×
Ad

ಫೆಲೆಸ್ತೀನ್ ಪರ ಪ್ರತಿಭಟನಾಕಾರರಿಂದ ಕೊಲಂಬಿಯಾ ವಿವಿ ಲೈಬ್ರೆರಿಗೆ ಮುತ್ತಿಗೆ: 80 ಮಂದಿ ಬಂಧನ

Update: 2025-05-08 20:44 IST

PC : NDTV 

ವಾಷಿಂಗ್ಟನ್: ಮಾಸ್ಕ್ ಧರಿಸಿದ್ದ ಫೆಲೆಸ್ತೀನ್ ಪರ ಪ್ರತಿಭಟನಾಕಾರರ ಗುಂಪೊಂದು ಬುಧವಾರ ಸಂಜೆ ನ್ಯೂಯಾರ್ಕ್‍ನ ಕೊಲಂಬಿಯಾ ವಿವಿಯ ಲೈಬ್ರೆರಿಯ ಒಳಗೆ ನುಗ್ಗಿದ್ದರಿಂದ ಆತಂಕದ ಪರಿಸ್ಥಿತಿ ನೆಲೆಸಿತ್ತು. ಬಳಿಕ ಸುಮಾರು 80 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಕೊಲಂಬಿಯಾ ವಿವಿಯ ಲೈಬ್ರೆರಿಗೆ ನುಗ್ಗಿದ ಅತಿಕ್ರಮಣಕಾರರ ವೀಸಾ ಸ್ಥಾನಮಾನವನ್ನು ಟ್ರಂಪ್ ಆಡಳಿತ ಮರು ಪರಿಶೀಲನೆ ನಡೆಸಲಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊ ಹೇಳಿದ್ದು `ನಮ್ಮ ಮಹಾನ್ ರಾಷ್ಟ್ರದಲ್ಲಿ ಹಮಾಸ್ ಪರ ಕೇಡಿಗಳಿಗೆ ಇನ್ನು ಮುಂದೆ ಸ್ವಾಗತವಿಲ್ಲ' ಎಂದು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಲೈಬ್ರೆರಿಯ ಎರಡನೇ ಮಹಡಿಯಲ್ಲಿದ್ದ `ಓದುವ ಕೊಠಡಿ'ಗೆ ನುಗ್ಗಿದ ತಂಡ ಮೇಜಿನ ಮೇಲೇರಿ ಡೋಲುಗಳನ್ನು ಬಾರಿಸುತ್ತಾ `ಗಾಝಾಕ್ಕಾಗಿ ಪ್ರತಿಭಟನೆ' `ಮುಕ್ತ ವಲಯ' ಮುಂತಾದ ಘೋಷಣೆಗಳುಳ್ಳ ಬ್ಯಾನರ್ ಗಳನ್ನು ಪ್ರದರ್ಶಿಸುತ್ತಿರುವ, ಲೈಬ್ರೆರಿಯ ಪುಸ್ತಕದ ಶೆಲ್ಫ್ ಗಳಲ್ಲಿ ಫೆಲೆಸ್ತೀನಿಯನ್ ಧ್ವಜಗಳನ್ನು ನೇತು ಹಾಕುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಪ್ರತಿಭಟನಾಕಾರರ ಗುಂಪು ಲೈಬ್ರೆರಿಯೊಳಗೆ ಪ್ರವೇಶಿಸದಂತೆ ತಡೆಯುವ ಪ್ರಯತ್ನದಲ್ಲಿ ಇಬ್ಬರು ಭದ್ರತಾ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News