ಮುಖಾಮುಖಿ ಮಾತುಕತೆ: ಝೆಲೆನ್‌ಸ್ಕಿ ಪ್ರಸ್ತಾಪ ತಿರಸ್ಕರಿಸಿದ ಪುಟಿನ್
ವೊಲೊದಿಮಿರ್ ಝೆಲೆನ್‍ಸ್ಕಿ , ವ್ಲಾದಿಮಿರ್ ಪುಟಿನ್ | Photo Credit : PTI
ಮಾಸ್ಕೋ, ಜೂ. 6: ಸುಮಾರು ನಾಲ್ಕು ವರ್ಷಗಳಿಂದ ಮುಂದುವರಿದಿರುವ ಯುದ್ಧವನ್ನು ಕೊನೆಗೊಳಿಸಲು ಮುಖಾಮುಖಿ ಮಾತುಕತೆ ನಡೆಸುವ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‌ಸ್ಕಿ ಅವರ ಪ್ರಸ್ತಾಪವನ್ನು ರಷ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತಿರಸ್ಕರಿಸಿದ್ದು, ಇದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದಾರೆ.
ಗುರುವಾರ ಪುಟಿನ್ ಅವರನ್ನು ಉದ್ದೇಶಿಸಿ ಬರೆದಿದ್ದ ಬಹಿರಂಗ ಪತ್ರದಲ್ಲಿ ಝೆಲೆನ್‌ಸ್ಕಿ, ‘26 ವರ್ಷಗಳಿಂದ ನೀವು ರಷ್ಯ ಅಧ್ಯಕ್ಷರಾಗಿ ಮುಂದುವರಿದಿದ್ದು, ನಿಮಗೆ ಈಗ ವಯಸ್ಸಾಗಿದೆ. ನಿಮ್ಮ ಆಡಳಿತದಲ್ಲಿ ಉಕ್ರೇನ್ ಮತ್ತು ರಷ್ಯ ನಡುವಿನ ಸಂಬಂಧಗಳ ಅಜೆಂಡಾ ಸಂಪೂರ್ಣ ಬದಲಾಗಿದೆ’ ಎಂದು ಉಲ್ಲೇಖಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪುಟಿನ್, ‘ಉಕ್ರೇನ್ ಅಧ್ಯಕ್ಷರ ಪ್ರಸ್ತಾಪದಲ್ಲಿ ಯಾವುದೇ ಅರ್ಥವಿಲ್ಲ. ಬಹಿರಂಗ ಪತ್ರವು ಅವರ ಅಸಭ್ಯತೆ ಮತ್ತು ಉದ್ಧಟತನವನ್ನು ಪ್ರತಿಬಿಂಬಿಸಿದೆ. ಕಳೆದ ವರ್ಷ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಭ್ಯವಾಗಿ ನಡೆದುಕೊಳ್ಳುವ ಬಗ್ಗೆ ಝೆಲೆನ್‌ಸ್ಕಿಗೆ ಪಾಠ ಕಲಿಸಿದ್ದರು’ ಎಂದು ಹೇಳಿದ್ದಾರೆ.