ಸಾಂದರ್ಭಿಕ ಚಿತ್ರ


ಟೋಕಿಯೊ: ಜಪಾನ್‌ ನ ಶಿಜುವೊಕಾ ಪ್ರಾಂತ್ಯದಲ್ಲಿ ರವಿವಾರ ಮುಂಜಾನೆ 5.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 22 ಮಂದಿ ಗಾಯಗೊಂಡಿದ್ದಾರೆ. ಭೂಕಂಪದ ತೀವ್ರತೆಗೆ ಹಲವು ಪ್ರದೇಶಗಳಲ್ಲಿ ಕಟ್ಟಡಗಳು ನಡುಗಿದ್ದು, ಅಂಗಡಿಗಳ ಗಾಜುಗಳು ಒಡೆದು ರಸ್ತೆಗಳ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ದಿಢೀರ್ ಕಂಪನದಿಂದ ಆತಂಕಗೊಂಡ ಜನರು ಕಟ್ಟಡಗಳಿಂದ ಹೊರ ಬಂದಿದ್ದಾರೆ. 

ಜಪಾನ್ ಹವಾಮಾನ ಸಂಸ್ಥೆ (JMA) ಪ್ರಕಾರ, ಸ್ಥಳೀಯ ಕಾಲಮಾನ ರಾತ್ರಿ 1.04ಕ್ಕೆ ಭೂಕಂಪ ಸಂಭವಿಸಿದೆ. ಶಿಜುವೊಕಾ ಪ್ರಾಂತ್ಯದ ಪಶ್ಚಿಮ ಭಾಗದಲ್ಲಿ ಕಂಪನದ ಕೇಂದ್ರಬಿಂದು ಪತ್ತೆಯಾಗಿದ್ದು, ಭೂಮಿಯ ಸುಮಾರು 40 ಕಿ.ಮೀ ಆಳದಲ್ಲಿ ಭೂಕಂಪ ಉಂಟಾಗಿದೆ.

'ಜಪಾನ್ ಟುಡೇ' ವರದಿಯ ಪ್ರಕಾರ, ಐಚಿ ಪ್ರಾಂತ್ಯದ ಚಿತಾ ನಗರದಲ್ಲಿ ಭೂಕಂಪದ ತೀವ್ರತೆ ಹೆಚ್ಚಾಗಿತ್ತು. ಜಪಾನ್‌ ನ ಏಳು ಹಂತಗಳ ಭೂಕಂಪ ತೀವ್ರತಾ ಮಾಪಕದಲ್ಲಿ ಅಲ್ಲಿ 'ಅಪ್ಪರ್ 5' ಮಟ್ಟದ ಕಂಪನ ದಾಖಲಾಗಿದೆ. ನಾಗಾನೊ ಮತ್ತು ಗಿಫು ಸೇರಿದಂತೆ ನೆರೆಯ ಪ್ರಾಂತ್ಯಗಳಲ್ಲೂ ಭೂಮಿ ನಡುಗಿದೆ. ಭೂಕಂಪದಿಂದ ಕನಿಷ್ಠ 22 ಮಂದಿ ಗಾಯಗೊಂಡಿದ್ದಾರೆ. 

ಅಂಗಡಿಗಳ ಗಾಜು ಪುಡಿಪುಡಿ; ಬುಲೆಟ್ ರೈಲುಗಳ ವೇಗ ಕಡಿತ

ಭೂಕಂಪದ ತೀವ್ರತೆಗೆ ಹಲವು ಕಡೆಗಳಲ್ಲಿ ಆಸ್ತಿ ಹಾನಿ ಸಂಭವಿಸಿದೆ. ಅಂಗಡಿಗಳ ಗಾಜುಗಳು ಒಡೆದು ರಸ್ತೆಗಳ ಮೇಲೆ ಚೂರುಗಳು ಹರಡಿಕೊಂಡಿವೆ. ಪುಸ್ತಕದ ಅಂಗಡಿಯೊಂದರಲ್ಲಿ ಕಪಾಟಿನಲ್ಲಿದ್ದ ಪುಸ್ತಕಗಳೆಲ್ಲ ಕೆಳಕ್ಕೆ ಬಿದ್ದು ನೆಲದ ಮೇಲೆ ರಾಶಿಯಾಗಿ ಬಿದ್ದಿವೆ.

ರೈಲ್ವೆ ಮೂಲಸೌಕರ್ಯಗಳಿಗೆ ಹಾನಿಯಾಗಿರುವ ಸಾಧ್ಯತೆಯ ಆತಂಕದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬಾಧಿತ ಪ್ರದೇಶದಲ್ಲಿ ಬುಲೆಟ್ ರೈಲುಗಳ ಸಂಚಾರದ ವೇಗವನ್ನು ಕಡಿಮೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor