ಪ್ರವಾಹದ ರಕ್ಷಣಾ ಕಾರ್ಯಾಚರಣೆಗೆ ವಿದೇಶಿ ನೆರವು ಬೇಡ ಎಂದಿದ್ದ ನೇಪಾಳದಿಂದ ಯು-ಟರ್ನ್; ಭಾರತ, ಚೀನಾ ತಂಡಗಳಿಗೆ ಅವಕಾಶ
Photo: x.com/IndiaToday
ಕಠ್ಮಂಡು, ಆ. 29: ಭೋಟೆಕೋಶಿ ಪ್ರವಾಹದಲ್ಲಿ ಹಲವು ವಿದೇಶಿ ಪ್ರಜೆಗಳು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರನ್ನು ಪತ್ತೆಹಚ್ಚಲು ವಿದೇಶಿ ಶೋಧ ಮತ್ತು ರಕ್ಷಣಾ ತಂಡಗಳಿಗೆ ಅವಕಾಶ ನೀಡುವಂತೆ ವಿವಿಧ ದೇಶಗಳಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ, ಅಂತಹ ತಂಡಗಳಿಗೆ ಅವಕಾಶ ನೀಡುವುದಿಲ್ಲ ಎಂಬ ತನ್ನ ಹಿಂದಿನ ನಿರ್ಧಾರವನ್ನು ನೇಪಾಳ ಸರ್ಕಾರ ಹಿಂತೆಗೆದುಕೊಂಡಿದೆ.
ನೇಪಾಳಿ ರಕ್ಷಣಾ ಸಿಬ್ಬಂದಿಯೇ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲು ಸಮರ್ಥರು ಎಂದು ಹೇಳಿದ್ದ ಸರ್ಕಾರ ಬುಧವಾರ ವಿದೇಶಿ ರಕ್ಷಣಾ ತಂಡಗಳಿಗೆ ಅವಕಾಶವಿಲ್ಲ ಎಂದು ತಿಳಿಸಿತ್ತು. ಆದರೆ, ಒಂದು ದಿನದೊಳಗೆ ನಿಲುವು ಬದಲಿಸಿರುವ ಸರ್ಕಾರ, ಸುರಂಗ ರಕ್ಷಣೆ, ಡಿಎನ್‌ಎ ಪರೀಕ್ಷೆ ಮತ್ತು ವಿಧಿವಿಜ್ಞಾನ ಗುರುತಿಸುವಿಕೆಯಂತಹ ವಿಶೇಷ ಕ್ಷೇತ್ರಗಳಲ್ಲಿ ಸೀಮಿತ ಅಂತರರಾಷ್ಟ್ರೀಯ ನೆರವು ಪಡೆಯಲು ನಿರ್ಧರಿಸಿದೆ.
‘ಪ್ರವಾಹದಲ್ಲಿ ತಮ್ಮ ನಾಗರಿಕರು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕನಿಷ್ಠ ಶೋಧ ಮತ್ತು ರಕ್ಷಣಾ ತಂಡಗಳು ಹಾಗೂ ಕೆಲವು ತಜ್ಞರಿಗೆ ಅವಕಾಶ ನೀಡುವಂತೆ ಅಂತರರಾಷ್ಟ್ರೀಯ ಸಮುದಾಯದಿಂದ ತೀವ್ರ ಒತ್ತಡ ಬಂದಿತ್ತು. ಹೀಗಾಗಿ ಕೆಲವು ಪ್ರದೇಶಗಳಲ್ಲಿ ಸೀಮಿತ ಸಂಖ್ಯೆಯ ತಜ್ಞರಿಗೆ ಅವಕಾಶ ನೀಡುತ್ತಿದ್ದೇವೆ’ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಕಠ್ಮಂಡು ಪೋಸ್ಟ್ಗೆ ತಿಳಿಸಿದ್ದಾರೆ.
‘ಚೀನಾದೊಂದಿಗಿನ ಹಿಮಾಲಯ ಗಡಿಯಲ್ಲಿನ ವಿನಾಶಕಾರಿ ಪ್ರವಾಹದ ಬಳಿಕ, ನೇಪಾಳಕ್ಕೆ ಪರಿಣತಿ ಕೊರತೆಯಿರುವ ವಿಶೇಷ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ವಿದೇಶಿ ನೆರವು ಅಗತ್ಯವಿದೆ. ಆದರೆ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ವಿದೇಶಿ ನೆರವಿನ ಅಗತ್ಯವಿಲ್ಲ’ ಎಂದು ವಿದೇಶಾಂಗ ಸಚಿವ ಶಿಶಿರ್ ಖನಾಲ್ ರಾಯಿಟರ್ಸ್ ಗೆ ತಿಳಿಸಿದ್ದಾರೆ.
550ಕ್ಕೂ ಹೆಚ್ಚು ಮಂದಿ ಸಾವು; 1,924 ಮಂದಿ ನಾಪತ್ತೆ
ಭೋಟೆಕೋಶಿ ಮತ್ತು ತ್ರಿಶೂಲಿ ನದಿಗಳಲ್ಲಿ ಉಂಟಾದ ದಿಢೀರ್ ಪ್ರವಾಹದಿಂದ ನದಿಗಳ ದಡದಲ್ಲಿರುವ ಹಲವು ಪ್ರದೇಶಗಳು ತೀವ್ರವಾಗಿ ಹಾನಿಗೊಳಗಾಗಿವೆ. ಈ ಪ್ರವಾಹದಲ್ಲಿ ಶುಕ್ರವಾರದ ವೇಳೆಗೆ 550ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಇನ್ನೂ 1,924 ಮಂದಿ ನಾಪತ್ತೆಯಾಗಿದ್ದಾರೆ ಎಂದು ನೇಪಾಳ ವಿಪತ್ತು ಪ್ರಾಧಿಕಾರ ತಿಳಿಸಿದೆ.
ನೇಪಾಳ ಪ್ರವಾಸೋದ್ಯಮ ಮಂಡಳಿಯ ಇತ್ತೀಚಿನ ದಾಖಲೆಗಳ ಪ್ರಕಾರ, ನಾಪತ್ತೆಯಾಗಿರುವ ವಿದೇಶಿಯರಲ್ಲಿ ಭಾರತೀಯರ ಸಂಖ್ಯೆ ಅತ್ಯಧಿಕ. 288 ಭಾರತೀಯರು, 100 ಚೀನೀಯರು, 65 ಅಮೆರಿಕನ್ನರು, 53 ಉಕ್ರೇನಿಯನ್ನರು, 35 ಆಸ್ಟ್ರೇಲಿಯನ್ನರು ಮತ್ತು 33 ಬ್ರಿಟಿಷ್ ಪ್ರಜೆಗಳು ನಾಪತ್ತೆಯಾಗಿದ್ದಾರೆ.
ನೇಪಾಳದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರದ ಮೌಲ್ಯಮಾಪನದ ಆಧಾರದಲ್ಲಿ ಅಂತರ-ಸಚಿವಾಲಯ ಸಮನ್ವಯ ಸಮಿತಿಯು ಭಾರತ, ಚೀನಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಕೊರಿಯಾದ ನೆರವನ್ನು ಅನುಮೋದಿಸಿದೆ. ಈ ನಾಲ್ಕು ದೇಶಗಳ ತಜ್ಞರು ಮತ್ತು ತಂತ್ರಜ್ಞರು ಸುರಂಗ ರಕ್ಷಣಾ ಕಾರ್ಯಾಚರಣೆ, ಡಿಎನ್‌ಎ ಪರೀಕ್ಷೆ ಹಾಗೂ ವಿಧಿವಿಜ್ಞಾನ ಪರೀಕ್ಷೆಗಳಲ್ಲಿ ನೆರವಾಗಲಿದ್ದಾರೆ.
ಪರಿಹಾರ ನೆರವು ನೀಡಿರುವ ಹಲವು ದೇಶಗಳು ತಜ್ಞರ ತಂಡಗಳನ್ನು ಕಳುಹಿಸಲು ಆಸಕ್ತಿ ವ್ಯಕ್ತಪಡಿಸಿವೆ. ಆದರೆ, ನೇಪಾಳವು ಅಂತಹ ಎಲ್ಲ ಮನವಿಗಳನ್ನು ಸ್ವೀಕರಿಸಿಲ್ಲ.
ಕಠ್ಮಂಡುವಿನಲ್ಲಿರುವ ಕನಿಷ್ಠ ಎರಡು ವಿದೇಶಿ ರಾಯಭಾರ ಕಚೇರಿಗಳ ಅಧಿಕಾರಿಗಳು, ನಾಪತ್ತೆಯಾಗಿರುವ ತಮ್ಮ ಪ್ರಜೆಗಳನ್ನು ಪತ್ತೆಹಚ್ಚಲು ತಂಡಗಳನ್ನು ಕಳುಹಿಸಲು ನೇಪಾಳಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ತಿಳಿಸಿದ್ದಾರೆ.
ಅಪ್ಪರ್ ತ್ರಿಶೂಲಿ-1ರಲ್ಲಿ 576 ಕಾರ್ಮಿಕರ ಸುಳಿವಿಲ್ಲ
216 ಮೆಗಾವಾಟ್ ಸಾಮರ್ಥ್ಯದ ನದಿಯ ಹರಿವಿನ ಜಲವಿದ್ಯುತ್ ಯೋಜನೆಯಾದ ಅಪ್ಪರ್ ತ್ರಿಶೂಲಿ-1ರಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಶುಕ್ರವಾರ ತಡರಾತ್ರಿಯವರೆಗೂ 576 ಕಾರ್ಮಿಕರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪ್ರವಾಹ ಸಂಭವಿಸಿದಾಗ ಯೋಜನೆಯಲ್ಲಿ ಸುಮಾರು 1,350 ಮಂದಿ ಕೆಲಸ ಮಾಡುತ್ತಿದ್ದರು.
‘576 ಜನರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಅವರು ಎಲ್ಲಿದ್ದಾರೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಕೆಲವರು ಸುರಂಗಗಳೊಳಗೆ ಸಿಲುಕಿಕೊಂಡಿದ್ದರೆ ಮತ್ತು ಸಮಯಕ್ಕೆ ಸರಿಯಾಗಿ ಅವರನ್ನು ತಲುಪಲು ಸಾಧ್ಯವಾದರೆ, ಅವರನ್ನು ರಕ್ಷಿಸುವ ಸಾಧ್ಯತೆಯಿದೆ’ ಎಂದು ನೇಪಾಳದ ಸ್ವತಂತ್ರ ವಿದ್ಯುತ್ ಉತ್ಪಾದಕರ ಸಂಘದ ಹಿರಿಯ ಉಪಾಧ್ಯಕ್ಷ ಉತ್ತಮ್ ಭ್ಲೋಮ್ ತಿಳಿಸಿದ್ದಾರೆ.
ಪ್ರವಾಹ ಮತ್ತು ಭೂಕುಸಿತಗಳಿಂದ ರಸ್ತೆಗಳು ಹಾನಿಗೊಳಗಾಗಿವೆ. ಮೊಬೈಲ್ ಮತ್ತು ದೂರವಾಣಿ ಸಂಪರ್ಕಗಳಿಗೂ ಅಡಚಣೆ ಉಂಟಾಗಿದೆ. ಇದರಿಂದ ರಕ್ಷಣಾ ತಂಡಗಳು ಹಲವು ಜಲವಿದ್ಯುತ್ ಯೋಜನೆಗಳ ಸ್ಥಳಗಳನ್ನು ತಲುಪಲು ತೊಂದರೆ ಅನುಭವಿಸುತ್ತಿವೆ. ಸಂವಹನ ವ್ಯವಸ್ಥೆ ಕಡಿತಗೊಂಡಿರುವುದು ನಾಪತ್ತೆಯಾದವರ ಸ್ಥಳ ಮತ್ತು ಸ್ಥಿತಿಯನ್ನು ಪತ್ತೆಹಚ್ಚುವ ಕಾರ್ಯವನ್ನೂ ಕ್ಲಿಷ್ಟವಾಗಿಸಿದೆ.
ಪ್ರವಾಹ ಪೀಡಿತ ಪ್ರದೇಶಗಳನ್ನು ತಲುಪಲು ಖಾಸಗಿ ಹೆಲಿಕಾಪ್ಟರ್ ಗಳನ್ನು ಬಳಸುವ ಸಾಧ್ಯತೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಆದರೆ, ಸೀಮಿತ ಲ್ಯಾಂಡಿಂಗ್ ಸ್ಥಳಗಳು ಹಾಗೂ ತಾಂತ್ರಿಕ ಮತ್ತು ಸುರಕ್ಷತಾ ಸವಾಲುಗಳಿಂದಾಗಿ ವೈಮಾನಿಕ ರಕ್ಷಣಾ ಕಾರ್ಯಾಚರಣೆಯೂ ಕಷ್ಟಕರವಾಗಿದೆ.
ಭಾರತದಿಂದ ನೆರವು
ಭಾರತವು ಸುರಂಗ ರಕ್ಷಣಾ ತಂಡ, ವೈದ್ಯಕೀಯ ತಂಡ ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ ( NDRF ) ಸಿಬ್ಬಂದಿಯನ್ನು ಕಳುಹಿಸುವ ಪ್ರಸ್ತಾವವನ್ನು ನೀಡಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಶುಕ್ರವಾರ ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದರು. ಈ ವೇಳೆ ಭಾರತವು ವಿವಿಧ ರೀತಿಯ ನೆರವು ನೀಡಿರುವುದಾಗಿ ಜೈಶಂಕರ್ ತಿಳಿಸಿದ್ದಾರೆ.
ಮಾನವೀಯ ನೆರವು ಹೊತ್ತ ಮೂರನೇ ವಿಮಾನ ಕಠ್ಮಂಡುವಿಗೆ ತೆರಳಿದ್ದು, ಅದರಲ್ಲಿ 10 ಟನ್ ಸಾಮಗ್ರಿ ಸಾಗಿಸಲಾಗಿತ್ತು. ಪೋರ್ಟಬಲ್ ಜನರೇಟರ್‌ಗಳು, ಘನತೆಯ ಕಿಟ್‌ಗಳು, ಆಹಾರ ಪೊಟ್ಟಣಗಳು ಮತ್ತು ನೀರು ಶುದ್ಧೀಕರಣ ಮಾತ್ರೆಗಳು ಈ ನೆರವಿನಲ್ಲಿ ಸೇರಿದ್ದವು.
ನಾಲ್ಕನೇ ಹಂತದ ಪರಿಹಾರ ಸಾಮಗ್ರಿಗಳೊಂದಿಗೆ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ಸುರಂಗ ರಕ್ಷಣಾ ತಜ್ಞರನ್ನು ಒಳಗೊಂಡ 11 ಸದಸ್ಯರ ತಂಡವನ್ನೂ ಭಾರತ ನೇಪಾಳಕ್ಕೆ ಕಳುಹಿಸಿದೆ.
ದಕ್ಷಿಣ ಕೊರಿಯಾ ತಂಡ ಕಳುಹಿಸಲು ಸಿದ್ಧ
ತಮ್ಮ ಒಂಭತ್ತು ಪ್ರಜೆಗಳ ಸಂಪರ್ಕ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯಾ ಕೂಡ ನೆರವು ನೀಡಲು ಮುಂದಾಗಿದೆ.
ಕೊರಿಯಾದ ತ್ವರಿತ ಪ್ರತಿಕ್ರಿಯಾ ತಂಡವು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ನೆರವಾಗಲು ಸಾಧ್ಯವಾಗುವಂತೆ ಕಠ್ಮಂಡುವನ್ನು ಮನವಿ ಮಾಡಿರುವುದಾಗಿ ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವ ಚೋ ಹ್ಯುನ್ ತಿಳಿಸಿದ್ದಾರೆ. ಸಿಯೋಲ್ ತನ್ನ ಕೊರಿಯಾ ವಿಪತ್ತು ಪರಿಹಾರ ತಂಡವನ್ನು ನಿಯೋಜಿಸಲು ಸಿದ್ಧತೆ ನಡೆಸುತ್ತಿದೆ ಎಂದೂ ಅವರು ಹೇಳಿದ್ದಾರೆ.
ವಿದೇಶಿ ತಂಡಗಳು ರಸುವಾ ಮತ್ತು ನುವಾಕೋಟ್ ನಲ್ಲಿರುವ ಜಲವಿದ್ಯುತ್ ಸುರಂಗಗಳ ಮೇಲೆ ಮುಖ್ಯವಾಗಿ ಗಮನಹರಿಸಲಿವೆ. ಈ ಪ್ರದೇಶಗಳಲ್ಲಿ 14 ಜಲವಿದ್ಯುತ್ ಯೋಜನೆಗಳು ಪ್ರವಾಹದಿಂದ ಬಾಧಿತವಾಗಿವೆ.
ನೇಪಾಳವು DNA ಪರೀಕ್ಷೆಯಲ್ಲೂ ವಿದೇಶಿ ನೆರವು ಪಡೆಯಲಿದೆ. ದೇಶದ ಪ್ರಯೋಗಾಲಯಗಳ ಸಾಮರ್ಥ್ಯ ಸೀಮಿತವಾಗಿರುವುದರಿಂದ, ಹೆಚ್ಚಿನ ಸಂಖ್ಯೆಯ ಮಾದರಿಗಳನ್ನು ತ್ವರಿತವಾಗಿ ಪರೀಕ್ಷಿಸಲು ಹಾಗೂ ಮೃತದೇಹಗಳನ್ನು ಶೀಘ್ರವಾಗಿ ಗುರುತಿಸಿ ಕುಟುಂಬಗಳಿಗೆ ಹಸ್ತಾಂತರಿಸಲು ವಿದೇಶಿ ತಜ್ಞರ ನೆರವು ಪಡೆಯಲಾಗುತ್ತಿದೆ ಎಂದು ಖನಾಲ್ ತಿಳಿಸಿದ್ದಾರೆ.