ಇನ್ಫೋಸಿಸ್, ಟಿಸಿಎಸ್, ವಿಪ್ರೋ

ವಾಷಿಂಗ್ಟನ್: ಇನ್ಫೋಸಿಸ್, TCS, ವಿಪ್ರೊ ಮತ್ತು HCL ಸೇರಿದಂತೆ ವಿಶ್ವದ ಕೆಲವು ಪ್ರಮುಖ ಹೊರಗುತ್ತಿಗೆ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳನ್ನು ಖಾಯಂ ಕಾರ್ಮಿಕರ ಪ್ರಮಾಣೀಕರಣ ಕಾರ್ಯಕ್ರಮದಿಂದ (PERM) ಅಮೆರಿಕ ಕಾರ್ಮಿಕ ಇಲಾಖೆ ಅಮಾನತುಗೊಳಿಸಿದೆ. ಖಾಯಂ ವಾಸ್ತವ್ಯ ಕೋರುವ ವಿದೇಶಿ ಉದ್ಯೋಗಿಗಳಿಗಾಗಿ ಇರುವ ಈ ವ್ಯವಸ್ಥೆಯನ್ನು ಸಂಸ್ಥೆಗಳು ದುರುಪಯೋಗಪಡಿಸಿಕೊಂಡಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ವಿದೇಶಿ ಉದ್ಯೋಗಿಯೊಬ್ಬರಿಗೆ ಖಾಯಂ ಗ್ರೀನ್ ಕಾರ್ಡ್ ಪಡೆಯಲು ನೆರವಾಗುವ ಪ್ರಕ್ರಿಯೆಯೇ PERM. ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವ ಮೊದಲು, ಆ ಹುದ್ದೆಗೆ ಅರ್ಹ ಮತ್ತು ಲಭ್ಯವಿರುವ ಅಮೆರಿಕದ ಕಾರ್ಮಿಕರು ಇಲ್ಲ ಎಂಬುದನ್ನು ಉದ್ಯೋಗದಾತರು ಕಾರ್ಮಿಕ ಇಲಾಖೆಗೆ ತಿಳಿಸಬೇಕು.

ಈ ಕ್ರಮದಿಂದ ಅಮೆರಿಕದಲ್ಲಿ ಭಾರತೀಯ ವೃತ್ತಿಪರರಿಗೆ ಪ್ರಮುಖ ಉದ್ಯೋಗದಾತ ಸಂಸ್ಥೆಗಳಾಗಿರುವ ಇನ್ಫೋಸಿಸ್, TCS, ವಿಪ್ರೊ ಮತ್ತು HCLನಂತಹ ಐಟಿ ಸಂಸ್ಥೆಗಳ ಮೇಲೆ ಒತ್ತಡ ಹೆಚ್ಚಾಗಬಹುದು. ತಾತ್ಕಾಲಿಕ ಉದ್ಯೋಗದಿಂದ ಖಾಯಂ ವಾಸ್ತವ್ಯಕ್ಕೆ ಬದಲಾಗಲು ಬಯಸುವ ಉದ್ಯೋಗಿಗಳ ಮೇಲೂ ಪರಿಣಾಮ ಬೀರಬಹುದು ಎನ್ನಲಾಗಿದೆ.

PERM ಅಮಾನತಿನಿಂದ ಎಚ್-1ಬಿ ವೀಸಾಗಳು ರದ್ದಾಗುವುದಿಲ್ಲ. ಎಚ್-1ಬಿ ವೀಸಾ ಹೊಂದಿರುವವರನ್ನು ಕಂಪೆನಿಗಳು ನೇಮಕ ಮಾಡಿಕೊಳ್ಳುವುದಕ್ಕೂ ತಡೆಯಿಲ್ಲ. ಆದರೆ ಅಮಾನತು ಜಾರಿಯಲ್ಲಿರುವವರೆಗೆ ಸಂಬಂಧಿತ ಸಂಸ್ಥೆಗಳು PERM ಅಡಿ ಹೊಸ ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ. ಈಗಾಗಲೇ ಸಲ್ಲಿಸಿರುವ ಬಾಕಿ ಅರ್ಜಿಗಳ ಪ್ರಕ್ರಿಯೆಯನ್ನೂ ತಡೆಹಿಡಿಯಲಾಗುತ್ತದೆ.

ಇದರಿಂದ ಭಾರತೀಯ ಐಟಿ ಸಂಸ್ಥೆಗಳು ಹೆಚ್ಚಿನ ಕಾನೂನು, ನಿಯಮ ಪಾಲನೆ ಮತ್ತು ಆಡಳಿತಾತ್ಮಕ ವೆಚ್ಚಗಳನ್ನು ಭರಿಸಬೇಕಾಗಿ ಬರಬಹುದು ಎಂದು ಹೇಳಲಾಗಿದೆ.

ಕಾಗ್ನಿಝೆಂಟ್, ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS), ವಿಪ್ರೊ, HCL ಮತ್ತು ಕ್ಯಾಪ್ಜೆಮಿನಿ ವಿರುದ್ಧ ಕ್ರಮವನ್ನು ಪ್ರಕಟಿಸಿರುವ ಅಮೆರಿಕ ಕಾರ್ಮಿಕ ಕಾರ್ಯದರ್ಶಿ ಕೀತ್ ಸಾಂಡರ್ಲಿಂಗ್, ವಿವಿಧ ಫೆಡರಲ್ ತನಿಖೆಗಳು ನಡೆಯುತ್ತಿರುವುದನ್ನು ಉಲ್ಲೇಖಿಸಿದ್ದಾರೆ. ಮೈಕ್ರೊಸಾಫ್ಟ್ ಮತ್ತು ಅಡೋಬ್ ಸಂಸ್ಥೆಗಳನ್ನೂ PERM ಕಾರ್ಯಕ್ರಮದಿಂದ ಅಮಾನತುಗೊಳಿಸಿರುವುದಾಗಿ ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor