ನೆತನ್ಯಾಹು ಪದಚ್ಯುತಿಗೆ ಅರಬ್ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಿ: ವಿರೋಧ ಪಕ್ಷಗಳಿಗೆ ಇಸ್ರೇಲಿಗರ ಒತ್ತಾಯ
ಬೆಂಜಮಿನ್ ನೆತನ್ಯಾಹು (Photo: PTI)
ಟೆಲ್ ಅವೀವ್: ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಅರಬ್ ನೇತೃತ್ವದ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವಂತೆ ಇಸ್ರೇಲಿನ ಸಾವಿರಾರು ನಾಗರಿಕರು ವಿರೋಧ ಪಕ್ಷಗಳ ನಾಯಕರನ್ನು ಒತ್ತಾಯಿಸಿದ್ದಾರೆ ಎಂದು Aljazeera ವರದಿ ಮಾಡಿದೆ.
ನೆತನ್ಯಾಹು ಮತ್ತು ಅವರ ಮೈತ್ರಿಕೂಟದ ಸರಕಾರವನ್ನು ಪದಚ್ಯುತಗೊಳಿಸಲು ಅಗತ್ಯವಿರುವ 67 ಜನಾದೇಶಗಳ ಬೆಂಬಲ ಲಭ್ಯವಿದೆ ಎಂಬ ಸಂದೇಶವನ್ನು ವಿರೋಧ ಪಕ್ಷಗಳ ನಾಯಕರಿಗೆ ತಲುಪಿಸಲು ಸಾವಿರಾರು ಜನರು ಟೆಲ್ ಅವೀವ್ ನ ಬೀದಿಗಳಲ್ಲಿ ಸೇರಿದ್ದರು.
ಈ 67 ಜನಾದೇಶಗಳಲ್ಲಿ ಇಸ್ರೇಲ್ ನ ಫೆಲೆಸ್ತೀನ್ ನ ನಾಗರಿಕರನ್ನು ಪ್ರತಿನಿಧಿಸುವ ಪಕ್ಷಗಳು ಗಳಿಸಿರುವ ಐತಿಹಾಸಿಕ 19 ಸ್ಥಾನಗಳೂ ಸೇರಿವೆ. ಆದರೆ, ಯಾಶರ್ ಪಕ್ಷದ ನಾಯಕ ಗಡಿ ಐಸೆನ್ಕೋಟ್ ಅವರು ಸರಕಾರ ರಚನೆಗೆ ಸಂಬಂಧಿಸಿದಂತೆ ಈ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಲು ಅಥವಾ ಅವುಗಳ ಬೆಂಬಲ ಪಡೆಯಲು ಬಯಸುತ್ತಿಲ್ಲ ಎನ್ನಲಾಗಿದೆ.
ನೆತನ್ಯಾಹು ಅಥವಾ ಅವರ ಮೈತ್ರಿಕೂಟದ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ವಿರೋಧ ಪಕ್ಷಗಳು ಈಗಾಗಲೇ ಭರವಸೆ ನೀಡಿವೆ. ಈ ಭರವಸೆಯನ್ನು ಉಳಿಸಿಕೊಳ್ಳಬೇಕಾದರೆ, ನೆತನ್ಯಾಹು ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಅರಬ್ ಪಕ್ಷಗಳ ಬೆಂಬಲ ಪಡೆಯಲೇಬೇಕಾದ ಪರಿಸ್ಥಿತಿ ಎದುರಾಗಿದೆ.
ಟೆಲ್ ಅವೀವ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಬದಲಾವಣೆಯ ಪರವಾಗಿ ಚಲಾವಣೆಯಾಗಿರುವ ಮತಗಳು ಕಾರ್ಯರೂಪಕ್ಕೆ ಬರಬೇಕು ಎಂಬ ಒತ್ತಾಯ ಕೇಳಿಬಂದಿದೆ. ಐಸೆನ್ ಕೋಟ್ ಸೇರಿದಂತೆ ಯಹೂದಿ–ಇಸ್ರೇಲಿ ಪಕ್ಷಗಳ ಇತರ ನಾಯಕರು ಜನರ ಧ್ವನಿಗೆ ಸ್ಪಂದಿಸಿ, ಸರಕಾರ ಬದಲಾವಣೆಗೆ ಮುಂದಾಗಬೇಕು ಎಂಬುದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಅರಬ್ ಪಕ್ಷಗಳ ಬೆಂಬಲಕ್ಕೆ ಬಲಪಂಥೀಯರ ವಿರೋಧ
ಇದೇ ವೇಳೆ, ನೆತನ್ಯಾಹು ಬಣದ ಬಲಪಂಥೀಯ ಬೆಂಬಲಿಗರ ನೇತೃತ್ವದಲ್ಲಿ ಮತ್ತೊಂದೆಡೆ ಪ್ರತಿಭಟನೆಗಳು ನಡೆದಿವೆ. ಇಸ್ರೇಲ್ 'ಭಯೋತ್ಪಾದಕರು' ಎಂದು ಕರೆಯುವವರನ್ನು ಒಳಗೊಂಡ ಸರಕಾರವನ್ನು ದೇಶ ಹೊಂದಿರಬಾರದು ಎಂಬ ತಮ್ಮ ನಿಲುವನ್ನು ಪ್ರತಿಭಟನಾಕಾರರು ಘೋಷಣೆಗಳ ಮೂಲಕ ವ್ಯಕ್ತಪಡಿಸಿದ್ದಾರೆ.
ಇಸ್ರೇಲ್ ನ ಫೆಲೆಸ್ತೀನ್ ಮೂಲದ ನಾಗರಿಕರು ಚುನಾವಣೆಯಲ್ಲಿ ಗಳಿಸಿರುವ ಐತಿಹಾಸಿಕ 19 ಸ್ಥಾನಗಳನ್ನು ಬಲಪಂಥೀಯ ವಲಯದ ಕೆಲವರು 'ಚುನಾವಣಾ ಭಯೋತ್ಪಾದನೆ' ಎಂದು ಕರೆಯುತ್ತಿದ್ದಾರೆ. ಅಲ್ಲದೆ, ಈ ಬೆಳವಣಿಗೆಯನ್ನು ಅಕ್ಟೋಬರ್ 7ರ ದಾಳಿಗೆ ಹೋಲಿಸುವ ಚರ್ಚೆಗಳೂ ನಡೆಯುತ್ತಿವೆ.
ಸದ್ಯ ಇಸ್ರೇಲ್ ನಲ್ಲಿ ಸರಕಾರ ರಚನೆಯ ವಿಚಾರದಲ್ಲಿ ಫೆಲೆಸ್ತೀನ್ ನಾಗರಿಕರನ್ನು ಪ್ರತಿನಿಧಿಸುವ ಪಕ್ಷಗಳ ಬೆಂಬಲ ನಿರ್ಣಾಯಕವಾಗಿದೆ. ಈ ಪಕ್ಷಗಳ ಬೆಂಬಲ ದೊರೆತರೆ ಮಾತ್ರ ಗಾಡಿ ಐಸೆನ್ಕೋಟ್ ಅವರಿಗೆ ನೆತನ್ಯಾಹು ಸರಕಾರವನ್ನು ಬದಲಿಸಲು ಅಗತ್ಯವಾದ ರಾಜಕೀಯ ಬಲ ಸಿಗಲಿದೆ. ಸರಕಾರ ರಚನೆಗೆ ಮುಂದಾಗಲು ಐಸೆನ್ಕೋಟ್ ಅವರಿಗೆ ಸಾಕಷ್ಟು ಬೆಂಬಲ ದೊರೆಯುತ್ತದೆಯೇ ಎಂಬುದು ಈಗ ಕುತೂಹಲ ಮೂಡಿಸಿದೆ.