ಇರಾನ್ ಮೇಲೆ ಸತತ 10ನೇ ದಿನವೂ ಅಮೆರಿಕದಿಂದ ದಾಳಿ; ಹಾರ್ಮುಝ್ ಜಲಸಂಧಿಯಲ್ಲಿ ಮತ್ತೊಂದು ತೈಲ ಟ್ಯಾಂಕರ್ ಮೇಲೆ ಪ್ರತಿದಾಳಿ
Photo Credit : AP
ಟೆಹರಾನ್, ಜು.21: ಹಾರ್ಮುಝ್ ಜಲಸಂಧಿಯ ಮೇಲಿನ ನಿಯಂತ್ರಣಕ್ಕಾಗಿ ಅಮೆರಿಕ ಸತತ 10ನೇ ರಾತ್ರಿಯೂ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದೆ. ಇದರ ಬೆನ್ನಲ್ಲೇ, ಮಂಗಳವಾರ ಮುಂಜಾನೆ ಇರಾನ್ ಕೂಡ ಮತ್ತೊಂದು ತೈಲ ಟ್ಯಾಂಕರ್ ಮೇಲೆ ದಾಳಿ ನಡೆಸಿದೆ. ದಾಳಿಯ ಬಳಿಕ ಹಡಗಿನ ಸಿಬ್ಬಂದಿ ಹಡಗನ್ನು ತೊರೆದು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.
ಅಮೆರಿಕ ಸತತ 10ನೇ ರಾತ್ರಿಯೂ ವೈಮಾನಿಕ ದಾಳಿ ಮುಂದುವರಿಸಿದ್ದರೂ, ಹಾರ್ಮುಝ್ ಜಲಸಂಧಿಯ ಮೇಲಿನ ನಿಯಂತ್ರಣವನ್ನು ಇರಾನ್ ಕಳೆದುಕೊಂಡಿಲ್ಲ. ವಿಶ್ವದ ಒಟ್ಟು ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯ ಸುಮಾರು ಐದನೇ ಒಂದರಷ್ಟು ಪ್ರಮಾಣ ಈ ಜಲಮಾರ್ಗದ ಮೂಲಕವೇ ಸಾಗುತ್ತದೆ. ಹೀಗಾಗಿ ಇಲ್ಲಿ ನಡೆಯುತ್ತಿರುವ ಸಂಘರ್ಷ ಜಾಗತಿಕ ಇಂಧನ ಪೂರೈಕೆಯ ಮೇಲೂ ಪರಿಣಾಮ ಬೀರುವ ಆತಂಕ ಮೂಡಿಸಿದೆ.
ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಮತ್ತೆ ಪೂರ್ಣ ಪ್ರಮಾಣದ ಯುದ್ಧದತ್ತ ಸಾಗುತ್ತಿರುವ ನಡುವೆಯೇ, ಉಭಯ ರಾಷ್ಟ್ರಗಳ ನಡುವೆ ಸಂಧಾನಕ್ಕೆ ಪ್ರಮುಖ ಪಾತ್ರ ವಹಿಸಿದ್ದ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಇರಾನ್ನ ಆಂತರಿಕ ಸಚಿವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಹೊಸ ಒಪ್ಪಂದ ಏರ್ಪಡಬಹುದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಯುದ್ಧವನ್ನು ಕೊನೆಗೊಳಿಸುವ ಉದ್ದೇಶದಿಂದ ಕಳೆದ ತಿಂಗಳು ಇರಾನ್ ಮತ್ತು ಅಮೆರಿಕ ನಡುವೆ ಏರ್ಪಟ್ಟಿದ್ದ ಮಧ್ಯಂತರ ಒಪ್ಪಂದ ಮುರಿದುಬಿದ್ದಿದೆ. ಇದರ ಪರಿಣಾಮವಾಗಿ ಹಾರ್ಮುಝ್ ಜಲಸಂಧಿಯ ಮೂಲಕ ಹಡಗುಗಳ ಸಂಚಾರ ದೊಡ್ಡ ಪ್ರಮಾಣದಲ್ಲಿ ಸ್ಥಗಿತಗೊಂಡಿದೆ. ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳೂ ಲಕ್ಷಾಂತರ ಜನರು ಬಳಸುವ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಆರಂಭಿಸಿವೆ.