ಕುವೈತ್, ಬಹ್ರೇನ್ ಗುರಿಯಾಗಿಸಿ ಇರಾನ್ ದಾಳಿ: ವರದಿ
ಇರಾನ್ ನ ಕಣ್ಗಾವಲು ರೇಡಾರ್ ವ್ಯವಸ್ಥೆ ಮೇಲೆ ಅಮೆರಿಕ ಪ್ರತಿದಾಳಿ
ಸಾಂದರ್ಭಿಕ ಚಿತ್ರ | Photo Credit : PTI
ಟೆಹರಾನ್, ಜೂ.6: ಶುಕ್ರವಾರ ತಡರಾತ್ರಿ ಹಾರ್ಮುಜ್ ಜಲಸಂಧಿಯತ್ತ ಧಾವಿಸುತ್ತಿದ್ದ ಇರಾನ್‌ನ ನಾಲ್ಕು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಜೊತೆಗೆ, ಕುವೈತ್ ಮತ್ತು ಬಹ್ರೇನ್ ನತ್ತ ಪ್ರಯೋಗಿಸಲಾದ ಏಳು ಬ್ಯಾಲಿಸ್ಟಿಕ್ ಕ್ಷಿಪಣಿಗಳಲ್ಲಿ ಆರು ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ. ಒಂದು ಕ್ಷಿಪಣಿ ಗುರಿ ತಲುಪಲು ವಿಫಲವಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಶನಿವಾರ ತಿಳಿಸಿದೆ.
ಗೊರುಕ್ ಮತ್ತು ಕ್ವೆಶ್ಮ್ ದ್ವೀಪಗಳಲ್ಲಿರುವ ಇರಾನ್‌ನ ಕರಾವಳಿ ಕಣ್ಗಾವಲು ರೇಡಾರ್ ಕೇಂದ್ರಗಳ ಮೇಲೆ ದಾಳಿ ನಡೆಸುವ ಮೂಲಕ ಅಮೆರಿಕ ಪ್ರತೀಕಾರ ತೀರಿಸಿಕೊಂಡಿದೆ. ಹಡಗುಗಳು ಮತ್ತು ಪ್ರಾದೇಶಿಕ ಗುರಿಗಳ ವಿರುದ್ಧ ಮತ್ತಷ್ಟು ದಾಳಿಗಳನ್ನು ತಡೆಯುವುದು ಈ ಕಾರ್ಯಾಚರಣೆಯ ಉದ್ದೇಶವಾಗಿದೆ ಎಂದು ಸೆಂಟ್ರಲ್ ಕಮಾಂಡ್ ಹೇಳಿದೆ.
ಮಧ್ಯಪ್ರಾಚ್ಯ ಬಿಕ್ಕಟ್ಟಿಗೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಗಳು:
ನಾಗರಿಕರನ್ನು ಗುರಿಯಾಗಿಸಿಕೊಂಡು ಡ್ರೋನ್‌ಗಳು ಹಾಗೂ ಕ್ಷಿಪಣಿಗಳ ಮೂಲಕ ದೇಶದ ಮೇಲೆ ದಾಳಿ ನಡೆಸುವುದನ್ನು ಇರಾನ್ ಮುಂದುವರಿಸಿದೆ. ತನ್ನ ವಾಯುರಕ್ಷಣಾ ವ್ಯವಸ್ಥೆಗಳು ಮೂರು ಕ್ಷಿಪಣಿಗಳನ್ನು ಪ್ರತಿಬಂಧಿಸಿ ನಾಶಮಾಡಲು ಸಮರ್ಥವಾಗಿವೆ. ಹೆಚ್ಚಿನ ದಾಳಿಗಳು ನಡೆದರೆ ಎದುರಿಸಲು ಪಡೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ಅತ್ಯಂತ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಬಹ್ರೇನ್‌ನ ರಕ್ಷಣಾ ಇಲಾಖೆ ತಿಳಿಸಿದೆ.
ಬಹ್ರೇನ್‌ನ ಮೇಲಿನ ದಾಳಿಯಲ್ಲಿ ತನ್ನ ನೌಕಾನೆಲೆಗೆ ಹಾನಿಯಾಗಿದೆ ಎಂಬ ವರದಿಯನ್ನು ಅಮೆರಿಕದ ಸೆಂಟ್ರಲ್ ಕಮಾಂಡ್ ನಿರಾಕರಿಸಿದೆ.
ದೇಶದತ್ತ ಪ್ರಯೋಗಿಸಲಾದ ಕ್ಷಿಪಣಿ ಹಾಗೂ ಡ್ರೋನ್‌ಗಳನ್ನು ಪ್ರತಿಬಂಧಿಸಲಾಗಿದ್ದು, ಯಾವುದೇ ಸಾವು–ನೋವು ಸಂಭವಿಸಿಲ್ಲ ಎಂದು ಕುವೈತ್ ಸೇನೆ ಶನಿವಾರ ತಿಳಿಸಿದೆ.
ಕುವೈತ್ ಮತ್ತು ಬಹ್ರೇನ್ ಮೇಲಿನ ಇರಾನ್‌ನ ದಾಳಿಯನ್ನು ಖತರ್, ಈಜಿಪ್ಟ್ ಹಾಗೂ ಜೋರ್ಡಾನ್ ಖಂಡಿಸಿವೆ.
ಇರಾನ್‌ನ ಸೇನಾ ಸಾಮರ್ಥ್ಯ ಗಣನೀಯವಾಗಿ ಕುಸಿದಿದ್ದು, ಅದರ ಕ್ಷಿಪಣಿ ಶಸ್ತ್ರಾಗಾರದ ಶೇ 22ರಷ್ಟು ಮಾತ್ರ ಉಳಿದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಶಾಂತಿ ಮಾತುಕತೆ ಸ್ಥಗಿತಗೊಂಡಿದ್ದು, ಚೆಂಡು ಈಗ ಟ್ರಂಪ್ ಅಂಗಣದಲ್ಲಿದೆ. ಇರಾನ್‌ನ ಕೋಟ್ಯಂತರ ಮೌಲ್ಯದ ಸ್ವತ್ತುಗಳನ್ನು ಅಮೆರಿಕ ತಕ್ಷಣ ಮುಕ್ತಗೊಳಿಸಬೇಕು ಎಂದು ಇರಾನ್ ಮೂಲಗಳನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿದೆ.