ಚೀನಾದ ಬಾಹ್ಯಾಕಾಶ ನಿಲ್ದಾಣಕ್ಕೆ ಪಾಕ್ ಗಗನಯಾತ್ರಿ; ಶೆಂಝೌ-24ರಲ್ಲಿ ಪ್ರಯಾಣ ಬೆಳೆಸಲಿರುವ ಮೊದಲ ವಿದೇಶಿ ಪ್ರಜೆ
ಶೆಂಝೌ-23 ಬಾಹ್ಯಾಕಾಶ ನೌಕೆ (Photo: AP)
ಬೀಜಿಂಗ್: ಚೀನಾದ ಬಾಹ್ಯಾಕಾಶ ನಿಲ್ದಾಣಕ್ಕೆ ಮೊದಲ ಬಾರಿಗೆ ವಿದೇಶಿ ಗಗನಯಾತ್ರಿಯೊಬ್ಬರು ಭೇಟಿ ನೀಡಲಿದ್ದಾರೆ. ಈ ಐತಿಹಾಸಿಕ ಅವಕಾಶ ಪಾಕಿಸ್ತಾನದ ಗಗನಯಾತ್ರಿಗೆ ಒಲಿಯಲಿದ್ದು, ಚೀನಾದ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುವ ಮೊದಲ ವಿದೇಶಿ ಪ್ರಜೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ ಎಂದು ಚೀನಾದ ಸರ್ಕಾರಿ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.
ಶೆಂಝೌ-24 ಬಾಹ್ಯಾಕಾಶ ನೌಕೆಯ ತಂಡದೊಂದಿಗೆ ಪಾಕಿಸ್ತಾನದ ಗಗನಯಾತ್ರಿ ನಿಲ್ದಾಣಕ್ಕೆ ಪ್ರಯಾಣಿಸಲಿದ್ದಾರೆ. ಅಲ್ಲಿ ಅಲ್ಪಾವಧಿ ತಂಗಿದ ಬಳಿಕ ಶೆಂಝೌ-23 ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಮರಳಲಿದ್ದಾರೆ ಎಂದು ಚೀನಾ ಮಾನವಸಹಿತ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಆದರೆ, ಈ ಯಾನದ ಉಡಾವಣಾ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ ಎಂದು ಚೀನಾದ ಅಧಿಕೃತ ಸುದ್ದಿಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.
ಚೀನಾದ ಮಾನವಸಹಿತ ಬಾಹ್ಯಾಕಾಶ ಕಾರ್ಯಕ್ರಮದ ಇತಿಹಾಸದಲ್ಲೇ ಚೀನಾ ಮತ್ತು ವಿದೇಶಿ ಗಗನಯಾತ್ರಿಗಳು ಒಟ್ಟಿಗೆ ಬಾಹ್ಯಾಕಾಶಕ್ಕೆ ತೆರಳುತ್ತಿರುವ ಮೊದಲ ಜಂಟಿ ಯೋಜನೆ ಇದಾಗಿದೆ. ಈ ಮೂಲಕ ಚೀನಾ–ಪಾಕಿಸ್ತಾನ ಬಾಹ್ಯಾಕಾಶ ಸಹಕಾರ ಹೊಸ ಮೈಲಿಗಲ್ಲು ತಲುಪಲಿದೆ.
ಇಬ್ಬರಲ್ಲಿ ಒಬ್ಬರಿಗೆ ಅವಕಾಶ
ಈ ವರ್ಷದ ಆರಂಭದಲ್ಲಿ ಪಾಕಿಸ್ತಾನದ ಇಬ್ಬರು ಅಭ್ಯರ್ಥಿಗಳಾದ ಮುಹಮ್ಮದ್ ಝೀಶಾನ್ ಅಲಿ ಮತ್ತು ಖುರ್ರಂ ದಾವೂದ್ ಅವರು ಚೀನಾದ ಗಗನಯಾತ್ರಿಗಳೊಂದಿಗೆ ತರಬೇತಿ ಆರಂಭಿಸಿದ್ದರು. ಇವರಲ್ಲಿ ಒಬ್ಬರನ್ನು ಅಲ್ಪಾವಧಿಯ ಬಾಹ್ಯಾಕಾಶ ಯಾನಕ್ಕೆ ಪೇಲೋಡ್ ತಜ್ಞರಾಗಿ ಆಯ್ಕೆ ಮಾಡುವ ಉದ್ದೇಶ ಹೊಂದಲಾಗಿತ್ತು.
ತರಬೇತಿಯ ವೇಳೆ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಅಗತ್ಯವಾದ ಪ್ರಾಯೋಗಿಕ ಕೌಶಲಗಳ ಜೊತೆಗೆ ಚೀನೀ ಭಾಷೆಯಲ್ಲೂ ತರಬೇತಿ ನೀಡಲಾಗಿತ್ತು.
2025ರ ಫೆಬ್ರವರಿಯಲ್ಲಿ ಚೀನಾ ಮತ್ತು ಪಾಕಿಸ್ತಾನ ಮಾಡಿಕೊಂಡ ಒಪ್ಪಂದದ ಭಾಗವಾಗಿ ಈ ಬಾಹ್ಯಾಕಾಶ ಯಾನ ನಡೆಯಲಿದೆ.