Isreal | ನೆತನ್ಯಾಹು ಅವರ ಲಿಕುಡ್ ಜತೆ ಮಾತುಕತೆಗೆ ಐಸೆನ್ ಕೋಟ್ ಆಹ್ವಾನ
ಸಮ್ಮಿಶ್ರ ಸರ್ಕಾರ ರಚನೆಗೆ ಹೊಸ ಪ್ರಯತ್ನ; ಡಿ.6ರೊಳಗೆ ಸರ್ಕಾರ ರಚಿಸುವ ಕಸರತ್ತು
Photo credit : indiatoday
ಟೆಲ್ ಅವೀವ್: ಚುನಾವಣೆಯ ಬಳಿಕ ಇಸ್ರೇಲ್ ನಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಪರಿಹರಿಸಿ ಹೊಸ ಸರ್ಕಾರ ರಚಿಸಲು ಗಾಡಿ ಐಸೆನ್ ಕೋಟ್ ಪ್ರಯತ್ನ ತೀವ್ರಗೊಳಿಸಿದ್ದಾರೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷವನ್ನು ಸುದೀರ್ಘ ಸಮ್ಮಿಶ್ರ ಸರ್ಕಾರ ರಚನೆಯ ಮಾತುಕತೆಗೆ ಆಹ್ವಾನಿಸಿದ್ದಾರೆ.
ಅ. 27ರಂದು ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷ ಅಥವಾ ರಾಜಕೀಯ ಬಣಕ್ಕೆ ಬಹುಮತ ದೊರೆಯದ ಹಿನ್ನೆಲೆಯಲ್ಲಿ ಸರ್ಕಾರ ರಚನೆ ಕಗ್ಗಂಟಾಗಿದೆ. 120 ಸದಸ್ಯ ಬಲದ ಇಸ್ರೇಲಿ ಸಂಸತ್ತಿನಲ್ಲಿ (ನೆಸ್ಸೆಟ್) ಸರ್ಕಾರ ರಚಿಸಲು 61 ಸ್ಥಾನಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಪಕ್ಷಗಳನ್ನು ಒಳಗೊಂಡ ಏಕತಾ ಸರ್ಕಾರ ರಚಿಸಲು ಐಸೆನ್ಕೋಟ್ ಅವರ ಯಾಶರ್ ಪಕ್ಷ ಮುಂದಾಗಿದೆ.
ರವಿವಾರ ನ.22 ಲಿಕುಡ್ ಪಕ್ಷದ ಪ್ರತಿನಿಧಿಗಳೊಂದಿಗೆ ತೀವ್ರ ಮಾತುಕತೆ ನಡೆಸುವಂತೆ ತಮ್ಮ ಸಂಧಾನ ತಂಡಕ್ಕೆ ಸೂಚಿಸಿರುವ ಯಾಶರ್ ಪಕ್ಷ, ಸರ್ಕಾರ ರಚನೆಗೆ ಇರುವ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸುವುದಾಗಿ ತಿಳಿಸಿದೆ.
ಇಸ್ರೇಲ್ ನ ಮಾಜಿ ಸೇನಾ ಮುಖ್ಯಸ್ಥ ಐಸೆನ್ ಕೋಟ್ ಅವರಿಗೆ ಸರ್ಕಾರ ರಚನೆಯ ಹೊಣೆ ವಹಿಸುವಂತೆ 67 ಸಂಸದರು ಶಿಫಾರಸು ಮಾಡಿದ್ದರು. ಇವರಲ್ಲಿ 48 ಮಂದಿ ಅವರ ರಾಜಕೀಯ ಬಣದವರು ಹಾಗೂ 19 ಮಂದಿ ಅರಬ್ ಪಕ್ಷಗಳ ಸಂಸದರು. ಸರ್ಕಾರ ರಚಿಸಲು ಅವರಿಗೆ ಡಿ. 6ರವರೆಗೆ ಕಾಲಾವಕಾಶ ನೀಡಲಾಗಿದ್ದು, ಅಗತ್ಯವಿದ್ದರೆ ಗಡುವು ವಿಸ್ತರಿಸಬಹುದು.
ನೆತನ್ಯಾಹು ಬದಲಾವಣೆಗೆ ಒಮ್ಮತ; ಸರ್ಕಾರದ ಸ್ವರೂಪದ ಬಗ್ಗೆ ಭಿನ್ನಾಭಿಪ್ರಾಯ :
ನೆತನ್ಯಾಹು ಅವರ ಆಡಳಿತವನ್ನು ಕೊನೆಗೊಳಿಸುವ ಉದ್ದೇಶದಿಂದ ಚುನಾವಣೆಯಲ್ಲಿ ಒಟ್ಟಾಗಿ ಪ್ರಚಾರ ನಡೆಸಿದ್ದ ಮಾಜಿ ಪ್ರಧಾನಿ ನಫ್ತಾಲಿ ಬೆನೆಟ್, ಇಸ್ರೇಲ್ ಬೆಯ್ಟೆನು ನಾಯಕ ಅವಿಗ್ಡೋರ್ ಲಿಬರ್ಮನ್ ಮತ್ತು ಡೆಮಾಕ್ರಟಿಕ್ ಪಕ್ಷದ ನಾಯಕ ಯೈರ್ ಗೋಲನ್ ಅವರ ನಡುವೆ ಸರ್ಕಾರ ರಚನೆಯ ಮಾರ್ಗದ ಬಗ್ಗೆ ಭಿನ್ನಾಭಿಪ್ರಾಯವಿದೆ.
ಐಸೆನ್ಕೋಟ್ ನೇತೃತ್ವದ ರಾಷ್ಟ್ರೀಯ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಬೆನೆಟ್ ಹೇಳಿದ್ದಾರೆ. ನೆತನ್ಯಾಹು ಮತ್ತೆ ಪ್ರಧಾನಿಯಾಗುವುದನ್ನು ತಡೆಯಲು ಬದ್ಧರಾಗಿರುವ ಅವರು, ತಮ್ಮ ಪಕ್ಷ ಯಾವುದೇ ಸಂದರ್ಭದಲ್ಲೂ ನೆತನ್ಯಾಹು ಅಥವಾ ಅವರ ರಾಜಕೀಯ ಬಣದೊಂದಿಗೆ ಕೈಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ, ಐಸೆನ್ ಕೋಟ್ ಪ್ರಧಾನಿಯಾಗಿದ್ದರೆ ನೆತನ್ಯಾಹು ಅವರ ಲಿಕುಡ್ ಪಕ್ಷವನ್ನು ಒಳಗೊಂಡ ಏಕತಾ ಸರ್ಕಾರ ರಚಿಸಲು ಬೆನೆಟ್ ಸಿದ್ಧರಿದ್ದಾರೆ. ಲಿಬರ್ ಮನ್ ಅಲ್ಟ್ರಾ-ಆರ್ಥೊಡಾಕ್ಸ್ ಪಕ್ಷಗಳನ್ನು ಸೇರಿಸಿಕೊಂಡು ಸರ್ಕಾರ ರಚಿಸುವ ಪರವಾಗಿದ್ದರೆ, ಗೋಲನ್ ಅರಬ್ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಲು ಒಲವು ಹೊಂದಿದ್ದಾರೆ.
ಐಸೆನ್ಕೋಟ್ ಅವರು ಲಿಕುಡ್ ಪಕ್ಷ ಹಾಗೂ ಅಲ್ಟ್ರಾ-ಆರ್ಥೊಡಾಕ್ಸ್ ಪಕ್ಷವಾದ ಯುನೈಟೆಡ್ ಟೋರಾ ಜುದಾಯಿಸಂ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸುತ್ತಿದ್ದಾರೆ. ಎಲ್ಲ ಪಕ್ಷಗಳನ್ನೂ ಒಳಗೊಂಡ ಸರ್ಕಾರ ರಚಿಸಲು ಸಾಧ್ಯವಾಗದಿದ್ದರೆ, ಇತರ ಪಕ್ಷಗಳ ಬೆಂಬಲ ಪಡೆದು ಸರ್ಕಾರ ರಚಿಸುವ ಆಯ್ಕೆಯನ್ನೂ ಅವರು ಪರಿಶೀಲಿಸುತ್ತಿದ್ದಾರೆ.
ಮಾತುಕತೆಗೆ ಆಹ್ವಾನ ನೀಡಿರುವ ಬೆನ್ನಲ್ಲೇ ಲಿಕುಡ್ ಪಕ್ಷವು ಸರ್ಕಾರ ರಚನೆಗೆ ಹಲವು ಷರತ್ತುಗಳನ್ನು ಮುಂದಿಟ್ಟಿದೆ. ನೆತನ್ಯಾಹು ಮತ್ತು ಅವರ ಸರ್ಕಾರದ ವಿರುದ್ಧದ ರಾಜಕೀಯ ಬಹಿಷ್ಕಾರ ಹಾಗೂ ವೈಯಕ್ತಿಕ ಟೀಕೆಗಳನ್ನು ನಿಲ್ಲಿಸಬೇಕು ಎಂದು ಪಕ್ಷ ಆಗ್ರಹಿಸಿದೆ. ಆದರೆ ನೆತನ್ಯಾಹು ಅವರೇ ಪ್ರಧಾನಿಯಾಗಬೇಕು ಎಂದು ಸ್ಪಷ್ಟವಾಗಿ ಹೇಳಿಲ್ಲ.
ಇಸ್ರೇಲ್ ಯಹೂದಿ ಜನರ ರಾಷ್ಟ್ರ ಎಂಬುದನ್ನು ಗುರುತಿಸುವ ಜಂಟಿ ಘೋಷಣೆ, ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಗೆ ವಿರೋಧ, ಗಾಝಾ, ಲೆಬನಾನ್ ಮತ್ತು ಸಿರಿಯಾದಲ್ಲಿ ಇಸ್ರೇಲಿ ಭದ್ರತಾ ವಲಯಗಳ ಮುಂದುವರಿಕೆ ಹಾಗೂ ಯೆಶಿವಾ ವಿದ್ಯಾರ್ಥಿಗಳಿಗೆ ಕಡ್ಡಾಯ ಸೇನಾ ಸೇವೆಯಿಂದ ವಿನಾಯಿತಿ ನೀಡುವ ವಿಚಾರದಲ್ಲಿ ಅಲ್ಟ್ರಾ-ಆರ್ಥೊಡಾಕ್ಸ್ ನಾಯಕರೊಂದಿಗೆ ಒಪ್ಪಂದ—ಇವು ಲಿಕುಡ್ ಮುಂದಿಟ್ಟಿರುವ ನಾಲ್ಕು ಪ್ರಮುಖ ಷರತ್ತುಗಳು.
2023ರ ಅಕ್ಟೋಬರ್ 7ರಂದು ಹಮಾಸ್ ದಾಳಿ ನಡೆದ ಬಳಿಕ ನೆತನ್ಯಾಹು ಮತ್ತೆ ಪ್ರಧಾನಿಯಾಗಬಾರದು ಎಂಬುದು ಐಸೆನ್ಕೋಟ್ ಅವರ ನಿಲುವು. ನೆತನ್ಯಾಹು ನೇತೃತ್ವದ ಸರ್ಕಾರದಲ್ಲಿ ತಾವು ಯಾವುದೇ ಕಾರಣಕ್ಕೂ ಸೇರುವುದಿಲ್ಲ ಎಂದು ಅವರು ಹಲವು ಬಾರಿ ಹೇಳಿದ್ದಾರೆ.
ನ. 15ರಂದು ನಡೆದ ಪ್ರಾಥಮಿಕ ಮಾತುಕತೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿರಲಿಲ್ಲ. ಇದೀಗ ತಮ್ಮ ರಾಜಕೀಯ ಬಣದೊಳಗಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಿ, ಸಂಸತ್ತಿನಲ್ಲಿ ಬಹುಮತದ ಬೆಂಬಲ ಗಳಿಸಿ ಡಿ. 6ರ ಗಡುವಿನೊಳಗೆ ಸರ್ಕಾರ ರಚಿಸಲು ಐಸೆನ್ಕೋಟ್ ಹೊಸ ಪ್ರಯತ್ನ ಆರಂಭಿಸಿದ್ದಾರೆ.