ಆಯತುಲ್ಲಾ ಅಲಿ ಖಾಮಿನೈ ಹತ್ಯೆಗಾಗಿ ಟ್ರಂಪ್ ಭಾರೀ ಬೆಲೆ ತೆರಲಿದ್ದಾರೆ : ಲಾರಿಜಾನಿ
ಅಲಿ ಲಾರಿಜಾನಿ | Photo Credit : aljazeera.com
ಟೆಹರಾನ್,ಮಾ.8: ಆಯತುಲ್ಲಾ ಅಲಿ ಖಾಮಿನೈ ಅವರ ಹತ್ಯೆಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರೀ ಬೆಲೆ ತೆರಬೇಕಾಗಿ ಬರಲಿದೆ ಮತ್ತು ನಮ್ಮ ನಾಯಕನ ರಕ್ತವನ್ನು ಚೆಲ್ಲಿದ್ದಕ್ಕಾಗಿ ಇರಾನ್ ಪ್ರತೀಕಾರ ತೀರಿಸಲಿದೆ ಎಂದು ಆ ದೇಶದ ಭದ್ರತಾ ವರಿಷ್ಠ ಅಲಿ ಲಾರಿಜಾನಿ ಶುಕ್ರವಾರ ತಿಳಿಸಿದ್ದಾರೆ. ಲಾರಿಜಾನಿ ಹೇಳಿಕೆಗೆ ತಕ್ಷಣವೇ ಪ್ರತಿಕ್ರಿಯಿಸಿರುವ ಟ್ರಂಪ್ ಅವರು, ಸಣ್ಣಪುಟ್ಟ ವ್ಯಕ್ತಿಗಳ ಹೇಳಿಕೆಗಳಿಗೆ ತಾನು ಗಮನಹರಿಸುವುದಿಲ್ಲವೆಂದು ಹೇಳಿದ್ದಾರೆ. ಲಾರಿಜಾನಿ ಅವರು ಖಾಮಿನೈ ಅವರ ಉನ್ನತ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು.
ಇರಾನ್‌ನ ಸರಕಾರಿ ಟಿವಿ ವಾಹಿನಿ ಜೊತೆ ಶನಿವಾರ ಮಾತನಾಡಿದ ಲಾರಿಜಾನಿ ಅವರು, ಟ್ರಂಪ್ ಅವರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಇರಾನ್‌ನ ಪ್ರತಿಕ್ರಿಯೆಯನ್ನು ಟ್ರಂಪ್ ತಪ್ಪಾಗಿ ಲೆಕ್ಕಹಾಕಿದ್ದಾರೆ ಹಾಗೂ ಈ ಸಂಘರ್ಷ ಬೇಗನೇ ನಿಲ್ಲುವುದಿಲ್ಲವೆಂದು ಹೇಳಿದ್ದರು.
ವೆನೆಝುವೆಲಾದಲ್ಲಿ ನಡೆದಂತೆ ಇರಾನ್‌ನಲ್ಲೂ ಕಾರ್ಯಾಚರಣೆಯನ್ನು ಬೇಗನೇ ಮಾಡಿಮುಗಿಸಬಹುದೆಂದು ಟ್ರಂಪ್ ಭಾವಿಸಿದ್ದರು. ಆದರೆ ಅವರೀಗ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಲಾರಿಜಾನಿ ತಿಳಿಸಿದರು.
ಟ್ರಂಪ್ ಅವರನ್ನು ಸುಮ್ಮನೆ ಬಿಡಲಾಗದು. ಅವರು ಮಾಡಿದ ಕೃತ್ಯಕ್ಕೆ ತಕ್ಕ ಬೆಲೆಯನ್ನು ತೆರಲೇಬೇಕು. ನಮ್ಮ ನಾಯಕನನ್ನು ಅವರು ಕೊಂದಿದ್ದಾರೆ ಹಾಗೂ 1 ಸಾವಿರಕ್ಕೂ ಅಧಿಕ ಮಂದಿ ಹುತಾತ್ಮರಾಗಿದ್ದಾರೆ. ಇದು ಸಣ್ಣಪುಟ್ಟ ವಿಷಯವೇನಲ್ಲ’’ ಎಂದು ಲಾರಿಜಾನಿ ತಿಳಿಸಿದ್ದಾರೆ.
ಲಾರಿಜಾನಿಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಟ್ರಂಪ್, ಆತ ಯಾರೆಂಬುದೇ ತನಗೆ ಗೊತ್ತಿಲ್ಲ. ನಾನು ಸಣ್ಣಪುಟ್ಟ ವ್ಯಕ್ತಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಟ್ರಂಪ್ ಸಿಬಿಎಸ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇರಾನ್‌ನ ನಾಯಕರು ದುರ್ಬಲಗೊಂಡಿದ್ದಾರೆ ಹಾಗೂ ವಿನಾಶದೆಡೆಗೆ ಸಾಗುತ್ತಿದ್ದಾರೆ. ಇರಾನ್‌ನಲ್ಲಿ ಅಮೆರಿಕದ ಸೇನಾ ಕಾರ್ಯಾಚರಣೆಯು ಮಂದುವರಿದಿದ್ದು, ಇರಾನ್ ಆಡಳಿತವು ಕ್ಷಮೆಯಾಚಿಸಬೇಕೆಂದು ಟ್ರಂಪ್ ಕರೆ ನೀಡಿದ್ದಾರೆ.