Photo credit : aljazeera

ಟೆಹರಾನ್: ಹಾರ್ಮುಝ್ ಜಲಸಂಧಿಯ ಮೇಲೆ ಹಾರುತ್ತಿದ್ದ ಅಮೆರಿಕದ ಎರಡು ಮಿಲಿಟರಿ ಡ್ರೋನ್‌ ಗಳನ್ನು ಹೊಡೆದುರುಳಿಸಿರುವುದಾಗಿ ಇರಾನ್ ಹೇಳಿದೆ. ಅಲ್ಲದೆ, ಬಹ್ರೇನ್‌ ನಲ್ಲಿರುವ ಯುಎಸ್‌ ನ ಪೇಟ್ರಿಯಾಟ್ ವಾಯು ರಕ್ಷಣಾ ವ್ಯವಸ್ಥೆಯ ಎರಡು ರಾಡಾರ್‌ ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಪ್ರತಿಪಾದಿಸಿ, ಅದಕ್ಕೆ ಸಂಬಂಧಿಸಿದ ವೀಡಿಯೊಗಳನ್ನು ಬಿಡುಗಡೆ ಮಾಡಿದೆ ಎಂದು Aljazeera ವರದಿ ಮಾಡಿದೆ.

ಇರಾನಿನ ಸರ್ಕಾರಿ ಮಾಧ್ಯಮ IRIB ಬಿಡುಗಡೆ ಮಾಡಿರುವ ದೃಶ್ಯಗಳಲ್ಲಿ, ಹಾರ್ಮುಝ್ ಜಲಸಂಧಿಯ ಮೇಲೆ ಹಾರುತ್ತಿದ್ದ ಅಮೆರಿಕದ MQ-9 ಮತ್ತು MQ-1 ಮಾದರಿಯ ಎರಡು ಮಿಲಿಟರಿ ಡ್ರೋನ್‌ ಗಳನ್ನು ಹೊಡೆದುರುಳಿಸಿರುವುದನ್ನು ತೋರಿಸಲಾಗಿದೆ.

ಪ್ರತ್ಯೇಕ ವೀಡಿಯೊದಲ್ಲಿ, ಬಹ್ರೇನ್‌ ನ ಅಲ್-ರಿಫಾ ಮತ್ತು ಅವಲಿ ಪ್ರದೇಶಗಳಲ್ಲಿರುವ ಯುಎಸ್‌ ನ ಎರಡು ಪೇಟ್ರಿಯಾಟ್ ವಾಯು ರಕ್ಷಣಾ ರಾಡಾರ್‌ ಗಳನ್ನು ಗುರಿಯಾಗಿಸಿಕೊಂಡು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕ್ಷಿಪಣಿ ಮತ್ತು ಡ್ರೋನ್ ಕಾರ್ಯಾಚರಣೆ ನಡೆಸಿರುವುದಾಗಿ ಪ್ರಸಾರಕ ವಿವರಿಸಿದೆ.

ಯುಎಸ್ ಮಿಲಿಟರಿ ಉಪಕರಣಗಳು ಹಾನಿಗೊಳಗಾಗದೆ ಉಳಿದಿವೆ ಮತ್ತು IRGC ಅವುಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಹೇಳುವ ಮತ್ತೊಂದು 'ಸತ್ಯ ಪರಿಶೀಲನೆ' ಬಿಡುಗಡೆ ಮಾಡುವಂತೆ ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಅನ್ನು ಸವಾಲು ಮಾಡುವ ಸಂದೇಶವೂ ದೃಶ್ಯಾವಳಿಗಳಲ್ಲಿದೆ.

ಯುಎಸ್ ತನ್ನ ವಾಯುಪ್ರದೇಶವನ್ನು ಉಲ್ಲಂಘಿಸಿರುವುದು ಮತ್ತು ಹೆಂಗಮ್ ದ್ವೀಪದಲ್ಲಿ ರಾಡಾರ್ ಸ್ಥಾಪನೆಯ ಮೇಲಿನ ದಾಳಿಗೆ ಪ್ರತೀಕಾರವಾಗಿ ಈ ಕಾರ್ಯಾಚರಣೆಗಳನ್ನು ನಡೆಸಲಾಗಿದೆ ಎಂದು IRGC ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಇರ್ಷಾದ್ ಎಂ. ವೇಣೂರು/ವಾರ್ತಾಭಾರತಿ

contributor

ಇರ್ಷಾದ್ ಎಂ. ವೇಣೂರು ಅವರು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ 13 ವರ್ಷಗಳ ಅನುಭವ ಹೊಂದಿದ್ದಾರೆ. ಪ್ರಸ್ತುತ ‘ವಾರ್ತಾಭಾರತಿ’ಯಲ್ಲಿ ಡಿಜಿಟಲ್ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಡೆಕ್ಕನ್ ಹೆರಾಲ್ಡ್–ಪ್ರಜಾವಾಣಿ’ ಸಮೂಹದಲ್ಲಿ ಫೋಟೊ ಜರ್ನಲಿಸ್ಟ್ ಆಗಿಯೂ ಕೆಲಸ ಮಾಡಿದ್ದಾರೆ. ಅಂತರರಾಷ್ಟ್ರೀಯ ವಿದ್ಯಮಾನಗಳು, ಮಧ್ಯಪ್ರಾಚ್ಯದ ಸಂಘರ್ಷಗಳು, ಗಲ್ಫ್ ರಾಷ್ಟ್ರಗಳ ಬೆಳವಣಿಗೆಗಳು, ರಾಜಕೀಯ, ವಾಯುಯಾನ, ಅಪರಾಧ ಮತ್ತು ಕ್ರೀಡೆ ಅವರ ಆಸಕ್ತಿಯ ಸುದ್ದಿ ಕ್ಷೇತ್ರಗಳಾಗಿವೆ.