Photo credit | UN web TV

ಹೊಸದಿಲ್ಲಿ: 2017ರಲ್ಲಿ ರೋಹಿಂಗ್ಯಾ ಮುಸ್ಲಿಮರ ವಿರುದ್ಧ ಮ್ಯಾನ್ಮಾರ್ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ನರಮೇಧ ನಡೆದಿದೆ. ಇದಕ್ಕೆ ಮ್ಯಾನ್ಮಾರ್ ಹೊಣೆಗಾರ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ (ICJ) ಗುರುವಾರ ತೀರ್ಪು ನೀಡಿದೆ.

2017ರ ಆಗಸ್ಟ್‌ ನಲ್ಲಿ ಉತ್ತರ ರಾಖೈನ್‌ ನಲ್ಲಿ ಸೇನೆ ನಡೆಸಿದ ಕಾರ್ಯಾಚರಣೆ ವೇಳೆ ರೋಹಿಂಗ್ಯಾ ಸಮುದಾಯವನ್ನು ನಾಶಪಡಿಸುವ ಉದ್ದೇಶವಿತ್ತು ಎಂದು ನ್ಯಾಯಾಲಯ ಹೇಳಿದೆ. ಈ ಕಾರ್ಯಾಚರಣೆಯಲ್ಲಿ ಸುಮಾರು 10 ಸಾವಿರ ರೋಹಿಂಗ್ಯಾ ನಾಗರಿಕರು ಹತ್ಯೆಯಾಗಿದ್ದಾರೆ ಎಂದು ಸಾಕ್ಷ್ಯಗಳು ತೋರಿಸಿವೆ. ಕಾರ್ಯಾಚರಣೆಯಲ್ಲಿ ಗುರಿಯಾಗಿಸಿಕೊಂಡಿದ್ದ 8.15 ಲಕ್ಷ ಜನರ ಪೈಕಿ ಹತ್ಯೆಯಾದವರ ಪ್ರಮಾಣ ಶೇ. 1.2ರಷ್ಟಾಗಿದೆ.

ರೋಹಿಂಗ್ಯಾ ಸಮುದಾಯದ ವಿರುದ್ಧ ವ್ಯಾಪಕ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಗಳು ನಡೆದಿವೆ ಎಂದು ನ್ಯಾಯಾಲಯ ದೃಢಪಡಿಸಿದೆ. ಈ ಕೃತ್ಯಗಳ ಮೂಲಕ ಸಮುದಾಯದ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಂದಿಸುವ ಉದ್ದೇಶ ಹೊಂದಲಾಗಿತ್ತು ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಮ್ಯಾನ್ಮಾರ್ ಸೇನೆ ಮಕ್ಕಳ ವಿರುದ್ಧವೂ ತೀವ್ರ ಹಿಂಸಾಚಾರ ನಡೆಸಿದೆ. ಬಾಂಗ್ಲಾದೇಶಕ್ಕೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದ ರೋಹಿಂಗ್ಯಾಗಳ ಮೇಲೂ ದಾಳಿ ನಡೆಸಿದೆ ಎಂದು ನ್ಯಾಯಾಲಯ ಗಮನಿಸಿದೆ.

"ಮ್ಯಾನ್ಮಾರ್ ಉತ್ತರ ರಾಖೈನ್ ರಾಜ್ಯದಲ್ಲಿ ರೋಹಿಂಗ್ಯಾ ಸಮುದಾಯದ ವಿರುದ್ಧ ನರಮೇಧ ಎಸಗಿದೆ. ಇದು ನರಮೇಧ ಅಪರಾಧ ತಡೆ ಮತ್ತು ಶಿಕ್ಷೆ ಒಪ್ಪಂದದ ಅಡಿಯಲ್ಲಿ ತನ್ನ ಜವಾಬ್ದಾರಿಗಳ ಉಲ್ಲಂಘನೆಯಾಗಿದೆ" ಎಂದು ನ್ಯಾಯಾಲಯ ಹೇಳಿದೆ.

ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ, ಒಂದು ಸಮುದಾಯವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ನಾಶಪಡಿಸುವ ಉದ್ದೇಶದಿಂದ ಕೃತ್ಯ ಎಸಗಿದರೆ ಅದನ್ನು ನರಮೇಧ ಎಂದು ಪರಿಗಣಿಸಲಾಗುತ್ತದೆ. ಲಭ್ಯವಿರುವ ಎಲ್ಲ ಸಾಕ್ಷ್ಯಗಳನ್ನು ಪರಿಶೀಲಿಸಿದ ನ್ಯಾಯಾಲಯ, ಉತ್ತರ ರಾಖೈನ್‌ ನ ರೋಹಿಂಗ್ಯಾ ಜನಸಂಖ್ಯೆಯ ಗಣನೀಯ ಭಾಗವನ್ನು ನಾಶಪಡಿಸುವ ಉದ್ದೇಶ ಮ್ಯಾನ್ಮಾರ್ ಹೊಂದಿತ್ತು ಎಂಬ ತೀರ್ಮಾನಕ್ಕೆ ಬಂದಿದೆ.

ನಾಜಿ ಜರ್ಮನಿಯ ಆಡಳಿತದಲ್ಲಿ ನಡೆದ ಹೋಲೋಕಾಸ್ಟ್ ಬಳಿಕ, ನರಮೇಧ ನಡೆದಿದೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ ದೃಢಪಡಿಸಿರುವುದು ಇದು ನಾಲ್ಕನೇ ಪ್ರಕರಣವಾಗಿದೆ. ಒಂದು ರಾಷ್ಟ್ರವನ್ನೇ ನರಮೇಧಕ್ಕೆ ನೇರ ಹೊಣೆಗಾರ ಎಂದು ಘೋಷಿಸಿರುವುದು ಇದೇ ಮೊದಲ ಬಾರಿಯಾಗಿದೆ.

ಈ ಹಿಂದೆ 1994ರಲ್ಲಿ ರುವಾಂಡಾದಲ್ಲಿ ಟುಟ್ಸಿಗಳ ವಿರುದ್ಧ, 1995ರಲ್ಲಿ ಬೋಸ್ನಿಯಾದ ಸ್ರೆಬ್ರೆನಿಕಾದಲ್ಲಿ ಹಾಗೂ 1975ರಿಂದ 1979ರವರೆಗೆ ಕಾಂಬೋಡಿಯಾದ ಖ್ಮೀರ್ ರೂಜ್ ಆಡಳಿತದ ಅವಧಿಯಲ್ಲಿ ನರಮೇಧ ನಡೆದಿರುವುದು ದೃಢಪಟ್ಟಿತ್ತು.

2019ರ ನವೆಂಬರ್‌ನಲ್ಲಿ ಇಸ್ಲಾಮಿಕ್ ಸಹಕಾರ ಸಂಘಟನೆಯ (OIC) ಬೆಂಬಲದೊಂದಿಗೆ ಗ್ಯಾಂಬಿಯಾ ಈ ಪ್ರಕರಣವನ್ನು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ದಾಖಲಿಸಿತ್ತು. 2017ರ ಆಗಸ್ಟ್‌ನಲ್ಲಿ ರಾಖೈನ್ ರಾಜ್ಯದಲ್ಲಿ ಮ್ಯಾನ್ಮಾರ್ ಸೇನೆ ನಡೆಸಿದ ಕಾರ್ಯಾಚರಣೆಯ ವೇಳೆ 1948ರ ನರಮೇಧ ತಡೆ ಒಪ್ಪಂದವನ್ನು ಉಲ್ಲಂಘಿಸಲಾಗಿದೆ ಎಂದು ಗ್ಯಾಂಬಿಯಾ ಆರೋಪಿಸಿತ್ತು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಇರ್ಷಾದ್ ಎಂ. ವೇಣೂರು/ವಾರ್ತಾಭಾರತಿ

contributor

ಇರ್ಷಾದ್ ಎಂ. ವೇಣೂರು ಅವರು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ 13 ವರ್ಷಗಳ ಅನುಭವ ಹೊಂದಿದ್ದಾರೆ. ಪ್ರಸ್ತುತ ‘ವಾರ್ತಾಭಾರತಿ’ಯಲ್ಲಿ ಡಿಜಿಟಲ್ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಡೆಕ್ಕನ್ ಹೆರಾಲ್ಡ್–ಪ್ರಜಾವಾಣಿ’ ಸಮೂಹದಲ್ಲಿ ಫೋಟೊ ಜರ್ನಲಿಸ್ಟ್ ಆಗಿಯೂ ಕೆಲಸ ಮಾಡಿದ್ದಾರೆ. ಅಂತರರಾಷ್ಟ್ರೀಯ ವಿದ್ಯಮಾನಗಳು, ಮಧ್ಯಪ್ರಾಚ್ಯದ ಸಂಘರ್ಷಗಳು, ಗಲ್ಫ್ ರಾಷ್ಟ್ರಗಳ ಬೆಳವಣಿಗೆಗಳು, ರಾಜಕೀಯ, ವಾಯುಯಾನ, ಅಪರಾಧ ಮತ್ತು ಕ್ರೀಡೆ ಅವರ ಆಸಕ್ತಿಯ ಸುದ್ದಿ ಕ್ಷೇತ್ರಗಳಾಗಿವೆ.