ಕೊಲಂಬಿಯಾ | ವಿಮಾನ ದುರಂತ: ಸಂಸದ ಸೇರಿ 15 ಮಂದಿ ಮೃತ್ಯು
PC: x.com/PresstvExtra
ಕುಕುಟಾ, ಕೊಲಂಬಿಯಾ: ಸಂಸತ್ ಸದಸ್ಯ ಸೇರಿದಂತೆ 15 ಮಂದಿ ಪ್ರಮಾಣಿಸುತ್ತಿದ್ದ ವಿಮಾನ ಕೊಲಂಬಿಯಾ- ವೆನೆಝುವೆಲಾ ಗಡಿಯಲ್ಲಿ ಬುಧವಾರ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಕೊಲಂಬಿಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ಹೇಳಿದೆ.
ವಿಮಾನದಲ್ಲಿ 13 ಮಂದಿ ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿ ಇದ್ದರು. ಸರ್ಕಾರಿ ವಿಮಾನಯಾನ ಸಂಸ್ಥೆ ಸಟೇನಾಗೆ ಸೇರಿದ ಈ ವಿಮಾನ ಗಡಿಭಾಗದ ಕುಕುಟಾದಿಂದ ಟೇಕಾಫ್ ಆಗಿತ್ತು. ಪಕ್ಕದ ಒಕಾನೊ ಬಳಿ ಸಂಜೆ ಇಳಿಯಬೇಕಿದ್ದ ವಿಮಾನ ಲ್ಯಾಂಡಿಂಗ್‌ಗಿಂತ ಮೊದಲು ನಿಯಂತ್ರಣ ಗೋಪುರದ ಜತೆ ಸಂಪರ್ಕ ಕಡಿದುಕೊಂಡಿದೆ ಎಂದು ತಿಳಿದು ಬಂದಿದೆ.
"ವಿಮಾನದಲ್ಲಿದ್ದ ಯಾರೂ ಉಳಿದುಕೊಂಡಿಲ್ಲ" ಎಂದು ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕುಕುಟಾ ಪರ್ವತ ಪ್ರದೇಶವಾಗಿದ್ದು, ಸವಾಲುದಾಯಕ ಹವಾಮಾನವಿದೆ. ಜತೆಗೆ ಕಾಂಬೋಡಿಯಾದ ಅತಿದೊಡ್ಡ ಗೆರಿಲ್ಲಾ ಗುಂಪು ಎನಿಸಿದ ನ್ಯಾಷನಲ್ ಲಿಬರೇಶನ್ ಆರ್ಮಿಯ ನಿಯಂತ್ರಣದಲ್ಲಿದೆ. ವಿಮಾನದ ಅವಶೇಷಗಳನ್ನು ಪತ್ತೆ ಮಾಡಲು ಮತ್ತು ದೇಹಗಳ ಪತ್ತೆಗೆ ಸರ್ಕಾರ ವಾಯುಪಡೆಯನ್ನು ನಿಯೋಜಿಸಿದೆ. ಒಬ್ಬರು ಸಂಸತ್ ಸದಸ್ಯರು ಹಾಗೂ ಒಬ್ಬರು ಶಾಸನಸಭೆ ಅಭ್ಯರ್ಥಿ ಈ ವಿಮಾನದಲ್ಲಿದ್ದರು ಎಂದು ಹೇಳಲಾಗಿದೆ.
"ವಿಮಾನ ಅಪಘಾತದ ಬಗೆಗಿನ ಆತಂಕಕಾರಿ ಮಾಹಿತಿ ನಮಗೆ ಬಂದಿದೆ. ಇದರಲ್ಲಿ ನಮ್ಮ ಸಹೋದ್ಯೋಗಿ ಡಯಾಗೊನೆಸ್ ಕ್ವಿಂಟೆರೊ, ಕಾರ್ಲೋಸ್ ಸೆಲ್ಸೆಡೊ ಮತ್ತು ಅವರ ತಂಡದವರು ಪ್ರಯಾಣಿಸುತ್ತಿದ್ದರು" ಎಂದು ಸ್ಥಳೀಯ ಸಂಸದ ವಿಲ್ಮರ್ ಕರಿಲೊ ಹೇಳಿದ್ದಾರೆ.