ಇರಾಕ್‌ನಲ್ಲಿ ಸಲಿಂಗ ಸಂಬಂಧ ಕ್ರಿಮಿನಲ್ ಅಪರಾಧ | ಸಂಸತ್‌ನಲ್ಲಿ ವಿಧೇಯಕ ಅಂಗೀಕಾರ

Update: 2024-04-28 16:52 GMT

                                                                                            PC : NDTV 

ಬಾಗ್ದಾದ್: ಇರಾಕ್ ಸಂಸತ್ ಸಲಿಂಗ ಸಂಬಂಧವನ್ನು ಕ್ರಿಮಿನಲೀಕರಣಗೊಳಿಸುವ ವಿಧೇಯಕವನ್ನು ಶನಿವಾರ ಅಂಗೀಕರಿಸಿದ್ದು, 15 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ಆದರೆ ಸರಕಾರದ ಈ ನಡೆಯನ್ನು ಹಲವಾರು ಸಾಮಾಜಿಕ ಹೋರಾಟ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದು, ಮಾನವಹಕ್ಕುಗಳ ಮೇಲೆ ನಡೆದ ದಾಳಿ ಇದಾಗಿದೆಯೆಂದು ಬಣ್ಣಿಸಿವೆ.

1988ರ ವೇಶ್ಯಾವಾಟಿಕೆ ವಿರೋಧಿ ಕಾನೂನಿಗೆ ತಿದ್ದುಪಡಿಗಳನ್ನು ಮಾಡಲಾಗಿದ್ದು, ಲಿಂಗಪರಿವರ್ತನೆಗೊಂಡವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುವುದು. ಇರಾಕ್ ಸಂಸತ್‌ನಲ್ಲಿ ಇಂದು ವಿಧೇಯಕವನ್ನು ಅಂಗೀಕರಿಸಲಾಗಿತು. ಆಗ ಸದನದಲ್ಲಿ 329 ಸಂಸದರ ಪೈಕಿ 170 ಮಂದಿ ಮಾತ್ರ ಉಪಸ್ಥಿತರಿದ್ದರು.

ನೂತನ ತಿದ್ದುಪಡಿಗಳಿಂದಾಗಿ ಸಲಿಂಗ ಸಂಬಂಧ ಹೊಂದಿರುವ ವ್ಯಕ್ತಿಗಳಿಗೆ 10ರಿಂದ 15 ವರ್ಷ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ಇರಾಕ್‌ನಲ್ಲಿ ಸಲಿಂಗಿಗಳು ಹಾಗೂ ಲಿಂಗಾಂತರಿ ವ್ಯಕ್ತಿಗಳು ಆಗಾಗ್ಗೆ ದಾಳಿಗೊಳಗಾಗುತ್ತಿದ್ದಾರೆ ಹಾಗೂ ಸಾಮಾಜಿಕ ತಾರತಮ್ಯವನ್ನು ಅನುಭವಿಸುತ್ತಿದ್ದಾರೆ.

ಸಲಿಂಗ ಸಂಬಂಧವನ್ನು ಉತ್ತೇಜಿಸುವವಿಗೂ ಕನಿಷ್ಠ ಏಳು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಅಲ್ಲದೆ ಉದ್ದೇಶಪೂರ್ವಕವಾಗಿ ಸ್ತ್ರೀಯಂತೆ ವರ್ತಿಸುವ ಪುರುಷರಿಗೆ ಒಂದರಿಂದ ಮೂರು ವರ್ಷ ಜೈಲು ಶಿಕ್ಷೆ ವಿಧಿಸಹುದಾಗಿದೆ.

ಎಲ್‌ಜಿಬಿಟಿಗಳ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳಿಗೆ ತಿದ್ದುಪಡಿಗಳನ್ನು ಮಾಡಿರುವುದು ಮೂಲಭೂತ ಮಾನವಹಕ್ಕುಗಳ ಉಲ್ಲಂಘನೆಯಾಗಿದೆ ಹಾಗೂ ಈಗಾಗಲೇ ಪ್ರತಿದಿನವೂ ದಾಳಿಯ ಭೀತಿಯನ್ನು ಎದುರಿಸುತ್ತಿಇರುವ ಹಲವಾರು ಇರಾಕಿಯರ ಪ್ರಾಣಗಳನ್ನು ಈ ವಿಧೇಯಕವು ಅಪಾಯಕ್ಕೊಡ್ಡಿದೆ’ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಇರಾಕ್ ಸಂಶೋಧಕ ರಝಾವೆ ಸಾಲಿಹಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News