ಬೆಂಜಮಿನ್ ನೆತನ್ಯಾಹು , ಗಾಡಿ ಐಸೆನ್‍ಕೋಟ್ | Photo Credit : AP

ಜೆರುಸಲೇಂ: ಇಸ್ರೇಲ್‌ ನಲ್ಲಿ ಸಂಸದೀಯ ಚುನಾವಣೆಯ ಬಳಿಕ ಸರಕಾರ ರಚನೆ ಕಗ್ಗಂಟಾಗಿದೆ. ಚುನಾವಣೆಯಲ್ಲಿ ಬಹುಮತ ಕಳೆದುಕೊಂಡಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇದೀಗ 'ಯಶಾರ್' ಪಕ್ಷದ ನಾಯಕ ಗಾಡಿ ಐಸೆನ್‌ಕೋಟ್ ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ಮುಕ್ತವಾಗಿರಿಸಿಕೊಂಡಿದ್ದಾರೆ. ಸಾರ್ವಜನಿಕವಾಗಿ ರಾಷ್ಟ್ರೀಯ ಏಕತಾ ಸರಕಾರ ರಚಿಸುವುದಿಲ್ಲ ಎಂದು ಹೇಳಿದ್ದರೂ, ಈ ಆಯ್ಕೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿಲ್ಲ ಎಂದು ಇಸ್ರೇಲಿ ಮಾಧ್ಯಮ 'ಐ24 ನ್ಯೂಸ್' ಸೋಮವಾರ ವರದಿ ಮಾಡಿದೆ.

ನೆತನ್ಯಾಹು ಅವರ 'ಲಿಕುಡ್' ಪಕ್ಷದ ಆಪ್ತ ಮೂಲಗಳ ಪ್ರಕಾರ, ಪ್ರಧಾನಿ ಸರಕಾರ ರಚನೆಗೆ ಸಂಬಂಧಿಸಿದ ಎಲ್ಲ ಆಯ್ಕೆಗಳನ್ನೂ ಪರಿಶೀಲಿಸುತ್ತಿದ್ದಾರೆ. ಯಾವುದೇ ಸಾಧ್ಯತೆಯನ್ನು ನಿರಾಕರಿಸಿಲ್ಲ.

ಅರಬ್ ನೇತೃತ್ವದ ಪಕ್ಷಗಳು ಮತ್ತು ಕಠಿಣ ಧಾರ್ಮಿಕ ನಿಲುವು ಹೊಂದಿರುವ ಅಲ್ಟ್ರಾ ಆರ್ಥೊಡಾಕ್ಸ್ ಗುಂಪುಗಳ ಬೆಂಬಲ ಪಡೆದು ಐಸೆನ್‌ಕೋಟ್ ಪರ್ಯಾಯ ಸರ್ಕಾರ ರಚಿಸಬಹುದು ಎಂಬ ಆತಂಕ ನೆತನ್ಯಾಹು ಅವರಿಗಿದೆ. ಹೀಗಾದರೆ ಅಧಿಕಾರ ಕಳೆದುಕೊಳ್ಳಬೇಕಾಗಬಹುದು ಎಂಬುದು ಅವರ ಚಿಂತೆಗೆ ಕಾರಣ ಎಂದು ಮೂಲಗಳು ತಿಳಿಸಿವೆ.

ಅಕ್ಟೋಬರ್ 27ರಂದು ನಡೆದ ಸಂಸದೀಯ ಚುನಾವಣೆಯಲ್ಲಿ ನೆತನ್ಯಾಹು ನೇತೃತ್ವದ ಮೈತ್ರಿಕೂಟ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. 120 ಸದಸ್ಯ ಬಲದ ಇಸ್ರೇಲ್ ಸಂಸತ್ತು 'ನೆಸೆಟ್'ನಲ್ಲಿ ಬಹುಮತಕ್ಕೆ 61 ಸ್ಥಾನಗಳ ಅಗತ್ಯವಿದೆ.

ನೆತನ್ಯಾಹು ಬಣಕ್ಕೆ 53 ಸ್ಥಾನ

ಚುನಾವಣೆಯಲ್ಲಿ ನೆತನ್ಯಾಹು ಅವರ ಮಿತ್ರಪಕ್ಷಗಳು ಒಟ್ಟು 53 ಸ್ಥಾನಗಳನ್ನು ಮಾತ್ರ ಗೆದ್ದಿವೆ. ಹಿಂದಿನ ಸಂಸತ್ತಿನಲ್ಲಿ ಈ ಬಣ 68 ಸ್ಥಾನಗಳನ್ನು ಹೊಂದಿತ್ತು. ಐಸೆನ್‌ ಕೋಟ್ ನೇತೃತ್ವದ ವಿರೋಧ ಪಕ್ಷಗಳ ಬಣ 48 ಸ್ಥಾನಗಳನ್ನು ಗೆದ್ದಿದೆ. ಉಳಿದ 19 ಸ್ಥಾನಗಳು ಅರಬ್ ನೇತೃತ್ವದ ಪಕ್ಷಗಳ ಪಾಲಾಗಿವೆ.

ವಿರೋಧ ಪಕ್ಷಗಳ 48 ಮತ್ತು ಅರಬ್ ಪಕ್ಷಗಳ 19 ಸ್ಥಾನಗಳನ್ನು ಸೇರಿಸಿದರೆ ಒಟ್ಟು 67 ಸ್ಥಾನಗಳಾಗುತ್ತವೆ. ಅಂದರೆ, ಈ ಪಕ್ಷಗಳು ಒಟ್ಟಾಗಿ ಮೈತ್ರಿ ಮಾಡಿಕೊಂಡರೆ ಸರಕಾರ ರಚಿಸಲು ಅಗತ್ಯಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಹೊಂದಿವೆ. ಆದರೆ, ಅವರೆಲ್ಲರೂ ಒಂದೇ ಮೈತ್ರಿಕೂಟದಡಿ ಬರಲು ಒಪ್ಪುತ್ತಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.

ಅರಬ್ ಪಕ್ಷಗಳೊಂದಿಗೆ ಕೈಜೋಡಿಸಿ ಸರಕಾರ ರಚಿಸಲು ಐಸೆನ್‌ಕೋಟ್ ಮುಂದಾಗುವುದು 'ದೇಶದ್ರೋಹ'ಕ್ಕೆ ಸಮಾನ ಎಂದು ನೆತನ್ಯಾಹು ಹೇಳಿದ್ದಾರೆ. ಈ ಹೇಳಿಕೆಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಪರ್ಯಾಯ ಸರಕಾರ ರಚನೆಯಾಗದಂತೆ ನೆತನ್ಯಾಹು ಅಡ್ಡಿಪಡಿಸುತ್ತಿದ್ದಾರೆ ಎಂದು ಅವು ಆರೋಪಿಸಿವೆ.

ರವಿವಾರ ಐಸೆನ್‌ಕೋಟ್ ಅವರ ಮನೆಯ ಹೊರಗೆ ಕೆಲವರು ಪ್ರತಿಭಟನೆ ನಡೆಸಿದರು. ಅರಬ್ ನೇತೃತ್ವದ ಪಕ್ಷಗಳ ಬೆಂಬಲದೊಂದಿಗೆ ಸರಕಾರ ರಚಿಸುವ ಪ್ರಯತ್ನವನ್ನು ಅವರು ವಿರೋಧಿಸಿದರು. ಇದೇ ವೇಳೆ, ಇತ್ತೀಚಿನ ದಿನಗಳಲ್ಲಿ ನಡೆದ ಮತ್ತಷ್ಟು ಪ್ರತಿಭಟನೆಗಳಲ್ಲಿ ಯಹೂದಿ ಮತ್ತು ಅರಬ್ ಸಮುದಾಯಗಳನ್ನು ಒಳಗೊಂಡ ಮೈತ್ರಿಕೂಟ ರಚಿಸಬೇಕೆಂದು ಒತ್ತಾಯಿಸಲಾಗಿದೆ.

ಇನ್ನೊಂದೆಡೆ, ಚುನಾವಣಾ ಫಲಿತಾಂಶದ ಬಗ್ಗೆಯೂ ವಿವಾದ ಉಂಟಾಗಿದೆ. ಮತದಾನದ ಮೇಲೆ ಅಕ್ರಮವಾಗಿ ಪ್ರಭಾವ ಬೀರಲಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ನೀಡದಿದ್ದರೂ, ನೆತನ್ಯಾಹು ಅವರ ಲಿಕುಡ್ ಪಕ್ಷವು ಮತದಾನ ಪ್ರಕ್ರಿಯೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ.

ಮತದಾರರಿಗೆ ಹಣದ ಆಮಿಷವೊಡ್ಡಲು ಯತ್ನಿಸಿದ ಕೆಲವು ಪ್ರಕರಣಗಳನ್ನು ಪಕ್ಷ ಪ್ರಸ್ತಾಪಿಸಿದೆ. ಅಕ್ಟೋಬರ್ 27ರಂದು ಮತದಾನ ಆರಂಭವಾಗುವ ಮುನ್ನ ಮೂವರು ರಾಜಕೀಯ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಅವರ ಬಳಿ ನಗದು ತುಂಬಿದ ಲಕೋಟೆಗಳು ಪತ್ತೆಯಾಗಿದ್ದವು.

ಇಸ್ಲಾಮಿಸ್ಟ್ ರಾಮ್ ಪಕ್ಷದೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಮೇರೆಗೆ ಎರಡು ದಿನಗಳ ಬಳಿಕ ಇನ್ನೂ ನಾಲ್ವರನ್ನು ಬಂಧಿಸಲಾಯಿತು. ಆದರೆ, ಈ ಪ್ರಕರಣದಲ್ಲಿ ತನ್ನ ಪಾತ್ರವಿಲ್ಲ ಎಂದು ರಾಮ್ ಪಕ್ಷ ಹೇಳಿದೆ.

ಆರಂಭದಲ್ಲಿ ಬಂಧನಕ್ಕೊಳಗಾದ ಮೂವರು ಶಂಕಿತರ ಮೇಲಿನ ನಿರ್ಬಂಧಗಳನ್ನು ಹೆಚ್ಚಿಸುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ರವಿವಾರ ನ್ಯಾಯಾಧೀಶರು ಪೊಲೀಸರ ಮನವಿಯನ್ನು ತಿರಸ್ಕರಿಸಿದರು ಅಥವಾ ಅದರ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. ಈ ಮೂವರ ಪೈಕಿ ಒಬ್ಬನನ್ನು ಕೆಲವು ಷರತ್ತುಗಳೊಂದಿಗೆ ಬಿಡುಗಡೆ ಮಾಡಲಾಯಿತು. ಮತ್ತೊಬ್ಬನಿಗೆ ಎಂಟು ದಿನ ಗೃಹಬಂಧನ ವಿಧಿಸಲಾಯಿತು. ಮೂರನೆ ವ್ಯಕ್ತಿಯ ಬಂಧನವನ್ನು ಎರಡು ದಿನ ವಿಸ್ತರಿಸಲಾಯಿತು.

ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪ ನಡೆದಿರಬಹುದು ಎಂಬ ಆರೋಪದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಚುನಾವಣಾ ಸಮಿತಿಯ ಮನವಿಯ ಮೇರೆಗೆ ಇಸ್ರೇಲ್‌ ನ ಆಂತರಿಕ ಭದ್ರತಾ ಸಂಸ್ಥೆ ಶಿನ್ ಬೆಟ್ ತನಿಖೆ ಆರಂಭಿಸಿದೆ.

ಆದರೆ, ಚುನಾವಣಾ ಸಮಿತಿಯ ಮುಖ್ಯಸ್ಥರೂ ಆಗಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೋಮ್ ಸೊಹ್ಲ್‌ಬರ್ಗ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ವಿದೇಶಿ ಹಸ್ತಕ್ಷೇಪದ ಅನುಮಾನಗಳು ನಿಜವೆಂದು ಸಾಬೀತಾದರೂ, ಅದರಿಂದ ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆ ಅಥವಾ ಒಟ್ಟಾರೆ ಫಲಿತಾಂಶಕ್ಕೆ ಧಕ್ಕೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಖತರ್ ವಿರೋಧ ಪಕ್ಷಗಳಿಗೆ ಬೆಂಬಲ ನೀಡಿದೆ ಎಂಬ ಆರೋಪದ ಮೂಲಕ ಚುನಾವಣಾ ಫಲಿತಾಂಶವನ್ನು ಅಸಿಂಧುಗೊಳಿಸಲು ನೆತನ್ಯಾಹು ಸಂಘಟಿತ ಅಭಿಯಾನ ನಡೆಸುತ್ತಿದ್ದಾರೆ ಎಂದು ಐಸೆನ್‌ ಕೋಟ್ ಆರೋಪಿಸಿದ್ದಾರೆ. ಆದರೆ, ಮತದಾನದ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಹಣಕಾಸಿನ ಚಟುವಟಿಕೆ ನಡೆಸಿರುವ ಆರೋಪವನ್ನು ಖತರ್ ನಿರಾಕರಿಸಿದೆ.

ಬುಧವಾರದಿಂದ ಸರಕಾರ ರಚನೆಗೆ ಮಾತುಕತೆ

ಚುನಾವಣಾ ಫಲಿತಾಂಶಗಳನ್ನು ಈ ವಾರ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ. ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರು ಬುಧವಾರ ಚುನಾವಣೆಯಲ್ಲಿ ಗೆದ್ದ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ಆರಂಭಿಸಲಿದ್ದಾರೆ. ನಂತರ ಸರಕಾರ ರಚಿಸುವ ಜವಾಬ್ದಾರಿಯನ್ನು ಯಾವ ಅಭ್ಯರ್ಥಿಗೆ ವಹಿಸಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ.

ಅಧ್ಯಕ್ಷರಿಂದ ಆಯ್ಕೆಯಾದ ಅಭ್ಯರ್ಥಿಯು ಸಂಸತ್ತಿನಲ್ಲಿ ಬಹುಮತ ಪಡೆಯಲು ಇತರ ಪಕ್ಷಗಳೊಂದಿಗೆ ಮಾತುಕತೆ ನಡೆಸಬೇಕಾಗುತ್ತದೆ. ಮೊದಲ ಅಭ್ಯರ್ಥಿಯ ಪ್ರಯತ್ನ ವಿಫಲವಾದರೆ, ಅಧ್ಯಕ್ಷರು ಮತ್ತೊಬ್ಬ ಅಭ್ಯರ್ಥಿಗೆ ಸರಕಾರ ರಚಿಸಲು ಅವಕಾಶ ನೀಡಬಹುದು. ಯಾವುದೇ ಪಕ್ಷಗಳು ಅಥವಾ ಮೈತ್ರಿಕೂಟಗಳು ಸರಕಾರ ರಚಿಸಲು ಸಾಧ್ಯವಾಗದಿದ್ದರೆ ಇಸ್ರೇಲ್‌ ನಲ್ಲಿ ಮತ್ತೆ ಚುನಾವಣೆ ನಡೆಯುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor