Photo Credit : indianexpress.com

ಪ್ಯಾರಿಸ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 8.5 ಅಡಿ ಎತ್ತರದ, 23-ಕ್ಯಾರಟ್ ಚಿನ್ನದ ಲೇಪನ ಹೊಂದಿರುವ ನಗ್ನ ಪ್ರತಿಮೆಯನ್ನು ಫ್ರಾನ್ಸ್‌ನ ಸ್ಟ್ರಾಸ್‍ಬರ್ಗ್‍ನಲ್ಲಿರುವ ಯುರೋಪಿಯನ್ ಪಾರ್ಲಿಮೆಂಟ್‍ನಲ್ಲಿ ಅನಾವರಣಗೊಳಿಸಲಾಗಿದೆ.

`ದಿ ಆರೆಂಜ್ ಪ್ಲೇಗ್' (ಕಿತ್ತಳೆ ಬಣ್ಣದ ಮಹಾಮಾರಿ) ಎಂದು ಹೆಸರಿಸಲಾದ ಈ ತಾಮ್ರದ ಶಿಲ್ಪವನ್ನು ಡೆನ್ಮಾರ್ಕ್‍ನ ಕಲಾವಿದ ಜೆನ್ಸ್ ಗಲ್ಶಿಯಾಟ್ ರಚಿಸಿದ್ದಾರೆ. ಈ ಶಿಲ್ಪದಲ್ಲಿ ಟ್ರಂಪ್ ಅವರು ಕುಗ್ಗಿರುವ, ಸಣ್ಣ ಪ್ರಮಾಣದ ವ್ಯಕ್ತಿಯೊಬ್ಬನ ಹೆಗಲ ಮೇಲೆ ಕುಳಿತಿರುವಂತೆ ಚಿತ್ರಿಸಲಾಗಿದೆ. ಟ್ರಂಪ್ ಅವರ ಒಂದು ಕೈಯಲ್ಲಿ ಗಾಲ್ಫ್ ಕ್ಲಬ್ ಮತ್ತು ಇನ್ನೊಂದು ಕೈಯಲ್ಲಿ ನ್ಯಾಯದ ತಕ್ಕಡಿ ಇದೆ.

ಈ ಶಿಲ್ಪವನ್ನು `ಕಿಂಗ್ ಆಫ್ ಇನ್‍ಜಸ್ಟಿಸ್' (ಅನ್ಯಾಯದ ರಾಜ) ಎಂದೂ ಕರೆಯಲಾಗುತ್ತದೆ. ಇದರ ಪೀಠದ ಮೇಲಿರುವ ಸಂದೇಶ ಹೀಗಿದೆ: ನಾನೊಬ್ಬ ವ್ಯಕ್ತಿಯ ಬೆನ್ನಿನ ಮೇಲೆ ಕುಳಿತಿದ್ದೇನೆ. ಆತ ನನ್ನ ಭಾರಕ್ಕೆ ಕುಸಿಯುತ್ತಿದ್ದಾನೆ. ಆತನಿಗೆ ಸಹಾಯ ಮಾಡಲು ನಾನು- ಆತನ ಬೆನ್ನಿನಿಂದ ಕೆಳಗಿಳಿಯುವುದನ್ನು ಬಿಟ್ಟು, ಏನು ಬೇಕಾದರೂ ಮಾಡುತ್ತೇನೆ.

ಪರಿಸರ ಮತ್ತು ನಿಯಮ-ಆಧಾರಿತ ಅಂತಾರಾಷ್ಟ್ರೀಯ ವ್ಯವಸ್ಥೆಯ ಮೇಲೆ ಟ್ರಂಪ್ ಉಂಟುಮಾಡುತ್ತಿರುವ ಪ್ರಭಾವವನ್ನು ಈ ಕಲಾಕೃತಿ ಪ್ರತಿನಿಧಿಸುತ್ತದೆ. ನಾನು ನಂಬುವ ಎಲ್ಲಾ ವಿಷಯಗಳನ್ನು ಟ್ರಂಪ್ ನಾಶಪಡಿಸುತ್ತಿದ್ದಾರೆ ಎಂದು ಗಲ್ಶಿಯಾಟ್ ಹೇಳಿದರು.

ಈ ಪ್ರತಿಮೆಯನ್ನು ತಾತ್ಕಾಲಿಕವಾಗಿ ಅನಾವರಣಗೊಳಿಸಲಾಗಿದೆ. ವೀಕ್ಷಕರಿಗೆ `ಪ್ರತಿಭಟನೆಯ ಸಂಕೇತವಾಗಿ' ಈ ಶಿಲ್ಪದ 1,000ಕ್ಕೂ ಹೆಚ್ಚು 3ಡಿ-ಪ್ರಿಂಟೆಡ್ ಕಿರು ಆವೃತ್ತಿಗಳನ್ನು ನೀಡಲಾಗುತ್ತಿದೆ. ಸಂಸತ್ತಿನ ಆಡಳಿತಾತ್ಮಕ ವಿಷಯಗಳ ಉಸ್ತುವಾರಿ ವಹಿಸಿರುವ ವಿವಿಧ ಪಕ್ಷಗಳ `ಕ್ವೇಸ್ಟರ್ಸ್' ಗುಂಪು ಈ ಪ್ರದರ್ಶನವನ್ನು ಅನುಮೋದಿಸಿದೆ ಎಂದು ಯುರೋಪಿಯನ್ ಪಾರ್ಲಿಮೆಂಟ್ ವಕ್ತಾರರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor