ಬ್ರೆಝಿಲ್ ಮಳೆಕಾಡುಗಳಲ್ಲಿ ವ್ಯಾಪಕ ಅಕ್ರಮ ಗಣಿಗಾರಿಕೆ : ಕಲುಷಿತವಾದ ನದಿ; ಅಪಾಯದಲ್ಲಿ ಮೂಲನಿವಾಸಿಗಳು
Photo Credit : aljazeera.com
ಬ್ರೆಸಿಲಿಯಾ,ಮೇ30: ಬ್ರೆಝಿಲ್‌ನ ಅಮೆಝಾನ್ ಮಳೆಕಾಡುಗಳಲ್ಲಿ ಸರಕಾರದ ನಿರ್ಬಂಧಗಳನ್ನು ಉಲ್ಲೇಖಿಸಿ ಚಿನ್ನದ ಅಕ್ರಮ ಗಣಿಗಾರಿಕೆಯು ವ್ಯಾಪಕವಾಗಿ ನಡೆಯುತ್ತಿದೆಯೆಂದು ಪರಿಸರವಾದಿ ಸಂಘಟನೆ ಗ್ರೀನ್‌ಪೀಸ್‌ನ ವರದಿಯೊಂದು ಬಹಿರಂಗಪಡಿಸಿದೆ.
2023ರಲ್ಲಿ ಅಧಿಕಾರ ಸ್ವೀಕರಿಸಿದ ಲುಲಾ ದ ಸಿಲ್ವ ನೇತೃತ್ವದ ಬ್ರೆಝಿಲ್ ಸರಕಾರವು ಚಿನ್ನದ ಅಕ್ರಮ ಗಣಿಗಾರಿಕೆಯನ್ನು ಸಂಪೂರ್ಣವಾಗಿ ತೊಡೆದುಹಾಕುವುದಾಗಿ ಘೋಷಿಸಿತ್ತು. ಆದಾಗ್ಯೂ ಕಾನೂನಿನ ನ್ಯೂನತೆಗಳನ್ನು ದುರುಪಯೋಗಪಡಿಸಿಕೊಂಡು ಗಣಿಗಾರಿಕೆ ಮಾಫಿಯಾಗಳು ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಿವೆ.
ಅಕ್ರಮವಾಗಿ ಗಣಿಗಾರಿಕೆ ಮಾಡಲಾದ ಚಿನ್ನವನ್ನು ಕಾನೂನುಬದ್ಧಗೊಳಿಸಲು ಈ ಮಾಫಿಯಾಗಳು ಗಣಿಗಾರಿಕೆ ನಡೆಯುವ ಪ್ರದೇಶಗಳ ಹೆಸರಿನಲ್ಲಿ ಪರ್ಮಿಟ್ ಮಾಡಿಸಿಕೊಂಡು ನಿಷೇಧಿಸಿದ ಸ್ಥಳಗಳಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿವೆ ಎಂದು ವರದಿ ಹೇಳಿದೆ. ಈ ಪರ್ಮಿಟ್‌ಗಳನ್ನು ಬಳಸಿಕೊಂಡು 2018 ರಿಂದ 2026ರ ನಡುವೆ 53.88 ಶತಕೋಟಿ ಡಾಲರ್ ಮೌಲ್ಯದ 26.8 ಮೆಟ್ರಿಕ್ ಟನ್ ಅಕ್ರಮ ಚಿನ್ನವನ್ನು ಮಾರಾಟ ಮಾಡಲಾಗಿದೆಯೆಂದು ಗ್ರೀನ್‌ಪೀಸ್ ಅಂದಾಜಿಸಿದೆ.
ಇಂತಹ ಅಕ್ರಮ ಗಣಿಗಾರಿಕೆ ಚಟುವಟಿಕೆಗಳು ಅಮೆಝಾನ್ ಮಳೆಕಾಡುಗಳು ಹಾಗೂ ಅವುಗಳ ಪರಿಸರದಲ್ಲಿ ವಾಸಿಸುವ ಮೂಲನಿವಾಸಿಗಳ ಜಮೀನುಗಳಿಗೆ ಭಾರೀ ಹಾನಿಯನ್ನುಂಟು ಮಾಡಿದೆ. ಬಹುತೇಕ ಅಕ್ರಮ ಗಣಿಗಾರಿಕೆಗಳು ಮುಖ್ಯವಾಗಿ ಕಾಯಪೊ ಸಮುದಾಯದ ಮೂಲನಿವಾಸಿಗಳ ವಸತಿ ಪ್ರದೇಶಗಳ ಸಮೀಪ ನಡೆಯುತ್ತಿದೆಯೆಂದು ವರದಿ ಹೇಳಿದೆ.
ಪ್ರಸಕ್ತ ಪರಿಸ್ಥಿತಿ ಗಂಭೀರವಾಗಿದ್ದು, ಚಿನ್ನದ ಅಕ್ರಮ ಗಣಿಗಾರಿಕೆಯಿಂದ ನದಿಗಳು ಹಾಗೂ ಮೀನು ಕಲುಷಿತಗೊಂಡಿದ್ದು ಮೂಲನಿವಾಸಿಗಳಿಗೆ ವಿಷವುಣಿಸುತಿವೆ ಎಂದು ಗ್ರೀನ್ ಪೀಸ್ ವರದಿ ತಿಳಿಸಿದೆ.