ಸಾಂದರ್ಭಿಕ ಚಿತ್ರ

ಕಠ್ಮಂಡು, ಆ.28: ನೇಪಾಳದಲ್ಲಿ ಭೀಕರ ಪ್ರವಾಹಕ್ಕೆ ಕೊಚ್ಚಿಹೋದ ಜನರ ಮೃತದೇಹಗಳು ನದಿಯ ಕೆಳಭಾಗದ ಪ್ರದೇಶಗಳಲ್ಲಿ ಪತ್ತೆಯಾಗುತ್ತಿವೆ. ಇದರಿಂದಾಗಿ ಸ್ಥಳೀಯ ಶವಾಗಾರಗಳು ಭರ್ತಿಯಾಗಿದ್ದು, ಶವಗಳ ರಕ್ಷಣೆ ಹಾಗೂ ಗುರುತು ಪತ್ತೆಗಾಗಿ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.

ರಸುವಾ ಮತ್ತು ನುವಾಕೋಟ್ ಜಿಲ್ಲೆಗಳಲ್ಲಿ ಕೊಚ್ಚಿಹೋದ ಮೃತದೇಹಗಳು ನದಿಯ ಕೆಳಭಾಗದಲ್ಲಿರುವ ಚಿತ್ವಾನ್, ತನಾಹುನ್, ನವಲ್‌ಪರಾಸಿ, ಗೋರ್ಖಾ ಹಾಗೂ ಇತರ ಜಿಲ್ಲೆಗಳಲ್ಲಿ ಸಿಗುತ್ತಿವೆ. ಇದರಿಂದಾಗಿ ಹಲವು ಪ್ರದೇಶಗಳ ಶವಾಗಾರಗಳಲ್ಲಿ ಜಾಗವಿಲ್ಲದಂತಾಗಿದೆ ಎಂದು `ದಿ ಕಠ್ಮಂಡು ಪೋಸ್ಟ್' ವರದಿ ಮಾಡಿದೆ. ಚಿತ್ವಾನ್‌ನಲ್ಲಿ ಸಿಕ್ಕಿರುವ ಮೃತದೇಹಗಳ ಸಂಖ್ಯೆ ಆಸ್ಪತ್ರೆಗಳ ಸಾಮರ್ಥ್ಯಕ್ಕಿಂತ ಹೆಚ್ಚಾಗಿದ್ದು, ಭರತ್‌ಪುರದಲ್ಲಿ ತಾತ್ಕಾಲಿಕ ಶವ ಸಂಗ್ರಹಣಾ ಕೇಂದ್ರವನ್ನು ನಿರ್ಮಿಸಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಹೊಸ ತಾತ್ಕಾಲಿಕ ಕೇಂದ್ರದಲ್ಲಿ ಸುಮಾರು 250 ಮೃತದೇಹಗಳಿಗೆ ಜಾಗವಿರಲಿದೆ. ಅಗತ್ಯ ಬಿದ್ದರೆ, ದೇವ್‌ಘಾಟ್‌ನಲ್ಲಿರುವ ವಿದ್ಯುತ್ ಶ್ಮಶಾನವನ್ನು ಹೆಚ್ಚುವರಿ ಆಯ್ಕೆಯಾಗಿ ಬಳಸಿಕೊಳ್ಳಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಗುರುವಾರ ಮುಂಜಾನೆಯ ವೇಳೆಗೆ, ತ್ರೀಶೂಲಿ ಮತ್ತು ನಾರಾಯಣಿ ನದಿಗಳ ಫಿಶ್ಲಿಂಗ್ ಮತ್ತು ಗೋಲಾಘಾಟ್ ನಡುವಿನ ಚಿತ್ವಾನ್ ವ್ಯಾಪ್ತಿಯಲ್ಲಿ 137 ಮೃತದೇಹಗಳು ಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.

ಮತ್ತೊಂದೆಡೆ, ತನಾಹುನ್, ಗೋರ್ಖಾ, ಪೂರ್ವ ನವಲ್‌ಪರಾಸಿ ಮತ್ತು ಧಾದಿಂಗ್ ಜಿಲ್ಲೆಗಳಿಂದ ಒಟ್ಟು 93 ಮೃತದೇಹಗಳನ್ನು ಪೋಖರಾಗೆ ತರಲಾಗಿದೆ. ಅಲ್ಲೂ ಶವಾಗಾರಗಳು ಭರ್ತಿಯಾಗುವ ಹಂತ ತಲುಪಿವೆ. ಶವಗಳನ್ನು ಪ್ರಸ್ತುತ 2 ರಿಂದ 6 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂಗ್ರಹಿಸಲಾಗುತ್ತಿದೆ. ಈ ತಾಪಮಾನದಲ್ಲಿ ಮೃತದೇಹಗಳನ್ನು ಎರಡು ವಾರಗಳವರೆಗೆ ಮಾತ್ರ ಕೆಡದಂತೆ ಇಡಬಹುದು, ಅದಕ್ಕಿಂತ ಹೆಚ್ಚಿನ ಅವಧಿಗೆ ಇಡಬೇಕಾದರೆ ಮೈನಸ್ ತಾಪಮಾನವನ್ನು ಕಾಯ್ದುಕೊಳ್ಳುವ ವ್ಯವಸ್ಥೆಯ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುರುತು ಸಿಗದ ಮತ್ತು ವಾರಸುದಾರರಿಲ್ಲದ ಶವಗಳ ನಿರ್ವಹಣೆಗೂ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಪೊಲೀಸರು ಮೃತದೇಹಗಳ ಛಾಯಾಚಿತ್ರ ತೆಗೆದು, ಬೆರಳಚ್ಚು ಸಂಗ್ರಹಿಸಿ, ಮರಣೋತ್ತರ ಪರೀಕ್ಷೆ ನಡೆಸಿ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸುತ್ತಾರೆ. ಕುಟುಂಬಸ್ಥರು ಗುರುತಿಸಲು ಅನುಕೂಲವಾಗುವಂತೆ ಫೋಟೋಗಳನ್ನು ಅಂಟಿಸಲಾಗುತ್ತದೆ. ಸಂಬಂಧಿಕರು ಪತ್ತೆಯಾಗದಿದ್ದರೆ, ಗುರುತು ಸಿಗದ ದೇಹಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಸಮಾಧಿ (ಹೂಳಲು) ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಭವಿಷ್ಯದಲ್ಲಿ ಗುರುತಿಸಲು ಅನುಕೂಲವಾಗುವಂತೆ ಪ್ರತಿಯೊಂದು ಮೃತದೇಹಕ್ಕೂ ಟ್ಯಾಗ್ ಸಂಖ್ಯೆಯನ್ನು ನೀಡಿ, ಸಮಾಧಿ ಮಾಡಿದ ವಿವರಗಳನ್ನು ದಾಖಲಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor