ಕೊಲಂಬಿಯಾದಲ್ಲಿ ಪ್ರಬಲ ಭೂಕಂಪದ ಬಳಿಕ ತುರ್ತು ಪರಿಸ್ಥಿತಿ ಘೋಷಣೆ : ಮೃತರ ಸಂಖ್ಯೆ 132ಕ್ಕೆ ಏರಿಕೆ

Update: 2026-08-11 11:51 IST

Photo credit: PTI

ಬೊಗೊಟ: ಕೊಲಂಬಿಯಾದಲ್ಲಿ ಸೋಮವಾರ ಸಂಭವಿಸಿದ 7.4 ತೀವ್ರತೆಯ ಪ್ರಬಲ ಭೂಕಂಪದಲ್ಲಿ ಮೃತರ ಸಂಖ್ಯೆ 132ಕ್ಕೆ ಏರಿಕೆಯಾಗಿದೆ. ಇತ್ತೀಚಿನ ವರ್ಷಗಳಲ್ಲೇ ಸಂಭವಿಸಿದ ಅತಿದೊಡ್ಡ ಭೂಕಂಪದಿಂದಾಗಿ ಕೊಲಂಬಿಯಾದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.

ಕೊಲಂಬಿಯಾದ ಭೂವೈಜ್ಞಾನಿಕ ಸೇವೆಯ ಪ್ರಕಾರ, ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆಯ ಭೂಕಂಪ ದಾಖಲಾಗಿದೆ. ಇದರ ಕೇಂದ್ರಬಿಂದು ಚೊಕೊ ಪ್ರಾಂತ್ಯದಲ್ಲಿ 103 ಕಿ.ಮೀ. ಆಳದಲ್ಲಿತ್ತು. ಪಶ್ಚಿಮ ಕೊಲಂಬಿಯಾದಾದ್ಯಂತ ನೂರಾರು ಮೈಲುಗಳ ದೂರಕ್ಕೆ ಈ ಭೂಕಂಪನದ ಅನುಭವವಾಗಿವೆ.

ಕೊಲಂಬಿಯಾದ ಕಾಫಿ ಬೆಳೆಯುವ ಪ್ರದೇಶದಲ್ಲಿನ ಪೆರೇರಾ ನಗರದಲ್ಲಿ ಹೆಚ್ಚಿನ ಪ್ರಾಣಹಾನಿ ಸಂಭವಿಸಿದೆ. ಸುತ್ತಮುತ್ತಲಿನ ನಗರಗಳು ಮತ್ತು ವ್ಯಾಲೆ ಡೆಲ್ ಕಾಕಾ ಪ್ರದೇಶದಲ್ಲಿ ವ್ಯಾಪಕ ಹಾನಿ ಸಂಭವಿಸಿದೆ.

ಭೂಕಂಪದ ಕೇಂದ್ರಬಿಂದು ಚೋಕೊ ಪ್ರಾಂತ್ಯದ ಸ್ಯಾನ್ ಜೋಸ್ ಡೆಲ್ ಪಾಲ್ಮಾರ್ ಗ್ರಾಮದ ಸಮೀಪದಲ್ಲಿದೆ. ಭೂಕಂಪದಲ್ಲಿ 480ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳೀಯ ಅಧಿಕಾರಿಗಳ ಪ್ರಕಾರ, ನಗರದ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಕನಿಷ್ಠ 40 ಮಂದಿ ಮೃತಪಟ್ಟಿದ್ದು, 65 ಕಟ್ಟಡಗಳು ಕುಸಿದಿವೆ. ಅವುಗಳ ಪೈಕಿ 15 ಕಟ್ಟಡಗಳ ಅವಶೇಷಗಳಡಿ ಜನರು ಸಿಲುಕಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News