Photo Credit : indiatoday.in

ಸನಾ, ನ.7: ಯಮನ್ ನ ಇರಾನ್ ಬೆಂಬಲಿತ ಹೂತಿ ಬಂಡುಕೋರರು ಕೆಂಪು ಸಮುದ್ರದ ಮೂಲಕ ಸುರಕ್ಷಿತವಾಗಿ ಸಂಚರಿಸಲು ಬಯಸುವ ಹಡಗುಗಳಿಗೆ ಇ-ಮೇಲ್ ಆಧಾರಿತ ಕ್ಲಿಯರೆನ್ಸ್ ವ್ಯವಸ್ಥೆಯನ್ನು ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಕೆಲವು ಹಡಗುಗಳು ಕೆಂಪು ಸಮುದ್ರವನ್ನು ಪ್ರವೇಶಿಸುವ ಮೊದಲು ಹೂತಿಗಳನ್ನು ಸಂಪರ್ಕಿಸಲು ಪ್ರಾರಂಭಿಸಿದ್ದು, ತಮ್ಮ ಮೇಲೆ ಯಾವುದೇ ದಾಳಿ ನಡೆಯುವುದಿಲ್ಲ ಎಂಬ ಭರವಸೆ ಪಡೆದುಕೊಳ್ಳುತ್ತಿವೆ. ಹೂತಿಗಳು ಸಾಮಾನ್ಯವಾಗಿ ಇಂತಹ ವಿನಂತಿಗಳಿಗೆ 24 ಗಂಟೆಗಳ ಒಳಗೆ ಪ್ರತಿಕ್ರಿಯಿಸುತ್ತಾರೆ ಎಂದು ಸಿಬ್ಬಂದಿ ವರ್ಗದ ಹೇಳಿಕೆಗಳು ಮತ್ತು ತಾನು ಪರಿಶೀಲಿಸಿದ ಇ-ಮೇಲ್ ಗಳನ್ನು ಉಲ್ಲೇಖಿಸಿ ‘ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.

ಹೆಸರಿಸದ ಹಡಗಿನ ಕ್ಯಾಪ್ಟನ್ ಕಳುಹಿಸಿದ ಇ-ಮೇಲ್ ಒಂದನ್ನು ವರದಿ ಉಲ್ಲೇಖಿಸಿದ್ದು, ಅದರಲ್ಲಿ ‘ನಮ್ಮ ಹಡಗಿಗೆ ಇಸ್ರೇಲ್, ಬ್ರಿಟನ್ ಮತ್ತು ಅಮೆರಿಕದೊಂದಿಗೆ ಯಾವುದೇ ಸಂಪರ್ಕವಿಲ್ಲ. ಸುರಕ್ಷಿತವಾಗಿ ಸಾಗಲು ನಿಮ್ಮ ದೃಢೀಕರಣವನ್ನು ದಯವಿಟ್ಟು ವಿನಂತಿಸುತ್ತೇವೆ’ ಎಂದು ತಿಳಿಸಲಾಗಿತ್ತು.

ಮತ್ತೊಂದು ಸಂದರ್ಭದಲ್ಲಿ, ಚೀನಾದ ಕಂಟೇನರ್ ಹಡಗಿನ ವಿನಂತಿಗೆ ಪ್ರತಿಕ್ರಿಯಿಸಿದ ಹೂತಿಗಳು, ‘ನೀವು ಕ್ಷೇಮವಾಗಿದ್ದೀರಿ ಎಂದು ಭಾವಿಸುತ್ತೇವೆ. ಹಡಗುಗಳ ಮೇಲಿನ ನಿಷೇಧದ ಮಾನದಂಡಗಳನ್ನು ನೀವು ಅರ್ಥಮಾಡಿಕೊಂಡಿರುವುದು ನಮಗೆ ಸಂತೋಷ ತಂದಿದೆ. ಹಡಗಿಗೆ ಏಳು ದಿನಗಳ ಕಾಲ ಮಾನ್ಯತೆ ಇರುವ ಟ್ರಾನ್ಸಿಟ್ ಪರ್ಮಿಟ್ (ಸಾರಿಗೆ ಅನುಮತಿ) ದೊರೆತಿದೆ. ಇತ್ತೀಚಿನ ಸುದ್ದಿ ಮತ್ತು ಅಪ್ಡೇಟ್ಗಳನ್ನು ಪಡೆಯಲು ನಮ್ಮ ಇ-ಮೇಲ್ ಅಲರ್ಟ್ ಸೇವೆಗೆ ಚಂದಾದಾರರಾಗಲು ನಿಮ್ಮನ್ನು ಆಹ್ವಾನಿಸುತ್ತೇವೆ’ ಎಂದು ಉತ್ತರಿಸಿದ್ದರು.

ಈ ಇ-ಮೇಲ್ ಕ್ಲಿಯರೆನ್ಸ್ ವ್ಯವಸ್ಥೆಯು ಹೂತಿಗಳು ಮತ್ತು ಸೌದಿ ಅರೇಬಿಯ ನಡುವಿನ ಉದ್ವಿಗ್ನತೆ ಹೆಚ್ಚಾದ ಬಳಿಕ ಜಾರಿಗೆ ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor