ಅಮೆರಿಕದ ನಿರ್ಬಂಧ ಜಾರಿಗೆ ತರದಂತೆ ಇತರ ದೇಶಗಳಿಗೆ ಇರಾನ್ ಎಚ್ಚರಿಕೆ
ಟೆಹರಾನ್, ಆ.28: ಇರಾನ್ ವಿರುದ್ಧದ ಅಮೆರಿಕದ ನಿರ್ಬಂಧಗಳನ್ನು ಜಾರಿಗೆ ತರುವುದನ್ನು ತಪ್ಪಿಸುವುದು ಎಲ್ಲಾ ದೇಶಗಳ ಬಾಧ್ಯತೆಯಾಗಿದೆ ಮತ್ತು ಈ ನಿರ್ಬಂಧಗಳಲ್ಲಿ ಭಾಗವಹಿಸುವುದು ಸ್ವತಂತ್ರ ದೇಶಗಳ ಮೇಲೆ ಒಂದು ದೇಶದ ಅಕ್ರಮ ಇಚ್ಛೆಯನ್ನು ಹೇರುವ ಕ್ರಿಯೆಗೆ ಕುಮ್ಮಕ್ಕು ನೀಡಿದಂತಾಗುತ್ತದೆ ಎಂದು ಇರಾನ್‌ನ ವಿದೇಶಾಂಗ ಸಚಿವಾಲಯ ಎಚ್ಚರಿಸಿದೆ.
ಅಮೆರಿಕದ ಹೊಸ ಆರ್ಥಿಕ ಕ್ರಮಗಳು ಕಾನೂನುಬಾಹಿರ ಮತ್ತು ಸರಕಾರ ಪ್ರಾಯೋಜಿತ ಭಯೋತ್ಪಾದನೆ ಹಾಗೂ ಮಾನವೀಯತೆಯ ವಿರುದ್ಧದ ಅಪರಾಧವಾಗಿದ್ದು, ಇವು ಲಕ್ಷಾಂತರ ಸಾಮಾನ್ಯ ಜನರ ಆರೋಗ್ಯ ಮತ್ತು ಜೀವನೋಪಾಯವನ್ನು ತೀವ್ರ ಅಪಾಯಕ್ಕೆ ಸಿಲುಕಿಸುತ್ತವೆ ಎಂದು ಶುಕ್ರವಾರ `ಎಕ್ಸ್' ಖಾತೆಯಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಸಚಿವಾಲಯ ಖಂಡಿಸಿದೆ.
ಕಾನೂನಿನ ಆಡಳಿತವನ್ನು ಎತ್ತಿಹಿಡಿಯುವಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ ಇರಾನ್, ಅಮೆರಿಕ ಮತ್ತು ಇಸ್ರೇಲ್ ನ ಸಂಯೋಜಿತ ಮಿಲಿಟರಿ ಹಾಗೂ ಆರ್ಥಿಕ ದಾಳಿಯ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳಲು ತನ್ನೆಲ್ಲಾ ಸಾಮರ್ಥ್ಯಗಳನ್ನು ಬಳಸಿಕೊಳ್ಳುವುದಾಗಿ ಹೇಳಿದೆ.
ಈ ಮಧ್ಯೆ, ಅಮೆರಿಕ ತನ್ನ ಒತ್ತಡದ ತಂತ್ರವನ್ನು ಕೈಬಿಟ್ಟರೆ ಮಾತ್ರ ರಾಜತಾಂತ್ರಿಕ ಮಾತುಕತೆಗೆ ಸಿದ್ಧವಿರುವುದಾಗಿ ಇರಾನ್ ಶುಕ್ರವಾರ ಹೇಳಿದೆ. ‘ರಾಜತಾಂತ್ರಿಕತೆಯ ಹಾದಿಗೆ ಮತ್ತೆ ಮರಳುವುದು ಅಸಾಧ್ಯವೇನಲ್ಲ. ಅದು ಒಂದು ಸರಳ ಸತ್ಯವನ್ನು ಅಮೆರಿಕ ಅರ್ಥಮಾಡಿಕೊಳ್ಳುವುದರ ಮೇಲೆ ಅವಲಂಬಿತವಾಗಿದೆ. ಒತ್ತಡ ಹೇರುವುದರಿಂದ ಯಾವುದೇ ಪ್ರಯೋಜನವಿಲ್ಲ’ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಶುಕ್ರವಾರ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಅಮೆರಿಕವು ನಂಬಿಕೆಯನ್ನು ಬೆಳೆಸಿಕೊಳ್ಳಬೇಕು, ಗೌರವಯುತವಾಗಿ ಮಾತನಾಡಬೇಕು, ನಮ್ಮ ಹಕ್ಕುಗಳನ್ನು ಗುರುತಿಸಬೇಕು ಮತ್ತು ತನ್ನ ಬದ್ಧತೆಗಳನ್ನು ಎತ್ತಿಹಿಡಿಯಬೇಕು’ ಎಂದು ಅರಾಘ್ಚಿ ಆಗ್ರಹಿಸಿದ್ದಾರೆ.