ಕಾನೂನು ತಜ್ಞೆ ನವನೀತಂ ಪಿಳ್ಳೆ (Photo: Nobel Committee on X)

ಡರ್ಬನ್: ಭಾರತೀಯ ಮೂಲದ, ದಕ್ಷಿಣ ಆಫ್ರಿಕಾದ ನವಿ ಪಿಳ್ಳೈ ಅವರಿಗೆ 2026ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದದ ವಿರುದ್ಧ ಹೋರಾಡಿದ ನೆಲ್ಸನ್ ಮಂಡೇಲಾ ಅವರ ಪರ ವಕಾಲತ್ತು ವಹಿಸಿದ್ದ ನವಿ ಪಿಳ್ಳೈ, ಬಳಿಕ ಅಂತರರಾಷ್ಟ್ರೀಯ ನ್ಯಾಯಾಂಗದಲ್ಲಿ ಮಹತ್ವದ ಸ್ಥಾನ ಪಡೆದರು. ಭಾರತೀಯ ತಮಿಳು ಮೂಲದ ಕುಟುಂಬದಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್‌ ನಲ್ಲಿ ಜನಿಸಿದ ಅವರು, ಬಾಲ್ಯದಿಂದಲೇ ಜನಾಂಗೀಯ ತಾರತಮ್ಯ, ಪ್ರತ್ಯೇಕತೆ ಮತ್ತು ಸಮಾಜದಿಂದ ಹೊರಗಿಡುವಿಕೆಯಂತಹ ಅನ್ಯಾಯಗಳನ್ನು ಎದುರಿಸಿದರು. ಈ ಅನುಭವಗಳ ನಡುವೆಯೇ ವಕೀಲೆಯಾಗಿ ಬೆಳೆದ ಅವರು, ನ್ಯಾಯ ಮತ್ತು ಮಾನವ ಹಕ್ಕುಗಳ ರಕ್ಷಣೆಗೆ ತಮ್ಮ ವೃತ್ತಿಜೀವನವನ್ನು ಮುಡಿಪಾಗಿಟ್ಟರು.

ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ಮಂಡೇಲಾ ಸೇರಿದಂತೆ ಹಲವು ಹೋರಾಟಗಾರರ ಪರವಾಗಿ ವಕಾಲತ್ತು ವಹಿಸುವ ಮೂಲಕ ಅವರು ತಮ್ಮ ವೃತ್ತಿಜೀವನ ಆರಂಭಿಸಿದರು. ದಕ್ಷಿಣ ಆಫ್ರಿಕಾದಲ್ಲಿ ಜನಾಂಗದ ಆಧಾರದಲ್ಲಿ ಜನರನ್ನು ಪ್ರತ್ಯೇಕಿಸುವ ಮತ್ತು ತಾರತಮ್ಯ ಮಾಡುವ ವ್ಯವಸ್ಥೆಯ ವಿರುದ್ಧದ ಹೋರಾಟದಿಂದ ಆರಂಭವಾದ ಅವರ ಪಯಣ, ಬಳಿಕ ಜಗತ್ತಿನ ಪ್ರಮುಖ ಅಂತಾರಾಷ್ಟ್ರೀಯ ನ್ಯಾಯಾಲಯಗಳಲ್ಲಿನ ಜವಾಬ್ದಾರಿಗಳವರೆಗೆ ವಿಸ್ತರಿಸಿತು.

ಹಲವು ಪ್ರಮುಖ ಹುದ್ದೆಗಳಲ್ಲಿ ಸೇವೆ

ನವಿ ಪಿಳ್ಳೈ ಅವರು ದಕ್ಷಿಣ ಆಫ್ರಿಕಾದ ಹೈಕೋರ್ಟ್, ರುವಾಂಡಾದ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಮಂಡಳಿ ಮತ್ತು ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಇತ್ತೀಚಿನವರೆಗೂ ಆಕ್ರಮಿತ ಫೆಲೆಸ್ತೀನ್ ಪ್ರದೇಶಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ಸ್ವತಂತ್ರ ಅಂತಾರಾಷ್ಟ್ರೀಯ ವಿಚಾರಣಾ ಆಯೋಗದ ಅಧ್ಯಕ್ಷೆಯಾಗಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಸ್ತುತ, ಮ್ಯಾನ್ಮಾರ್‌ ನಲ್ಲಿ ನರಮೇಧ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅವರು ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶೆಯಾಗಿದ್ದಾರೆ.

ಯುದ್ಧ ಮತ್ತು ಹಿಂಸಾಚಾರದ ಕೃತ್ಯಗಳಿಗೆ ಹೊಣೆಗಾರರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರಿಂದ ಇಂತಹ ಕೃತ್ಯಗಳನ್ನು ತಡೆಯಲು ನೆರವಾಗಬಹುದು ಎಂಬುದನ್ನು ನವಿ ಪಿಳ್ಳೈ ಅವರು ಪ್ರಮುಖ ಅಂತಾರಾಷ್ಟ್ರೀಯ ನ್ಯಾಯಾಲಯದ ಪ್ರಕರಣಗಳಲ್ಲಿ ತೋರಿಸಿಕೊಟ್ಟಿದ್ದಾರೆ. ಅಂತಾರಾಷ್ಟ್ರೀಯ ಕಾನೂನು ಸಂಸ್ಥೆಗಳನ್ನು ಬಲಪಡಿಸುವಲ್ಲಿಯೂ ಅವರು ಮಹತ್ವದ ಕೊಡುಗೆ ನೀಡಿದ್ದಾರೆ.

ವರ್ಣಭೇದದ ಅನ್ಯಾಯವನ್ನು ಎದುರಿಸಿ, ಅದರ ವಿರುದ್ಧ ಹೋರಾಡಿದವರ ಪರವಾಗಿ ನಿಂತು, ಬಳಿಕ ಜಾಗತಿಕ ಮಟ್ಟದಲ್ಲಿ ನ್ಯಾಯ ಮತ್ತು ಮಾನವ ಹಕ್ಕುಗಳ ರಕ್ಷಣೆಗೆ ಶ್ರಮಿಸಿದ ನವಿ ಪಿಳ್ಳೈ, ಸ್ವತಂತ್ರ ನಿಲುವು, ಕಾನೂನು ಪರಿಣತಿ ಮತ್ತು ದೃಢಸಂಕಲ್ಪದಿಂದಾಗಿ ನಮ್ಮ ಕಾಲದ ಅತ್ಯಂತ ಗೌರವಾನ್ವಿತ ಅಂತಾರಾಷ್ಟ್ರೀಯ ನ್ಯಾಯಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor