ವಾಶಿಂಗ್ಟನ್, ನ. 7: ಇರಾನ್ ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಮಾಹಿತಿ ನೀಡುವವರಿಗೆ 2 ಕೋಟಿ ಡಾಲರ್ ವರೆಗೆ ಬಹುಮಾನ ಹಾಗೂ ವಲಸೆ ಸೌಲಭ್ಯ ಒದಗಿಸುವುದಾಗಿ ಅಮೆರಿಕ ಘೋಷಿಸಿದೆ.

ಇರಾನ್ ನ ಪರಮಾಣು ಸೌಲಭ್ಯಗಳು, ಉಪಕರಣಗಳು, ವೈಜ್ಞಾನಿಕ ಸಿಬ್ಬಂದಿ ಮತ್ತು ಪರಮಾಣು ಚಟುವಟಿಕೆಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಚಲನವಲನದ ಮಾಹಿತಿಯನ್ನು ಅಮೆರಿಕ ನಿರೀಕ್ಷಿಸಿದೆ.

ಅಮೆರಿಕದ ವಿದೇಶಾಂಗ ಇಲಾಖೆಯ 'ರಿವಾರ್ಡ್ಸ್ ಫಾರ್ ಜಸ್ಟೀಸ್' ಕಾರ್ಯಕ್ರಮದಡಿ ಈ ಬಹುಮಾನ ಘೋಷಿಸಲಾಗಿದ್ದು, ಯುಎಸ್ ಸೆಂಟ್ರಲ್ ಕಮಾಂಡ್ ತನ್ನ 'ಎಕ್ಸ್' ಖಾತೆಯಲ್ಲಿ ಈ ಮಾಹಿತಿ ಹಂಚಿಕೊಂಡಿದೆ.

'ರಿವಾರ್ಡ್ಸ್ ಫಾರ್ ಜಸ್ಟೀಸ್' ಪ್ರಕಟಣೆಯಲ್ಲಿ 2025ರ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ (IAEA) ವರದಿಯನ್ನು ಉಲ್ಲೇಖಿಸಲಾಗಿದೆ. ಇರಾನ್ ಯುರೇನಿಯಂ ಅನ್ನು ಶೇ. 60ರಷ್ಟು ಶುದ್ಧತೆಗೆ ಸಮೃದ್ಧೀಕರಣ ಮಾಡುತ್ತಿದೆ ಎಂದು ವರದಿ ತಿಳಿಸಿದೆ.

ನಾಗರಿಕ ಪರಮಾಣು ಬಳಕೆಗೆ ಸಾಮಾನ್ಯವಾಗಿ ಅಗತ್ಯವಿರುವ ಮಟ್ಟಕ್ಕಿಂತ ಇದು ಗಮನಾರ್ಹವಾಗಿ ಹೆಚ್ಚಾಗಿದೆ. ಆದರೆ, ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆಗೆ ಸಂಬಂಧಿಸಿದ ಸುಮಾರು ಶೇ. 90ರಷ್ಟು ಸಮೃದ್ಧೀಕರಣದ ಮಟ್ಟಕ್ಕಿಂತ ಕಡಿಮೆಯಾಗಿದೆ.

ತಜ್ಞರ ಅಂದಾಜಿನ ಪ್ರಕಾರ, ಇರಾನ್ ತನ್ನಲ್ಲಿರುವ ಯುರೇನಿಯಂ ದಾಸ್ತಾನನ್ನು ಮತ್ತಷ್ಟು ಸಮೃದ್ಧೀಕರಣಗೊಳಿಸಿದರೆ, ಹಲವಾರು ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆಗೆ ಅಗತ್ಯವಿರುವಷ್ಟು ವಸ್ತುವನ್ನು ಪಡೆಯುವ ಸಾಧ್ಯತೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor