುವುದನ್ನು ತಪ್ಪಿಸಬೇಕು ಎಂದು ನಾಗರಿಕ ರಕ್ಷಣಾ ಪಡೆಗಳು ಮನವಿ ಮಾಡಿದ್ದವು. ತುರ್ತು ಸಂದರ್ಭದಲ್ಲಿ 911 ಸಂಖ್ಯೆಗೆ ಕರೆ ಮಾಡುವಂತೆಯೂ ಸೂಚಿಸಲಾಗಿತ್ತು.

ಮೂರು ಕ್ಷಿಪಣಿಗಳನ್ನು ನಾಶಪಡಿಸಿದ ವಾಯು ರಕ್ಷಣಾ ಪಡೆ

ಹೌತಿ ಬಂಡುಕೋರರು ತೈಫ್ ಮತ್ತು ಯಾನ್ಬು ನಗರಗಳತ್ತ ಉಡಾಯಿಸಿದ್ದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆದು ನಾಶಪಡಿಸಲಾಗಿದೆ ಎಂದು ಸೌದಿ ನೇತೃತ್ವದ ಮೈತ್ರಿಕೂಟದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್-ಮಲ್ಕಿ ತಿಳಿಸಿದ್ದಾರೆ.

ಇದಕ್ಕೂ ಮೊದಲು, ಶನಿವಾರ ರಿಯಾದ್‌ ನತ್ತ ಉಡಾಯಿಸಲಾಗಿದ್ದ ಮತ್ತೊಂದು ಬ್ಯಾಲಿಸ್ಟಿಕ್ ಕ್ಷಿಪಣಿಯನ್ನೂ ವಾಯು ರಕ್ಷಣಾ ವ್ಯವಸ್ಥೆಗಳು ನಾಶಪಡಿಸಿದ್ದವು. ಈ ಬೆಳವಣಿಗೆಗಳ ಬೆನ್ನಲ್ಲೇ ಹಲವು ಪ್ರದೇಶಗಳಲ್ಲಿ ಭದ್ರತಾ ಎಚ್ಚರಿಕೆ ನೀಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor