ದಶಕಗಳ ದಾಳಿಗೆ ಇರಾನ್ ಪರಿಹಾರ ನೀಡಲೇಬೇಕು : ಡೊನಾಲ್ಡ್ ಟ್ರಂಪ್ ಪ್ರತಿಪಾದನೆ
ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ಆ.11: ಯುದ್ಧವನ್ನು ಕೊನೆಗೊಳಿಸುವ ಯಾವುದೇ ಒಪ್ಪಂದದ ಭಾಗವಾಗಿ ಅಮೆರಿಕ ಪರಿಹಾರವನ್ನು ನೀಡಬೇಕು ಎಂಬ ಇರಾನ್‍ನ ಷರತ್ತಿಗೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ `ದಶಕಗಳಿಂದ ನಡೆದ ದಾಳಿಗಳು ಮತ್ತು ಸಂಘರ್ಷಗಳಿಗೆ ಸಂಬಂಧಿಸಿದ ಸಾವು-ನೋವುಗಳಿಗೆ ಇರಾನ್ ಪರಿಹಾರ ನೀಡಬೇಕೆಂದು' ಆಗ್ರಹಿಸಿದ್ದಾರೆ.
ಈಗ ನಾನು ಸಹ ಇರಾನ್‍ನಿಂದ ಪರಿಹಾರವನ್ನು ನೀಡುವಂತೆ ಪಟ್ಟು ಹಿಡಿಯುತ್ತಿದ್ದೇನೆ. ರಸ್ತೆ ಬದಿಯ ಬಾಂಬ್‍ಗಳು ಮತ್ತು ಇತರ ಸಂಘರ್ಷಗಳ ಮೂಲಕ ಇರಾನ್ ಜನರನ್ನು ಕೊಂದಿದೆ ಮತ್ತು ಗಂಭೀರವಾಗಿ ಗಾಯಗೊಳಿಸಿದೆ ಎಂದು ಟ್ರಂಪ್ ಸೋಮವಾರ ತಮ್ಮ `ಟ್ರುತ್ ಸೋಶಿಯಲ್' ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.
ಇರಾನ್ ಮತ್ತು ಅದರ ಮಿತ್ರಪಕ್ಷಗಳು ನಡೆಸಿದ ದಾಳಿಯಲ್ಲಿ ಕೊಲ್ಲಲ್ಪಟ್ಟ ಹಾಗೂ ಗಾಯಗೊಂಡವರಿಗಾಗಿ ಇರಾನ್‍ನೊಂದಿಗೆ ನಡೆಯುವ ಯಾವುದೇ ಭವಿಷ್ಯದ ಮಾತುಕತೆಗಳಲ್ಲಿ ಪರಿಹಾರದ ವಿಷಯವನ್ನು ಸೇರಿಸಿಕೊಳ್ಳಬೇಕು. ಜನರಲ್ ಸುಲೇಮಾನಿ ಅವರ ನೇತೃತ್ವದಲ್ಲಿ ಇರಾನ್ ನಡೆಸಿದ ರಸ್ತೆಬದಿಯ ಬಾಂಬ್ ದಾಳಿಗಳು ಮತ್ತು ಅನೇಕ ಸಂಘರ್ಷಗಳಿಂದ ಹತರಾದ ಮತ್ತು ಗಂಭೀರವಾಗಿ ಗಾಯಗೊಂಡ ಎಲ್ಲ ಜನರಿಗಾಗಿ ಹಾಗೂ `ಯುಎಸ್‍ಎಸ್ ಕೋಲ್' (ಅಮೆರಿಕದ ಯುದ್ಧನೌಕೆ)ನ ಮೇಲಿನ ದಾಳಿಯಲ್ಲಿ ಕೊಲ್ಲಲ್ಪಟ್ಟವರ ಕುಟುಂಬಗಳು ಮತ್ತು ಯುದ್ಧದಲ್ಲಿ ಕೊಲ್ಲಲ್ಪಟ್ಟ ಸಾವಿರಾರು ಜನರ ಕುಟುಂಬಗಳಿಗಾಗಿ ಈ ಬೇಡಿಕೆ' ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.