Photo: X.com/@TlouMr_S  | PTI

ಹೊಸದಿಲ್ಲಿ: ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ಗಗನಚುಂಬಿ ಕಟ್ಟಡದ ಮೇಲೆ ಹೂತಿಗಳು ನಡೆಸಿದ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ದಾಳಿಯನ್ನು ತಕ್ಷಣವೇ ನಿಲ್ಲಿಸುವಂತೆ ಆಗ್ರಹಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, “ಸೌದಿ ಅರೇಬಿಯಾದ ಜನತೆ ಮತ್ತು ಸರಕಾರದೊಂದಿಗೆ ನಮ್ಮ ದೃಢವಾದ ಒಗ್ಗಟ್ಟನ್ನು ಮತ್ತೊಮ್ಮೆ ಪುನರುಚ್ಚರಿಸುತ್ತೇವೆ. ತನ್ನ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಹಾಗೂ ನಾಗರಿಕರು ಮತ್ತು ನಿವಾಸಿಗಳ ಭದ್ರತೆ ಮತ್ತು ಸುರಕ್ಷತೆಯನ್ನು ಕಾಪಾಡುವಲ್ಲಿ ಸೌದಿ ಅರೇಬಿಯಾಕ್ಕೆ ನಮ್ಮ ಅಚಲ ಬೆಂಬಲವನ್ನು ಪುನರುಚ್ಚರಿಸುತ್ತೇವೆ. ಈ ಪ್ರದೇಶದಲ್ಲಿ ಆದಷ್ಟು ಬೇಗ ಶಾಂತಿ ಮತ್ತು ಸಹಜ ಸ್ಥಿತಿ ಮರಳಲಿ ಎಂದು ಪ್ರಾಮಾಣಿಕವಾಗಿ ಆಶಿಸುತ್ತೇವೆ” ಎಂದು ತಿಳಿಸಿದೆ.

ಮಂಗಳವಾರ ಸೌದಿ ರಾಜಧಾನಿ ರಿಯಾದ್ ನ ಗಗನಚುಂಬಿ ಕಟ್ಟಡದ ಮೇಲೆ ಹೂತಿಗಳು ಡ್ರೋನ್ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಇಬ್ಬರು ಸೌದಿ ಪ್ರಜೆಗಳು, ಇಬ್ಬರು ಭಾರತೀಯರು, ಮೂವರು ನೇಪಾಳಿಗಳು ಹಾಗೂ ನಾಲ್ವರು ಈಜಿಪ್ಟ್ ಪ್ರಜೆಗಳು ಸೇರಿದ್ದರು.

ಯೆಮೆನ್ ರಾಜಧಾನಿ ಸನಾದಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಸೌದಿ ನೇತೃತ್ವದ ಪಡೆಗಳು ಹಲವು ವಾಯುದಾಳಿಗಳನ್ನು ನಡೆಸಿವೆ ಎಂದು ಹೂತಿ ಪರ ಮಾಧ್ಯಮ ಅಲ್ ಮಸೀರಾ ಟಿವಿ ಬುಧವಾರ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಿದ್ದಿಕ್‌ ನೆಲ್ಲಿಗುಡ್ಡೆ, ವಾರ್ತಾಭಾರತಿ

contributor