ಲೆಬನಾನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆ ತೀವ್ರಗೊಳಿಸಿದ ಇಸ್ರೇಲ್
Photo Credit : aljazeera.com
ಬೈರೂತ್,ಮೇ 30: ಇಸ್ರೇಲಿ ಪಡೆಗಳು ಲೆಬನಾನ್‌ನ ಒಳನಾಡು ಪ್ರದೇಶಗಳಿಗೂ ನುಗ್ಗಲಿವೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿಕೆ ನೀಡಿದ ಬೆನ್ನಲ್ಲೇ ಇಸ್ರೇಲ್ ಸೇನೆಯು ದಕ್ಷಿಣ ಲೆಬನಾನ್‌ನ ಏಳು ಗ್ರಾಮಗಳ ನಿವಾಸಿಗಳಿಗೆ ಸ್ಥಳದಿಂದ ತೆರವುಗೊಳ್ಳುವಂತೆ ಎಚ್ಚರಿಕೆ ಸಂದೇಶಗಳನ್ನು ಶನಿವಾರ ರವಾನಿಸಿದೆೆ.
ವಾಶಿಂಗ್ಟನ್‌ನಲ್ಲಿ ಇಸ್ರೇಲ್ ಹಾಗೂ ಲೆಬನಾನ್‌ನ ಮಿಲಿಟರಿ ನಿಯೋಗಗಳು ಮಹತ್ವದ ಭದ್ರತಾ ಮಾತುಕತೆಗಳನ್ನು ನಡೆಸುತ್ತಿರುವಾಗಲೇ ಇಸ್ರೇಲ್ ಸೇನೆ ಈ ಕಾರ್ಯಾಚರಣೆನ್ನು ಆರಂಭಿಸಿದೆ.
ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ಭೀಕರ ಬಾಂಬ್ ದಾಳಿಯನ್ನು ಮುಂದುವರಿಸಿದೆ. ವಾಸ್ತವಿಕ ಕದನವಿರಾಮವನ್ನು ಏರ್ಪಡಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸುವ ಅಗತ್ಯವಿದೆ ಎಂದು ಲೆಬನಾನ್ ಅಧ್ಯಕ್ಷ ಜೋಸೆಫ್ ಅವೋನ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರನ್ನು ಆಗ್ರಹಿಸಿದ್ದಾರೆ.
ಎಪ್ರಿಲ್ 17ರಂದು ಇಸ್ರೇಲ್ ಹಾಗೂ ಇರಾನ್ ಬೆಂಬಲಿತ ಹಿಝ್ಬುಲ್ಲಾ ಬಂಡುಕೋರರ ನಡುವೆ ಕದನವಿರಾಮ ಜಾರಿಗೊಂಡಿತ್ತಾದರೂ, ಅದು ಕಾರ್ಯಗತಗೊಂಡಿಲ್ಲ. ಇಸ್ರೇಲ್ ದಕ್ಷಿಣ ಲೆಬನಾನ್‌ನಲ್ಲಿ ತನ್ನ ದಾಳಿಗಳನ್ನು ತೀವ್ರಗೊಳಿಸಿದೆ. ಹಾಗೆಯೇ ಪಶ್ಚಿಮ ಏಷ್ಯಾ ಸಂಘರ್ಷವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಜೊತೆ ಏರ್ಪಡುವ ಯಾವುದೇ ಒಪ್ಪಂದದಲ್ಲಿ ಲೆಬನಾನ್ ಸೇರ್ಪಡೆಗೊಳ್ಳಬೇಕೆಂದು ಇರಾನ್ ಪಟ್ಟುಹಿಡಿದಿದೆ.
ಇಸ್ರೇಲ್ ಸೇನೆ ಹಾಗೂ ಹಿಝ್ಬುಲ್ಲಾ ಕದನವಿರಾಮ ಉಲ್ಲಂಘನೆಗೆ ಸಂಬಂಧಿಸಿ ಪರಸ್ಪರರ ವಿರುದ್ಧ ಆರೋಪ-ಪ್ರತ್ಯಾರೋಪಗಳನ್ನು ಹೊರಿಸುತ್ತಿವೆ.
ಈ ಮಧ್ಯೆ ಉತ್ತರ ಇಸ್ರೇಲ್ ನಗರ ಕಿರಿಯಟ್ ಶ್ಮೊನಾದ ಮೇಲೆ ರಾಕೆಟ್ ದಾಳಿಗಳನ್ನು ನಡೆಸಿರುವುದಾಗಿ ಹಿಝ್ಬುಲ್ಲಾ ಗುಂಪು ತಿಳಿಸಿದೆ. ಅಲ್ಲದೆ ದಕ್ಷಿಣ ಲೆಬನಾನ್‌ನ ಘನೌರಿಯೆಹ್‌ನಲ್ಲಿ ಇಸ್ರೇಲಿ ಸೈನಿಕರ ಮೇಲೆ ದಾಳಿ ನಡೆಸಿ ಅವರನ್ನು ಹಿಮ್ಮೆಟ್ಟಿಸಿರುವುದಾಗಿ ಅದು ಹೇಳಿದೆ. ಉತ್ತರ ಇಸ್ರೇಲ್‌ನ ಸೇನಾ ನೆಲೆಯೊಂದರ ಮೇಲೆ ರಾಕೆಟ್ ದಾಳಿ ನಡೆಸಿರುವುದಾಗಿಯೂ ತಿಳಿಸಿದೆ.
ಇಸ್ರೇಲ್ ಪಡೆಗಳು ಲೆಬನಾನ್- ಇಸ್ರೇಲ್‌ಗಡಿ ಮುಂಚೂಣಿಯಿಂದ 30 ಕಿ.ಮೀ.ಉತ್ತರದಲ್ಲಿ ಹರಿಯುವ ನದಿಯಾಚೆಗೂ ಮುನ್ನುಗ್ಗಿವೆಯೆಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಶುಕ್ರವಾರ ಘೋಷಿಸಿದ್ದರು.