×
Ad

ಇಸ್ರೇಲ್ ದಾಳಿಗೆ ಹೇಗೆ ಉತ್ತರಿಸಬೇಕು ಎಂದು ಇರಾನ್ ನಿರ್ಧರಿಸಲಿದೆ: ಖಾಮಿನೈ

Update: 2024-10-27 16:30 IST

ಅಯತುಲ್ಲಾ ಅಲಿ ಖಾಮಿನೈ | PC : NDTV

ಟೆಹ್ರಾನ್: ಶನಿವಾರ ಇರಾನ್ ಮೇಲೆ ಇಸ್ರೇಲಿ ದಾಳಿಯ ಬಳಿಕ ಇರಾನಿನ ಶಕ್ತಿಯನ್ನು ಹೇಗೆ ಇಸ್ರೇಲ್ ಗೆ ತೋರಿಸಬೇಕು ಎನ್ನುವುದನ್ನು ಇರಾನಿನ ಅಧಿಕಾರಿಗಳು ನಿರ್ಧರಿಸಬೇಕು ಎಂದು ದೇಶದ ಪರಮೋಚ್ಚ ನಾಯಕ ಅಯಾತುಲ್ಲಾ ಅಲಿ ಖಾಮಿನೈ ಅವರು ಹೇಳಿರುವುದನ್ನು ಉಲ್ಲೇಖಿಸಿ ದೇಶದ ಅಧಿಕೃತ ಐಆರ್ಎನ್ಎ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಎರಡು ರಾತ್ರಿಗಳ ಹಿಂದೆ ಇಸ್ರೇಲ್ ಎಸಗಿರುವ ದುಷ್ಟಕೃತ್ಯವನ್ನು ಕಡೆಗಣಿಸಬಾರದು,ಉತ್ಪ್ರೇಕ್ಷಿಸಲೂಬಾರದು ಎಂದು ಖಾಮಿನೈ ಹೇಳಿದರು.

ಇಸ್ರೇಲ್ ಇರಾನಿನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ್ದ ರಾತ್ರಿ ವಾಯುದಾಳಿಗೆ ಶನಿವಾರ ಹೆಚ್ಚಿನ ಮಹತ್ವ ನೀಡಿರದ ಇರಾನ್, ದಾಳಿಯು ಸೀಮಿತ ಹಾನಿಯನ್ನಷ್ಟೇ ಉಂಟು ಮಾಡಿದೆ ಎಂದು ಹೇಳಿತ್ತು.

ಇಸ್ರೇಲಿ ಯುದ್ಧವಿಮಾನಗಳು ನಸುಕಿನ ಮುನ್ನ ಟೆಹ್ರಾನ್ ಸಮೀಪದ ಕ್ಷಿಪಣಿ ಕಾರ್ಖಾನೆಗಳು ಮತ್ತು ಇತರ ನೆಲೆಗಳ ಮೇಲೆ ಮೂರು ಸುತ್ತುಗಳ ವಾಯುದಾಳಿಯನ್ನು ನಡೆಸಿದೆ ಎಂದು ಇಸ್ರೇಲ್ ನ ಮಿಲಿಟರಿ ಹೇಳಿದೆ.

ಇರಾನ್ ತನ್ನ ಶಕ್ತಿಯನ್ನು ಇಸ್ರೇಲ್ಗೆ ತೋರಿಸಬೇಕು. ಅದನ್ನು ಜನತೆ ಮತ್ತು ದೇಶದ ಅತ್ಯುತ್ತಮ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹೇಗೆ ಮಾಡಬೇಕು ಎನ್ನುವುದನ್ನು ಅಧಿಕಾರಿಗಳು ನಿರ್ಧರಿಸಬೇಕು ಎಂದು ಖಾಮಿನೈ ಹೇಳಿದರು.

ತನ್ನ ದಾಳಿಯು ಇರಾನ್ ಈ ತಿಂಗಳ ಆರಂಭದಲ್ಲಿ ತನ್ನ ಮೇಲೆ ನಡೆಸಿದ್ದ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿತ್ತು ಎಂದು ಇಸ್ರೇಲ್ ಹೇಳಿದ್ದು, ಈ ದಾಳಿಯ ಹಿನ್ನೆಲೆಯಲ್ಲಿ ವಿಶ್ವದ ಹಲವಾರು ನಾಯಕರು ಶಾಂತಿ ಸ್ಥಾಪನೆಗೆ ಕರೆ ನೀಡಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಸಂಪೂರ್ಣ ಪ್ರಮಾಣದ ಯುದ್ಧದ ಭೀತಿಯನ್ನು ಸೃಷ್ಟಿಸಿರುವ ಪರಿಸ್ಥಿತಿಯನ್ನು ತಿಳಿಗೊಳಿಸುವಂತೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಕರೆ ನೀಡಿದ್ದರೆ, ಇರಾನಿನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯನ್ನು ಖಂಡಿಸಿರುವ ಯುಎಇ, ಪರಿಸ್ಥಿತಿ ಉಲ್ಬಣಗೊಳ್ಳುವಿಕೆಯ ಮುಂದುವರಿಕೆ ಹಾಗೂ ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯ ಮೇಲೆ ಅದರ ಪರಿಣಾಮಗಳ ಬಗ್ಗೆ ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ.

ಸೌದಿ ಅರೇಬಿಯ, ಒಮನ್ ಮತ್ತು ಖತರ್ ಕೂಡ ದಾಳಿಯನ್ನು ಬಲವಾಗಿ ಖಂಡಿಸಿವೆ.

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯ ಬಗ್ಗೆ ತನ್ನ ತೀವ್ರ ಕಳವಳವನ್ನು ವ್ಯಕ್ತಪಡಿಸಿರುವ ಈಜಿಪ್ಟ್, ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಗೆ ಬೆದರಿಕೆಯೊಡ್ಡುವ ಎಲ್ಲ ಕ್ರಮಗಳನ್ನು ತಾನು ಖಂಡಿಸುವುದಾಗಿ ಹೇಳಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News