ತೆಲುಗು ಚಲನಚಿತ್ರದ ದೃಶ್ಯ ಹಂಚಿಕೊಂಡು ಟ್ರಂಪ್ ರನ್ನು ವ್ಯಂಗ್ಯವಾಡಿದ ಇರಾನ್
Photo: India Today
ಹೊಸದಿಲ್ಲಿ: ಇರಾನ್ ಅನ್ನು ಸಂಪೂರ್ಣವಾಗಿ ನಾಶಪಡಿಸುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಬೆನ್ನಲ್ಲೆ ಜಿಂಬಾಬ್ವೆಯಲ್ಲಿರುವ ಇರಾನ್ ರಾಯಭಾರ ಕಚೇರಿ ನಂದಮೂರಿ ಬಾಲಕೃಷ್ಣ ಮತ್ತು ತೆಲುಗು ಸಿನಿಮಾದ ದೃಶ್ಯವೊಂದನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಟ್ರಂಪ್ ಗೆ ವ್ಯಂಗ್ಯವಾಡಿದೆ. ಇರಾನ್ ಅಸಹಾಯಕ ರಾಷ್ಟ್ರವಲ್ಲ ಎಂದು ಹೇಳಿಕೊಂಡಿದೆ.
ಈ ಕುರಿತು ಎಕ್ಸ್‌ನಲ್ಲಿ 2023ರ ಆಕ್ಷನ್ ಚಲನಚಿತ್ರ ʼಭಗವಂತ ಕೇಸರಿʼಯ 58 ಸೆಕೆಂಡುಗಳ ದೃಶ್ಯ ಹಂಚಿಕೊಂಡಿರುವ ಜಿಂಬಾಬ್ವೆಯಲ್ಲಿರುವ ಇರಾನ್ ರಾಯಭಾರಿ ಕಚೇರಿ, ʼಟ್ರಂಪ್ ಇರಾನ್ ಅನ್ನು ಸಂಪೂರ್ಣವಾಗಿ ನಾಶಪಡಿಸುವ ಬಗ್ಗೆ ಮಾತನಾಡುತ್ತಾರೆ. ಆದರೆ, ಇರಾನ್ ಅಸಹಾಯಕ ರಾಷ್ಟ್ರವಲ್ಲ ಎಂದು ಅವರಿಗೆ ತಿಳಿದಿದೆ. ನಾವು ತಿಳಿದುಕೊಂಡಿರುವಂತೆ, ಅವರು ಇತ್ತೀಚೆಗೆ ಹಾಲಿವುಡ್ ಬದಲಿಗೆ ಬಾಲಿವುಡ್ ಸಿನಿಮಾಗಳನ್ನು ನೋಡುತ್ತಿದ್ದಾರೆʼ ಎಂದು ಹೇಳಿದೆ.
ಎಕ್ಸ್ ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಶಸ್ತ್ರಸಜ್ಜಿತ ಗುಂಪಿನೊಂದಿಗೆ ನಟ ಬಾಲಕೃಷ್ಣ ಅವರ ಪಾತ್ರವು ನಡೆಸುವ ಮುಖಾಮುಖಿಯನ್ನು ತೋರಿಸಿದೆ. ರೈಫಲ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಹೊಂದಿರುವ ವಿಲನ್ ಗಳ ಗುಂಪು ಅವರ ಮೇಲೆ ಗುಂಡಿನ ದಾಳಿ ನಡೆಸಿದಾಗ ಅವರು ತನ್ನನ್ನು ತಾನು ಹೇಗೆ ರಕ್ಷಿಸಿಕೊಳ್ಳುತ್ತಾರೆ ಎಂಬುದು ಇಲ್ಲಿ ಮುಖ್ಯವಾಗಿದೆ.
ಮಂಗಳವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾಡಿದ ಭಾಷಣದಲ್ಲಿ ಟ್ರಂಪ್ ಇರಾನ್ ಅನ್ನು ಸಂಪೂರ್ಣವಾಗಿ ನಾಶಪಡಿಸುವ ಬೆದರಿಕೆ ಹಾಕಿದ್ದರು.