ಅಮೆರಿಕಾದಲ್ಲಿ ತಾಯಿ, ಸಹೋದರನ ಕೊಲೆ : ಭಾರತೀಯ ಮೂಲದ ಬಾಲಕನ ಬಂಧನ
ಕೊಲ್ಲುವ ಕಾಲ್ಪನಿಕ ಐಡಿಯಾಗಳಿಗಾಗಿ ChatGPT ಬಳಕೆ!
Photo credit : X
ವಾಷಿಂಗ್ಟನ್: ಅಮೆರಿಕದ ಮ್ಯಾಸಚೂಸೆಟ್ಸ್ ನ ತನ್ನ ಮನೆಯಲ್ಲಿ ತಾಯಿ ಮತ್ತು ಕಿರಿಯ ಸಹೋದರನನ್ನು ಕೊಂದ ಆರೋಪದ ಮೇಲೆ ಭಾರತೀಯ ಮೂಲದ 17 ವರ್ಷದ ಬಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ತನ್ನ ಕುಟುಂಬವನ್ನು ಕೊಲ್ಲುವ ಕಾಲ್ಪನಿಕ ಐಡಿಯಾಗಳಿಗಾಗಿ ಆತ ಇಂಟರ್ನೆಟ್ ಮತ್ತು ChatGPTಯನ್ನು ಬಳಸುತ್ತಿದ್ದನು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಬಂಧಿತ ಆರೋಪಿಯನ್ನು ಅರ್ಜುನ್ ಅರವಿಂದ್ ಎಂದು ಗುರುತಿಸಲಾಗಿದೆ. ಮೃತರನ್ನು ಆರೋಪಿಯ ತಾಯಿ ಸುಧಾ ವೆಂಕಟೇಶನ್ ಮತ್ತು 14 ವರ್ಷದ ಸಹೋದರ ಸಿದ್ಧಾರ್ಥ್ ಅರವಿಂದ್ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಆರೋಪಿ ವಿರುದ್ಧ ಎರಡು ಕೊಲೆ ಪ್ರಕರಣಗಳು, ಕುಟುಂಬದ ಸದಸ್ಯರ ಮೇಲಿನ ಹಲ್ಲೆ, ವಾಹನ ಕಳ್ಳತನ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರ್ಜುನ್ ಇತ್ತೀಚೆಗೆ ಆತಂಕಕಾರಿ ನಡವಳಿಕೆಯನ್ನು ತೋರುತ್ತಿದ್ದನು. ತನ್ನ ಕುಟುಂಬವನ್ನು ಕೊಲ್ಲುವ ಕಾಲ್ಪನಿಕ ಐಡಿಯಾಗಳಿಗಾಗಿ ಆತ ಇಂಟರ್ನೆಟ್ ಮತ್ತು ChatGPTಯನ್ನು ಬಳಸುತ್ತಿದ್ದನು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಬೋಸ್ಟನ್ ನಿಂದ 48 ಕಿ.ಮೀ. ದೂರದಲ್ಲಿರುವ ಆಕ್ಟನ್ ನ ನಿವಾಸಿಯಾಗಿರುವ ಅರ್ಜುನ್, ಆಗಸ್ಟ್ 11ರ ಮಂಗಳವಾರ ಮನೆಯೊಳಗೆ ತನ್ನ ತಾಯಿ ಮತ್ತು ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಬಳಿಕ ಪರಾರಿಯಾಗಿದ್ದನು.
ಘಟನೆಯ ಬಳಿಕ ಅರ್ಜುನ್ ತನ್ನ ತಾಯಿಯ 2014ರ ಹಸಿರು ಬಣ್ಣದ ಹೋಂಡಾ ಅಕಾರ್ಡ್ ಕಾರಿನಲ್ಲಿ ಪರಾರಿಯಾಗಿದ್ದನು. ಆತನಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿ, ಸಾರ್ವಜನಿಕರಿಗೂ ಎಚ್ಚರಿಕೆ ನೀಡಿದ್ದರು.
ಬುಧವಾರ ಮುಂಜಾನೆ, ಮ್ಯಾಸಚೂಸೆಟ್ಸ್ ನ ವೇಲ್ಯಾಂಡ್ ನಲ್ಲಿ ಪಾರ್ಕಿಂಗ್ ಸ್ಥಳವೊಂದರಲ್ಲಿ ಅಲಾರಂ ಸದ್ದು ಮಾಡಿದ ಬಗ್ಗೆ ಪರಿಶೀಲಿಸಲು ಹೋದ ಪೊಲೀಸರಿಗೆ, ಕಾರಿನೊಳಗೆ ಅರ್ಜುನ್ ಪತ್ತೆಯಾಗಿದ್ದಾನೆ. ಯಾವುದೇ ಪ್ರತಿರೋಧವಿಲ್ಲದೆ ಆತನನ್ನು ವಶಕ್ಕೆ ಪಡೆಯಲಾಗಿದೆ.
ಅರ್ಜುನ್ ತಂದೆಯ ಮಾಹಿತಿಯಿಂದ ಪ್ರಕರಣ ಬೆಳಕಿಗೆ ಬಂದಿದೆ. ಅವರು ತಮ್ಮ ಕುಟುಂಬವನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮನೆಗೆ ಬರಬೇಕಿದ್ದ ಶಿಕ್ಷಕರಿಗೂ ಮನೆಯೊಳಗಿದ್ದವರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ.
ಕೆಲಸಕ್ಕೆ ಹೋಗುವ ಮುನ್ನ ಮಂಗಳವಾರ ಮುಂಜಾನೆ ಅರ್ಜುನ್ ತಂದೆ ತನ್ನ ಪತ್ನಿ ಸುಧಾ ಅವರೊಂದಿಗೆ ಕೊನೆಯದಾಗಿ ಮಾತನಾಡಿದ್ದರು. ಕಿರಿಯ ಮಗ ಸಿದ್ಧಾರ್ಥ್ ಮಧ್ಯಾಹ್ನದ ಸುಮಾರಿಗೆ ಕೊನೆಯದಾಗಿ ಕಾಣಿಸಿಕೊಂಡಿದ್ದನು.
ಮಂಗಳವಾರ ಸಂಜೆ 6:37ರ ಸುಮಾರಿಗೆ ಅರ್ಜುನ್ ತಂದೆಯಿಂದ ಆಕ್ಟನ್ ಪೊಲೀಸರಿಗೆ ಕರೆ ಬಂದಿತ್ತು. ತಕ್ಷಣ ಮನೆಗೆ ಧಾವಿಸಿದ ಪೊಲೀಸರಿಗೆ ಮನೆಯೊಳಗೆ ಎರಡು ಮೃತದೇಹಗಳು ಪತ್ತೆಯಾಗಿವೆ. ಸಿದ್ಧಾರ್ಥ್ ಮೃತದೇಹ ಮೊದಲನೇ ಮಹಡಿಯಲ್ಲಿ ಮತ್ತು ಸುಧಾ ಅವರ ಮೃತದೇಹ ಮನೆಯ ಬೇಸ್ಮೆಂಟ್ ನಲ್ಲಿ ಪತ್ತೆಯಾಗಿದೆ.
ವರದಿಗಳ ಪ್ರಕಾರ, "ಗೋಥಿಕ್ ಕಾದಂಬರಿ ಮಾದರಿಯ ಕಥೆಗಳನ್ನು ರಚಿಸಲು ಸಹಾಯ ಮಾಡುವಂತೆ ಅರ್ಜುನ್ ChatGPTಯನ್ನು ಕೇಳಿದ್ದನು ಮತ್ತು ಅದರಲ್ಲಿ ಹಲವು ಪ್ರಶ್ನೆಗಳನ್ನು ಕೇಳಿ ಪಾತ್ರಗಳನ್ನು ಸೃಷ್ಟಿಸುತ್ತಿದ್ದನು."
ಅರ್ಜುನ್ ನನ್ನು ಬುಧವಾರ ಲೊವೆಲ್ ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕೊಲೆ ಆರೋಪದ ವಿಚಾರಣೆ ನಡೆಸುವ ಅಧಿಕಾರ ಬಾಲಾಪರಾಧಿ ನ್ಯಾಯಾಲಯಕ್ಕೆ ಇಲ್ಲದಿರುವುದರಿಂದ, ಆತನ ಮೇಲಿನ ಕೊಲೆ ಮತ್ತು ಹಲ್ಲೆ ಪ್ರಕರಣಗಳ ವಿಚಾರಣೆಯನ್ನು ನಂತರ ಕಾನ್ಕಾರ್ಡ್ ಜಿಲ್ಲಾ ನ್ಯಾಯಾಲಯದಲ್ಲಿ ನಡೆಸಲಾಗುವುದು ಎಂದು ಮಿಡ್ಲ್ಸೆಕ್ಸ್ ಡಿಸ್ಟ್ರಿಕ್ಟ್ ಅಟಾರ್ನಿ ಮರಿಯನ್ ರಯಾನ್ ಮತ್ತು ಆಕ್ಟನ್ ಪೊಲೀಸ್ ಮುಖ್ಯಸ್ಥ ಡೌಗ್ಲಾಸ್ ಸ್ಟರ್ನಿಯೊಲೊ ತಿಳಿಸಿದ್ದಾರೆ.