ಯುದ್ಧ ವಲಯಗಳಲ್ಲಿ ಲೈಂಗಿಕ ಹಿಂಸಾಚಾರ : ವಿಶ್ವಸಂಸ್ಥೆಯ ಕಪ್ಪುಪಟ್ಟಿಗೆ ಇಸ್ರೇಲ್, ರಶ್ಯ ಸೇರ್ಪಡೆ
Photo Credit : un
ನ್ಯೂಯಾರ್ಕ್,ಮೇ 30: ಯುದ್ಧವಲಯಗಳಲ್ಲಿ ಲೈಂಗಿಕ ಹಿಂಸಾಚಾರವನ್ನು ಕುಮ್ಮಕ್ಕು ನೀಡಿದ ಅಥವಾ ಅದಕ್ಕೆ ಹೊಣೆಗಾರರಾಗಿರುವ ದೇಶಗಳ ಕಪ್ಪುಪಟ್ಟಿಗೆ ಇಸ್ರೇಲ್ ಹಾಗೂ ರಶ್ಯವನ್ನು ವಿಶ್ವಸಂಸ್ಥೆಯು ಶುಕ್ರವಾರ ಸೇರ್ಪಡೆಗೊಳಿಸಿದೆ. ಈ ಎರಡು ದೇಶಗಳು ಕೈದಿಗಳು ಹಾಗೂ ವಶಕ್ಕೆ ತೆಗೆದುಕೊಳ್ಳಲಾದ ನಾಗರಿಕರ ಮೇಲೆ ಬರ್ಬರವಾದ ಲೈಂಗಿಕ ಹಿಂಸಾಚಾರವನ್ನು ಎಸಗಿವೆ ಎಂದು ಆರೋಪಿಸಲಾಗಿದೆ.
ವಿಶ್ವಸಂಸ್ಥೆಯ ಈ ಕ್ರಮವನ್ನು ಇಸ್ರೇಲ್ ತೀವ್ರವಾಗಿ ಖಂಡಿಸಿದೆ ಹಾಗೂ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಜೊತೆ ಎಲ್ಲಾ ರೀತಿಯ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳುವುದಾಗಿ ತಿಳಿಸಿದೆ.
ಸಂಘರ್ಷದ ಸಂದರ್ಭ ಲೈಂಗಿಕ ಹಿಂಸಾಚಾರದ ಕುರಿತಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸಲ್ಲಿಸಲಾದ ವಾರ್ಷಿಕ ವರದಿಯಲ್ಲಿ ಉಭಯದೇಶಗಳ ವಿರುದ್ಧ ಗಂಭೀರವಾದ ಆರೋಪಗಳನ್ನು ಹೊರಿಸಲಾಗಿತ್ತು. ಈ ಹಿನ್ನೆಯಲ್ಲಿ ಅವುಗಳನ್ನು ಕಳೆದ ವರ್ಷದ ಕಪ್ಪುಪಟ್ಟಿಗೆ ಸೇರಿಸಲಾಗುವುದೆಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿತ್ತು.
ಹಿಂದಿನ ವರ್ಷಕ್ಕೆ ಹೋಲಿಸಿದರೆ ಜಗತ್ತಿನಾದ್ಯಂತ ಯುದ್ಧವಲಯಗಳಲ್ಲಿ ಲೈಂಗಿಕ ಹಿಂಸಾಚಾರದ ಪ್ರಮಾಣವು ಶೇ.100ರಷ್ಟು ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆಯ ವಿಶೇಷ ವರದಿಗಾರ್ತಿ ಪ್ರಮೀಳಾ ಪ್ಯಾಟರ್ನ್ ಅವರು ತಿಳಿಸಿದ್ದಾರೆ.
ಫೆಲೆಸ್ತೀನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಅಪ್ರಾಪ್ತ ವಯಸ್ಕರನ್ನು ಒಳಗೊಂಡಂತೆ ಲೈಂಗಿಕ ಹಿಂಸಾಚಾರವನ್ನು ಎಸಗಿದೆ. ಬರ್ಬರವಾಗಿ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಕಾರಾಗೃಹಗಳಲ್ಲಿ ಹಾಗೂ ವಿಚಾರಣಾ ಕೇಂದ್ರಗಳಲ್ಲಿ ಬಲವಂತಾಗಿ ನಗ್ನಗೊಳಿಸುವುದು ಸೇರಿದಂತೆ ವಿವಿಧ ರೀತಿಯಲ್ಲಿ ಲೈಂಗಿಕ ದೌರ್ಜನ್ಯಗಳನ್ನು ಎಸಗಿವೆ. ಇಂತಹ ಹಲವಾರು ದೌರ್ಜನ್ಯಗಳನ್ನು ಇಸ್ರೇಲಿ ಸೈನಿಕರು ವೀಡಿಯೊ ಕ್ಯಾಮರಗಳಲ್ಲಿ ಚಿತ್ರೀಕರಿಸಿದ್ದಾರೆಂದು ವರದಿ ಹೇಳಿದೆ.
ಹಾಗೆಯೇ ಉಕ್ರೇನ್‌ನಲ್ಲಿ ರಶ್ಯನ್ ಪಡೆಗಳು ಲೈಂಗಿಕ ಹಿಂಸಾಚಾರದ 310 ಪ್ರಕರಣಗಳನ್ನು ಎಸಗಿವೆ ಎಂದು ವಿಶ್ವಸಂಸ್ಥೆ ದೃಢಪಡಿಸಿದೆ. ಗುಪ್ತಾಂಗಗಳಿಗೆ ಇಲೆಕ್ಟ್ರಿಕ್ ಶಾಕ್ ಹಾಗೂ ಬರ್ಬರವಾಗಿ ಥಳಿಸುವಿಕೆಯಂತಹ ಚಿತ್ರಹಿಂಸೆಯ ಕ್ರಮಗಳನ್ನು ರಶ್ಯನ್ ಪಡೆಗಳು ಅನುಸರಿಸಿವೆ ಎಂದು ವರದಿ ಹೇಳಿದೆ.