×
Ad

'ಎಲ್ಲರಿಗೂ ಇಂಧನ ಅಥವಾ ಯಾರಿಗೂ ಇಲ್ಲ': ಮಧ್ಯಪ್ರಾಚ್ಯದ ತೈಲ–ಅನಿಲ ರಫ್ತು ಸ್ಥಗಿತದ ಎಚ್ಚರಿಕೆ ನೀಡಿದ IRGC

Update: 2026-07-15 17:28 IST

Photo Credit : AP 

ಟೆಹರಾನ್: ಅಮೆರಿಕವು ಇರಾನ್‌ನ ಬಂದರುಗಳ ಮೇಲೆ ಮತ್ತೆ ನೌಕಾ ದಿಗ್ಬಂಧನ ಹೇರಿರುವ ಹಿನ್ನೆಲೆಯಲ್ಲಿ, ಮಧ್ಯಪ್ರಾಚ್ಯದಿಂದ ನಡೆಯುವ ಎಲ್ಲ ತೈಲ ಮತ್ತು ನೈಸರ್ಗಿಕ ಅನಿಲ ರಫ್ತುಗಳನ್ನು ಸ್ಥಗಿತಗೊಳಿಸುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಎಚ್ಚರಿಕೆ ನೀಡಿದೆ.

"ಈ ಪ್ರದೇಶದಿಂದ ಇಂಧನ ರಫ್ತು ಎಲ್ಲರಿಗೂ ಇರಬೇಕು. ಇಲ್ಲವಾದರೆ ಯಾರಿಗೂ ಇರಬಾರದು" ಎಂದು IRGC ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಇರಾನ್ ಮತ್ತು ಅಮೆರಿಕ ನಡುವೆ ಕಳೆದ ಕೆಲವು ದಿನಗಳಿಂದ ಪ್ರತೀಕಾರದ ದಾಳಿಗಳು ಮುಂದುವರಿದಿವೆ. ಜೊತೆಗೆ, ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಝ್ ಜಲಸಂಧಿಯ ಮೇಲಿನ ನಿಯಂತ್ರಣಕ್ಕಾಗಿ ಉಭಯ ರಾಷ್ಟ್ರಗಳು ನಡೆಸುತ್ತಿರುವ ಪ್ರಯತ್ನಗಳು ಮಧ್ಯಪ್ರಾಚ್ಯವನ್ನು ಮತ್ತೆ ಪೂರ್ಣ ಪ್ರಮಾಣದ ಯುದ್ಧದತ್ತ ತಳ್ಳುವ ಆತಂಕವನ್ನು ಹುಟ್ಟುಹಾಕಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಇರಾನ್ ಮೇಲಿನ ನೌಕಾ ದಿಗ್ಬಂಧನವನ್ನು ಮರುಜಾರಿಗೊಳಿಸುವುದಾಗಿ ಘೋಷಿಸಿದ್ದರು. ಅಲ್ಲದೆ, ಹಾರ್ಮುಝ್ ಜಲಸಂಧಿಯ ಮೂಲಕ ಸಾಗುವ ಹಡಗುಗಳ ಮೇಲೆ ಶೇಕಡಾ 20ರಷ್ಟು ಶುಲ್ಕ ವಿಧಿಸುವುದಾಗಿಯೂ ತಿಳಿಸಿದ್ದರು.

ಆದರೆ, ಪರ್ಷಿಯನ್ ಕೊಲ್ಲಿಯ ಮಿತ್ರ ರಾಷ್ಟ್ರಗಳ ಮನವಿಯ ಹಿನ್ನೆಲೆಯಲ್ಲಿ, ದಿಗ್ಬಂಧನ ಜಾರಿಗೆ ತರುವ ಕೆಲವೇ ಗಂಟೆಗಳ ಮೊದಲು ಹಡಗುಗಳಿಂದ ಶುಲ್ಕ ವಸೂಲಿ ಮಾಡುವ ಯೋಜನೆಯನ್ನು ಟ್ರಂಪ್ ಕೈಬಿಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News